ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಯುವಕರು, ಕುಶಲಕರ್ಮಿಗಳು ಸ್ವಾವಲಂಬಿ ಮತ್ತು ಸ್ವಾಭಿಮಾನದ ಬದುಕು ರೂಢಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರಧಾನಿಯವರು ವಿಶ್ವಕರ್ಮ ಯೋಜನೆ ರೂಪಿಸಿದ್ದಾರೆ ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎಂಎಸ್‌ಎಂಇ ಡಿಎಫ್‌ಓ ಬೆಂಗಳೂರು ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಪಿಎಂ ವಿಶ್ವಕರ್ಮ ವಸ್ತುಪ್ರದರ್ಶನ ಮತ್ತು ವ್ಯಾಪಾರ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಕೇಂದ್ರ ಬಜೆಟ್‌ನಲ್ಲಿ13 ಸಾವಿರ ಕೋಟಿ ರು. ವಿಶ್ವಕರ್ಮ ಯೋಜನೆಗೆ ಮೀಸಲಿಡಲಾಗಿದ್ದು, ಇದರಡಿಯಲ್ಲಿ ಆಯ್ಕೆಯಾದವರಿಗೆ ಒಟ್ಟು 3 ಲಕ್ಷ ರು. ಸಾಲವನ್ನು ಶೇ.5 ಬಡ್ಡಿ ದರದಂತೆ ಕಂತಿನ ರೀತಿಯಲ್ಲಿ ನೀಡಲಾಗುತ್ತಿದೆ ಎಂದರು.
ವಿಶ್ವಕರ್ಮ ಯೋಜನೆಯಲ್ಲಿ ಕೆಲಸ ಮಾಡುವಂತಹ ವಿಶ್ವಕರ್ಮ ಬಂಧುಗಳಿಗೆ ಐಡಿ ಕಾರ್ಡ್ ಹಾಗೂ ಅವರ ಮನೆಗೆ ನೇರವಾಗಿ 40 ರಿಂದ 50 ಸಾವಿರ ರು. ಬೆಲೆಬಾಳುವ ಕಿಟ್ ವಿತರಿಸಲಾಗುತ್ತಿದೆ. ವಿಶ್ವಕರ್ಮ ಬಂಧುಗಳಿಗೆ ಐಡಿ ಕಾರ್ಡ್ ತುಂಬ ಮುಖ್ಯವಾಗಿದ್ದು, ಅದರಿಂದ ದೇಶದಲ್ಲಿ ಅವರನ್ನು ಗುರುತಿಸಲಾಗುತ್ತದೆ. ವಿಶ್ವಕರ್ಮ ಯೋಜನೆಯಡಿಯಲ್ಲಿ ರಾಜ್ಯದಲ್ಲಿ 22 ಲಕ್ಷ ಅರ್ಜಿಗಳು ಬಂದಿದ್ದು, 5,39,348 ಅರ್ಜಿಗಳ ಪರಿಶೀಲನೆ ಪೂರ್ಣಗೊಂಡು 1ಲಕ್ಷದ 25 ಸಾವಿರ ಜನರಿಗೆ ಸಾಲವನ್ನು ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಈ ಯೋಜನೆಯಿಂದ ಎಸ್‌ಸಿ, ಎಸ್‌ಟಿ, ರೈತ ಕುಟುಂಬಗಳು, ಕುಶಲಕರ್ಮಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೂ ಸಹ ವಿಶ್ವಕರ್ಮ ಯೋಜನೆಯಡಿಯಲ್ಲಿ ರು. 20 ರಿಂದ 50 ಸಾವಿರದವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ, ಅದರ ಸದುಪಯೋಗ ಪಡೆದುಕೊಂಡು ಉತ್ತಮ ಜೀವನ ನಿರ್ಮಿಸಿಕೊಳ್ಳಿ ಎಂದು ತಿಳಿಸಿದರು.
ವಿದಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಮಾತನಾಡಿ, ಯುವಜನತೆಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಬಗ್ಗೆ ತಿಳಿದು ಸದ್ಬಳಕೆ ಮಾಡಿಕೊಳ್ಳಬೇಕು. 22 ರಿಂದ 23 ವರ್ಷದ ಯುವಕರು ಪ್ರತಿ ತಿಂಗಳು ಸರಾಸರಿ 50 ರು. ಉಳಿತಾಯ ಮಾಡುತ್ತಾ ಹೋದರೆ ಮುಂದೆ ವಯಸ್ಸಾದಾಗ 3 ಸಾವಿರ ರು. ಪಿಂಚಣಿ ಬರುವಂತಹ ಯೋಜನೆಗಳಿವೆ. ಆರೋಗ್ಯ, ಶಿಕ್ಷಣ, ಮುಂತಾದ ಕ್ಷೇತ್ರಗಳಲ್ಲಿ ಜಿಲ್ಲೆಯಲ್ಲಿ ಬಹಳಷ್ಟು ಸುಧಾರಣೆ ಗಳಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಎಂಎಸ್‌ಎಂಇ ಡಿಎಫ್‌ಒ ಬೆಂಗಳೂರು ನಿರ್ದೇಶಕರಾದ ದೇವರಾಜ್ ಕೆ., ಎಂಎಸ್‌ಎಂಇ ಡಿಎಫ್‌ಒ ಸಹಾಯಕ ನಿರ್ದೇಶಕ ಎ.ಶಿವಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕರು ಹೆಚ್ ಸುರೇಶ್, ಎಂಎಸ್‌ಎಂಇ ಅಧಿಕಾರಿಯಾದ ಗೀತಾ ಮುಂತಾದವರು ಉಪಸ್ಥಿತರಿದ್ದರು.