ದಾರ್ಶನಿಕರು ಜಾತಿ ಸೂಚಕರಲ್ಲ, ಜಾಗೃತಿ ಸೂಚಕರು: ಡಾ. ಬಸವ ಮಾಚಿದೇವ ಸ್ವಾಮೀಜಿ

| Published : Feb 02 2025, 11:46 PM IST

ದಾರ್ಶನಿಕರು ಜಾತಿ ಸೂಚಕರಲ್ಲ, ಜಾಗೃತಿ ಸೂಚಕರು: ಡಾ. ಬಸವ ಮಾಚಿದೇವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿವಾಳ ಮಾಚಿದೇವರು, ನಾರಾಯಣಗುರು, ಕನಕದಾಸರು, ವಾಲ್ಮೀಕಿ, ಬಸವಣ್ಣ, ಅಂಬೇಡ್ಕರ್‌ ಇವರು ಜಾತಿ ಸೂಚಕ ಶರಣರಲ್ಲ. ಜಾಗೃತಿಯ ಸೂಚಕರು ಎಂದು ಹೇಳಬೇಕಾಗಿದೆ.

ಶಿರಸಿ: ದಾರ್ಶನಿಕರು ಸರ್ವ ಸಮಾಜದ ಸಮಾನತೆಯ ಪುರುಷರಾಗಿದ್ದರು. ದಾರ್ಶನಿಕರು ಜಾತಿ ಸೂಚಕರಲ್ಲ. ಬದಲಾಗಿ ಜಾಗೃತಿ ಸೂಚಕರು ಎಂದು ಚಿತ್ರದುರ್ಗದ ಡಾ. ಬಸವ ಮಾಚಿದೇವ ಸ್ವಾಮೀಜಿ ನುಡಿದರು.

ನಗರದ ಟಿಎಸ್‌ಎಸ್ ರಸ್ತೆಯ ಕೃಷಿ ಭಾರತೀ ಸಮೀಪ ಶಿರಸಿ ತಾಲೂಕು ಮಡಿವಾಳ ಸಮಾಜದ ಸಂಘದಿಂದ ನೂತನವಾಗಿ ನಿರ್ಮಿಸಲಾದ ಮಡಿವಾಳ ಮಾಚಿದೇವ ಸಭಾಭವನ ಉದ್ಘಾಟಿಸಿ, ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.

ಮಡಿವಾಳ ಮಾಚಿದೇವರು, ನಾರಾಯಣಗುರು, ಕನಕದಾಸರು, ವಾಲ್ಮೀಕಿ, ಬಸವಣ್ಣ, ಅಂಬೇಡ್ಕರ್‌ ಇವರು ಜಾತಿ ಸೂಚಕ ಶರಣರಲ್ಲ. ಜಾಗೃತಿಯ ಸೂಚಕರು ಎಂದು ಹೇಳಬೇಕಾಗಿದೆ. ಜಾಗೃತಿಗೋಸ್ಕರ ಹುಟ್ಟಿದವರು. ಇಲ್ಲಿ ಜಾತಿ ನೆಪ ಮಾತ್ರ. ಜಾತಿ ಮೇಲಲ್ಲ ಕೀಳಲ್ಲ. ನಾವೆಲ್ಲರೂ ಮಾನವರು. ಮಾನವರು ಸಹಜವಾಗಿ ದೇವ ಮಾನವನಾಗಲು ಅವಕಾಶವಿದೆ. ದಾರ್ಶಕನಿಕರು, ಸಾಧು- ಸಂತರು, ಮಹಾತ್ಮರು ಮಾನವರಾಗಿ ಜನ್ಮ ತಾಳಿದರು ಎಂದರು.

ಸೋಲಾರ್ ಎನರ್ಜಿ ಕಾರ್ಪೊರೇಶನ್ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಈಶ್ವರ ಮಡಿವಾಳ, ಬದಲಾದ ಪರಿಸ್ಥಿತಿಯಲ್ಲಿ ಸಮುದಾಯ ಸಂಘಟನೆಗಳು ತಮ್ಮನ್ನು ಬದಲಾಯಿಸಿಕೊಳ್ಳಬೇಕು. ದೇಶದಲ್ಲಿ ಶಿಕ್ಷಣ, ರಾಜಕೀಯ ಪರಿಸ್ಥಿತಿಗಳು ಬಹಳ ಬದಲಾವಣೆಗೊಂಡಿದ್ದು, ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸ್ಪರ್ಧೆ ನೀಡಬೇಕು. ಕೇವಲ ಅಂಕಕ್ಕಾಗಿ ಪ್ರಯತ್ನ ಪಡದೇ ವೃತ್ತಿಪರ ಶಿಕ್ಷಣಕ್ಕೆ ಒತ್ತು ನೀಡಬೇಕು. ಕೋಚಿಂಗ್ ಸೆಂಟರ್‌ಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ, ಧ.ಗ್ರಾ. ಯೋಜನಾಧಿಕಾರಿ ರಾಘವೇಂದ್ರ ನಾಯ್ಕ, ಮಡಿವಾಳ ಸಮಾಜ ಸಂಘದ ಗೌರವಾಧ್ಯಕ್ಷ ಜಿ.ವಿ. ಮಡಿವಾಳ, ನಗರಸಭೆ ಸದಸ್ಯೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ನಿವೃತ್ತ ಜಿಲ್ಲಾ ಆಯುಷ್ ಆರೋಗ್ಯಾಧಿಕಾರಿ ಡಾ. ಸಂಗಮೇಶ ಕಲಹಾಳ, ತೋಟಗಾರಿಕೆ ಇಲಾಖೆಯ ಡೆಪ್ಯೂಟಿ ಡೈರೆಕ್ಟರ್ ಡಾ. ರಾಮಚಂದ್ರ ಮಡಿವಾಳ, ಗ್ರೇಡ್- ೨ ತಹಸೀಲ್ದಾರ್‌ ರಮೇಶ ಹೆಗಡೆ, ಮಡಿವಾಳ ಸಮಾಜ ಸಂಘದ ಅಧ್ಯಕ್ಷ ಐ.ಜಿ. ಗಿಡ್ಡನ್, ಉಪಾಧ್ಯಕ್ಷ ನರಸಿಂಹ ಮಡಿವಾಳ, ತಾರಾ ಮಡಿವಾಳ, ಸಮಾಜದ ಮುಖಂಡ ನಾಗರಾಜ ಮಡಿವಾಳ ಮತ್ತಿತರರು ಇದ್ದರು.

ಮಡಿವಾಳ ಸಮಾಜ ಸಂಘದ ಉಪಾಧ್ಯಕ್ಷ ಅಣ್ಣಪ್ಪ ಶಿರ್ಸಿಕರ ಸ್ವಾಗತಿಸಿದರು. ಮಡಿವಾಳ ಸಮುದಾಯದ ಮಾತೆಯರು ಪ್ರಾರ್ಥಿಸಿದರು. ಸ್ಫೂರ್ತಿ ಮಡಿವಾಳ ಭರತನಾಟ್ಯ ನೃತ್ಯದ ಮೂಲಕ ಸ್ವಾಗತಿಸಿದರು.

ಪ್ರಧಾನ ಕಾರ್ಯದರ್ಶಿ ಮೋಹನ ಮಡಿವಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗ್ಗೆ ಡಾ. ಬಸವ ಮಾಚಿದೇವ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ನಗರದ ಮಾರಿಕಾಂಬಾ ದೇವಾಲಯದಿಂದ ನೂತನ ಸಮುದಾಯ ಭವನದ ವರೆಗೆ ನಡೆದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.