ವೇದ, ಉಪನಿಷತ್ತು ಹಾಗೂ ಪುರಾಣ ಕಾಲದಿಂದಲೂ ವಿಶ್ವಕರ್ಮ ಸಮುದಾಯ ಕಲೆ ಮತ್ತು ಶ್ರಮದ ಮೂಲಕ ದೇಶದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ನಿರ್ಮಾಣ, ಶಿಲ್ಪಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ.
ಕುಂದಗೋಳ:
ದೇವಾನುದೇವತೆಗಳಿಗೆ ಶಸ್ತ್ರಾಸ್ತ್ರಗಳನ್ನು ತಯಾರಿಸಿದ ಕೀರ್ತಿ ಹೊಂದಿರುವ ವಿಶ್ವಕರ್ಮರು ವಿಶ್ವಕ್ಕೇ ಗುರುವಾಗಿದ್ದಾರೆ. ಅವರ ಸಾಧನೆ ಹಾಗೂ ಕೀರ್ತಿ ಇಂದಿಗೂ ಅಜರಾಮರವಾಗಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಭಗವಾನ್ ಶ್ರೀವಿಶ್ವಕರ್ಮ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ವೇದ, ಉಪನಿಷತ್ತು ಹಾಗೂ ಪುರಾಣ ಕಾಲದಿಂದಲೂ ವಿಶ್ವಕರ್ಮ ಸಮುದಾಯ ಕಲೆ ಮತ್ತು ಶ್ರಮದ ಮೂಲಕ ದೇಶದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದೆ. ನಿರ್ಮಾಣ, ಶಿಲ್ಪಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮುದಾಯದ ಕೊಡುಗೆ ಮಹತ್ವದ್ದಾಗಿದೆ ಎಂದರು.ತಹಸೀಲ್ದಾರ್ ರಾಜು ಮಾವರಕರ ಮಾತನಾಡಿ, ಪುರಾಣ ಕಾಲದಲ್ಲೇ ಅತ್ಯಾಧುನಿಕ ನಗರ ನಿರ್ಮಾಣ ಹಾಗೂ ವಾಸ್ತುಶಿಲ್ಪಕ್ಕೆ ಬುನಾದಿ ಹಾಕಿದ ದೇವಶಿಲ್ಪಿ ವಿಶ್ವಕರ್ಮರು ಆಧುನಿಕ ತಂತ್ರಜ್ಞಾನಕ್ಕೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಸಂಕ್ರಪ್ಪ ಕಮ್ಮಾರ ಮಾತನಾಡಿದರು. ಇದೇ ವೇಳೆ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಶ್ವಕರ್ಮ ಸಮಾಜದ ಸಾಧಕರನ್ನು ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು.ಇದೇ ವೇಳೆ ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಕಲ್ಪಿಸುವಂತೆ ಶಾಸಕ ಎಂ.ಆರ್. ಪಾಟೀಲ ಹಾಗೂ ತಹಸೀಲ್ದಾರ್ ರಾಜು ಮಾವರಕರ ಅವರಿಗೆ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.
ಎಂ.ಎಚ್. ಪತ್ತಾರ, ಮಹಾರುದ್ರಪ್ಪ ಅರ್ಕಸಾಲಿ, ಪಿ. ಬಸವರಾಜ ಪತ್ತಾರ, ಈಶ್ವರಪ್ಪ ಅರ್ಕಸಾಲಿ, ಈರಣ್ಣ ಸೋನಾರ, ಆನಂದ ಕಮ್ಮಾರ, ವಿಶ್ವನಾಥ ಸೋನಾರ, ಎಂ. ಬಡಿಗೇರ, ಶಂಕ್ರವ್ವ ಸುತಾರ, ದೇವಕ್ಕ ಪತ್ತಾರ, ಎಂ.ಕೆ. ಬಡಿಗೇರ, ಮಾಲತೇಶ ಬಡಿಗೇರ ಸೇರಿದಂತೆ ಹಲವರಿದ್ದರು.