ಆರ್ಥಿಕ ಅಭಿವೃದ್ಧಿಗೆ ವಿಶ್ವಕರ್ಮ ಯೋಜನೆ ಪೂರಕ

| Published : Dec 13 2023, 01:00 AM IST

ಸಾರಾಂಶ

ಕಾರ್ಯಾಗಾರ ಉದ್ಘಾಟಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗೀತಾ ರಮೇಶ್ ಮಾತನಾಡಿ, ಅಸಂಘಟಿತ ವಲಯದ ಭವಿಷ್ಯವನ್ನು ರೂಪಿಸುವಲ್ಲಿ ಈ ಯೋಜನೆ ಉಪಯುಕ್ತವಾಗಿದೆ. ಕರಕುಶಲಕರ್ಮಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಯೋಜನೆಗಳಿದ್ದು, ಅವುಗಳ ಸದುಪಯೋಗ ಅಗತ್ಯ ಎಂದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಬದುಕಿನಲ್ಲಿ ಆರ್ಥಿಕ ಚೈತನ್ಯವನ್ನು ತುಂಬಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೋಡಲ್ ಅಧಿಕಾರಿ ನಿತೀಶ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಟೈಲರ್ ಅಸೋಸಿಯೇಷನ್ ತಾಲೂಕು ಘಟಕದಿಂದ ಆಯೋಜಿಸಿದ್ದ ಪ್ರಧಾನಮಂತ್ರಿಗಳ ವಿಶ್ವಕರ್ಮ ಯೋಜನೆಯ ಮಾಹಿತಿ ಮತ್ತು ನೋಂದಣಿ ಕಾರ್ಯಾಗಾರದಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಉದ್ದೇಶಗಳನ್ನು ವಿವರಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಯೋಜನೆ ದರ್ಜಿ, ಬಡಗಿ, ಕಮ್ಮಾರ, ಚಮ್ಮಾರ ಮುಂತಾದ 18 ವೃತ್ತಿಗಳನ್ನು ಅವಲಂಬಿಸಿ ಬದುಕುತ್ತಿರುವ ವರ್ಗಗಳಿಗೆ ಸೌಲಭ್ಯ ನೀಡುವುದಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿಎಸ್‌ಸಿ ಕಾರ್ಯಕ್ರಮದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ಕಾರ್ಯದಲ್ಲಿ ನಿರತವಾಗಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ 56 ಸಿಎಸ್‌ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಗೀತಾ ರಮೇಶ್ ಮಾತನಾಡಿ, ಅಸಂಘಟಿತ ವಲಯದ ಭವಿಷ್ಯವನ್ನು ರೂಪಿಸುವಲ್ಲಿ ಈ ಯೋಜನೆ ಉಪಯುಕ್ತವಾಗಿದೆ. ಕರಕುಶಲಕರ್ಮಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ಸಾಕಷ್ಟು ಯೋಜನೆಗಳಿದ್ದು, ಅವುಗಳ ಸದುಪಯೋಗ ಅಗತ್ಯ ಎಂದರು.

ಟೈಲರಿಂಗ್ ಮಹಿಳೆಯರ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸುವ ವೃತ್ತಿಯಾಗಿದೆ. ಈ ವೃತ್ತಿಯಿಂದ ಮಹಿಳೆಯರು ಸ್ವಾವಲಂಬಿ ಜೀವನವನ್ನು ಸಾಗಿಸಬಹುದು ಎಂಬುದನ್ನು ಈಗಾಗಲೇ ಹಲವಾರು ಮಂದಿ ಸಾಧಿಸಿ ತೋರಿಸಿದ್ದಾರೆ ಎಂದರು.

ಸಭೆಯಲ್ಲಿ ರಾಜ್ಯ ಟೈಲರ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಸರ್ದಾರ್ ಶಫಿ, ತಾಲೂಕು ಕಾರ್ಯದರ್ಶಿ ಚಂದ್ರಶೇಖರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಲ್ಲಿಕಾ ಮುಂತಾದವರು ಉಪಸ್ಥಿತರಿದ್ದರು.

- - - -12ಟಿಟಿಎಚ್01:

ವಿಶ್ವಕರ್ಮ ಯೋಜನೆ ಮಾಹಿತಿ ಕಾರ್ಯಾಗಾರವನ್ನು ಪಪಂ ಅಧ್ಯಕ್ಷೆ ಗೀತಾ ರಮೇಶ್ ಉದ್ಘಾಟಿಸಿದರು.