ವಿಶ್ವಕರ್ಮ ಯೋಜನೆ: ವಿಳಂಬವಿಲ್ಲದೇ ಸಾಲ ನೀಡಲು ಸಚಿವೆ ನಿರ್ಮಲಾಗೆ ಕೋಟ ಮನವಿ

| Published : Dec 20 2024, 12:47 AM IST

ಸಾರಾಂಶ

ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಮಿಕ್ಕ ಆಸಕ್ತ ಬಡವರು ಯೋಜನೆಗೆ ಅರ್ಜಿ ಹಾಕಿದ್ದಾರೆ. ಪ್ರಸ್ತುತ 7 ಸಾವಿರ ಫಲಾನುಭವಿಗಳು ಈ ಯೋಜನೆಯಡಿ ತರಬೇತಿ ಪಡೆದಿದ್ದಾರೆ. ಅವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿಳಂಬವಿಲ್ಲದೆ ಸಾಲ ನೀಡಲು ನಿರ್ದೇಶನ ನೀಡಬೇಕು ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ದೇಶದ ಸಂಪ್ರದಾಯಿಕ ಕಸುಬುದಾರರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಕರ್ನಾಟಕ ರಾಜ್ಯದಲ್ಲಿ 11 ಲಕ್ಷಕ್ಕೂ ಮಿಕ್ಕ ಅರ್ಜಿ ಸಲ್ಲಿಸಿದ್ದು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 60 ಸಾವಿರಕ್ಕೂ ಮಿಕ್ಕ ಆಸಕ್ತ ಬಡವರು ಯೋಜನೆಗೆ ಅರ್ಜಿ ಹಾಕಿದ್ದಾರೆ. ಪ್ರಸ್ತುತ 7 ಸಾವಿರ ಫಲಾನುಭವಿಗಳು ಈ ಯೋಜನೆಯಡಿ ತರಬೇತಿ ಪಡೆದಿದ್ದಾರೆ. ಅವರಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿಳಂಬವಿಲ್ಲದೆ ಸಾಲ ನೀಡಲು ನಿರ್ದೇಶನ ನೀಡಬೇಕು ಎಂದು ಉಡುಪಿ - ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿದರು.ವಿಶ್ವಕರ್ಮ ಯೋಜನೆಗೆ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾತ್ರ ಉತ್ತಮವಾಗಿ ಸ್ಪಂದಿಸುತ್ತಿದ್ದರೂ ಇತರ ಕೆಲವು ಬ್ಯಾಂಕ್‌ಗಳಲ್ಲಿ ನಿಗದಿತ 250 ರು.ಗಿಂತ ಹೆಚ್ಚು ಮೊತ್ತದ ಅಫಿಡವಿಟ್‌ ಕೇಳುವುದು, ಕೋವಿಡ್ ಸಂಕಷ್ಟಕಾಲದಲ್ಲಿ ತೆಗೆದು ಸಾಲ ಪಾವತಿ ಮಾಡಿದ್ದರೂ ಸಿಬಿಲ್ ಅಂಕ ಇಲ್ಲ ಎಂದು ಸಾಲ ನಿರಾಕರಿಸುವುದು, ಕೆಲವೆಡೆ ಜಿಎಸ್‌ಟಿ ಬಿಲ್‌ಗಳನ್ನು ಕೇಳಿ ಸಾಲ ವಿಳಂಬ ಮಾಡುತಿದ್ದಾರೆ. ಇದರಿಂದ ಬಡ ಕುಲ ಕಸುಬುದಾರರು ಸಾಲಕ್ಕಾಗಿ ಕಾಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ವಿಳಂಬವಿಲ್ಲದೆ ಕೇಂದ್ರ ಸರ್ಕಾರದ ಭದ್ರತೆ ಹೊಂದಿರುವ ವಿಶ್ವಕರ್ಮ ಯೋಜನೆಯ ಅರ್ಜಿದಾರರಿಗೆ ಸಾಲ ನೀಡುವಂತೆ ನಿರ್ದೇಶನ ನೀಡಬೇಕು ಎಂದು ಸಂಸದ ಕೋಟ ಸಚಿವೆಗೆ ಮನವರಿಕೆ ಮಾಡಿದರು.ಮನವಿಯನ್ನು ಆಲಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಕ್ಷಣ ಕ್ರಮ ಜರುಗಿಸಿ ಸಾಲ ಸೌಲಭ್ಯ ನೀಡಲು ಬ್ಯಾಂಕ್‌ಗಳಿಗೆ ಆದೇಶಿಸುವುದಾಗಿ ತಿಳಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.