ಸಾರಾಂಶ
ಸೊರಬ: ಲೋಕಕಲ್ಯಾಣಕ್ಕಾಗಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ಜೂನ್ ೧ರಂದು ತಾಲೂಕಿನ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ವಿಶ್ವಶಾಂತಿ ಮಹಾಯಾಗ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಎನ್‌ಡಿಪಿ ತಾಲೂಕು ಅಧ್ಯಕ್ಷ ರಾಜು ಹಿರಿಯಾವಲಿ ತಿಳಿಸಿದರು.
ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ವಿಶ್ವದಲ್ಲಿ ಶಾಂತಿ ನೆಲೆಸಬೇಕು ಮತ್ತು ದೇಶದಲ್ಲಿ ಸಮೃದ್ಧ ಜೀವನ ಪ್ರತಿಯೊಬ್ಬರದ್ದಾಗಬೇಕು. ಇದಕ್ಕಾಗಿ ದೈವ ಕೃಪೆ, ಅನುಗ್ರಹ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಶಕ್ತಿ ದೇವತೆ ಶ್ರೀ ರೇಣುಕಾಂಬೆಯ ಸನ್ನಿಧಿಯಲ್ಲಿ ವಿಶ್ವಶಾಂತಿ ಮಹಾಯಾಗ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಸೊರಬ, ಭದ್ರಾವತಿ, ಸಾಗರ, ಹೊಸನಗರ, ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಭಕ್ತ ವೃಂದ ಭಾಗವಹಿಸುವ ನಿರೀಕ್ಷೆ ಇದೆ ಎಂದ ಅವರು, ಇದು ಯಾವುದೇ ಒಂದು ವರ್ಗ, ಜಾತಿಗೆ ಸೇರಿದ ಕಾರ್ಯಕ್ರಮವಲ್ಲ. ಹಾಗಾಗಿ ಸಮಾಜದ ಪ್ರತಿಯೊಂದು ಕುಟುಂಬದ ಸದಸ್ಯರು ಭಾಗವಹಿಸಬಹುದು ಎಂದು ಕೋರಿದರು.
ಧರ್ಮಸ್ಥಳ ಶ್ರೀರಾಮ ಕ್ಷೇತ್ರ ಮಹಾ ಸಂಸ್ಥಾನದ ಜಗದ್ಗುರು ಪೀಠದ ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ.ರಾಮಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸುವರು. ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೆದಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.ಬಿಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ಎಸ್.ಡಿ.ನಾಯ್ಕ ಹುಲ್ತಿಕೊಪ್ಪ ಮಾತನಾಡಿ, ಈಡಿಗ, ಬಿಲ್ಲವ, ನಾಮಧಾರಿ, ಧೀವರು, ತಿಯಾ ಸೇರಿ ೨೬ ಪಂಗಡಗಳಿದ್ದು, ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಸಮಾಜ ಸೇವೆಗಾಗಿಯೇ ಅಸ್ಥಿತ್ವ ಬಂದಿದೆ. ಈ ಮೂಲಕ ಸರ್ವ ಧರ್ಮಗಳ ಪರಿಪಾಲನೆ ಕೂಡಾ ನಡೆಯುತ್ತಿದೆ. ಆದ್ದರಿಂದ ಚಂದ್ರಗುತ್ತಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ವಿಶ್ವಶಾಂತ ಮಹಾಯಾಗಕ್ಕೆ ಪ್ರತಿಯೊಬ್ಬರೂ ತಪ್ಪದೇ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ಬಿಎಸ್‌ಎನ್‌ಡಿಪಿ ಜಿಲ್ಲಾ ಉಸ್ತುವಾರಿ ತ್ಯಾಗರಾಜ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಲೋಕೇಶ್, ಉಪಾಧ್ಯಕ್ಷೆ ಅನಸೂಯ ಗಣಪತಿ ನಾಯ್ಕ, ತಾಲೂಕು ಮಹಿಳಾ ಅಧ್ಯಕ್ಷೆ ಸುಮಾ ಇಂಡುವಳ್ಳಿ, ಉಪಾಧ್ಯಕ್ಷೆ ಶಶಿಕಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ಯಾಮಲಾ ಚಂದ್ರಶೇಖರ, ತಾಲೂಕು ಪ್ರಧಾನ ಕಾರ್ಯದರ್ಶಿ ರೇಖಾ, ಮಮತಾ ಮತ್ತಿತರರಿದ್ದರು.