ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಕಣ್ಣಿನ ಆರೋಗ್ಯವು ಪ್ರತಿಯೊಬ್ಬರಿಗೂ ಪ್ರಾಮುಖ್ಯವಾಗಿದ್ದು, ನಿಯಮಿತವಾಗಿ ಕಣ್ಣುಗಳನ್ನು ಪರೀಕ್ಷಿಸಿ ರಕ್ಷಿಸಿಕೊಳ್ಳಬೇಕು ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ತಿಳಿಸಿದ್ದಾರೆ.ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಆಶಾಕಿರಣ ದೃಷ್ಟಿ ಕೇಂದ್ರದಲ್ಲಿ ಉಚಿತ ಕನ್ನಡಕ ವಿತರಿಸಿ ಅವರು ಮಾತನಾಡಿದರು. ದೃಷ್ಟಿಯು ಪ್ರತಿಯೊಬ್ಬ ಮಾನವನ ಅತ್ಯುನ್ನತ ಸೃಷ್ಟಿಯಾಗಿದ್ದು, ಕಣ್ಣಿನ ಆರೋಗ್ಯದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ಹೇಳಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲ ನಗರ, ಗ್ರಾಮೀಣ ಪ್ರದೇಶಗಳು ಮತ್ತು ಶಾಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಸಮೀಕ್ಷೆ ನಡೆಸಿ ದೃಷ್ಟಿ ದೋಷ ಉಳ್ಳವರ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.ನೇತ್ರ ಸಮಸ್ಯೆ ಉಳ್ಳವರಿಗೆ ಆರೋಗ್ಯ ಕೇಂದ್ರಗಳಲ್ಲಿ ನೇತ್ರ ತಜ್ಞರು ತಪಾಸಣೆ ಮಾಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 1832 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ. ಜಿಲ್ಲೆಯ 13 ಕೇಂದ್ರಗಳಲ್ಲಿ ನೇತ್ರ ತಪಾಸಣೆ ಮಾಡಲಾಗಿದೆ. ಎ.ಪಿ.ಎಲ್, ಬಿ.ಪಿ.ಎಲ್ ಎಂಬ ಭೇದವಿಲ್ಲದೆ ಎಲ್ಲರಿಗೂ ತಪಾಸಣೆ ಮಾಡಿ ಉಚಿತವಾಗಿ ಕನ್ನಡಕ ವಿತರಿಸಲಾಗಿದೆ ಎಂದು ಅವರು ಹೇಳಿದರು.ವೆನ್‍ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್ ಮಾತನಾಡಿ, ಸಕಾಲದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಕಣ್ಣಿನ ಸಮಸ್ಯೆಗಳನ್ನು ಪರಿಹರಿಸಬಹುದು ಎಂದರು.ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ ಡಾ. ಸುದರ್ಶನ್, ವೆನ್‍ಲಾಕ್ ನೇತ್ರ ತಜ್ಞೆ ಡಾ. ಅನಿತಾ ಮತ್ತಿತರರು ಇದ್ದರು.