ಡಿ. ದೇವರಾಜ ಅರಸು ಅವರು ರಾಜ್ಯದಲ್ಲಿ ಹೊಸ ಕ್ರಾಂತಿಯನ್ನುಂಟುಮಾಡಿ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.
ಮಡಿಕೇರಿ: ಡಿ. ದೇವರಾಜ ಅರಸು ಅವರು ರಾಜ್ಯದಲ್ಲಿ ಹೊಸ ಕ್ರಾಂತಿಯನ್ನುಂಟುಮಾಡಿ ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾಡಳಿತ, ಜಿಪಂ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಮಾಜಿ ಮುಖ್ಯಮಂತ್ರಿ ದಿ.ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಡಿ. ದೇವರಾಜ ಅರಸು ‘ಉಳುವವನೇ ಹೊಳದೊಡೆಯ’ ಕಾಯ್ದೆ ಜಾರಿಗೊಳಿಸುವ ಮೂಲಕ ಭೂಮಿಯ ಹಕ್ಕನ್ನು ಕೊಡಿಸಿ ಬಡವರಿಗೆ ಬೆಳಕಾಗಿ ಕಂಡರು ಎಂದು ಜಿಲ್ಲಾಧಿಕಾರಿ ವರ್ಣಿಸಿದರು.
ಮೈಸೂರು ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಮಾತನಾಡಿ, ದೇವರಾಜ ಅರಸು ಅವರು ಸಾಮಾಜಿಕ ಕ್ರಾಂತಿಯ ಹರಿಕಾರರಾಗಿದ್ದು, ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಮ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಿದ್ದಾರೆ. ಸಮಾಜದ ಕಟ್ಟ ಕಡೆಯವರು ಸಹ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬ ಉದ್ದೇಶವನ್ನು ಹೊಂದಿದ್ದ ಅಪರೂಪದ ಮಹಾನ್ ಚೇತನ ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾತನಾಡಿ, ವಿದ್ಯಾರ್ಥಿಗಳು ಇತರರನ್ನು ಅನುಕರಿಸುವ ಬದಲು, ತಮ್ಮ ಆಸಕ್ತಿ ಹಾಗೂ ಸಾಮಥ್ರ್ಯವನ್ನು ಅರಿತುಕೊಂಡು ಜೀವನದಲ್ಲಿ ಮುಂದುವರಿಯಬೇಕು ಎಂದರು.ಕಸಾಪ ಜಿಲ್ಲಾ ಘಟಕ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಎಲ್ಲ ವಿರೋಧಗಳ ನಡುವೆಯೂ ಮಹತ್ವದ ಅಭಿವೃದ್ಧಿ ಹಾಗೂ ಸಾಮಾಜಿಕ ಸುಧಾರಣಾ ಕಾರ್ಯಕ್ರಮ ಜಾರಿಗೊಳಿಸಿ ಸಮಾಜದ ಬದಲಾವಣೆಗೆ ಕಾರಣರಾದರು ಎಂದು ಅಭಿಪ್ರಾಯಪಟ್ಟರು.ಜಿಪಂ ಸಿಇಒ ಆನಂದ್ ಪ್ರಕಾಶ್ ಮೀನಾ, ಪ್ರಮುಖರಾದ ಮೇದಪ್ಪ, ತಹಸೀಲ್ದಾರ್ ಶ್ರೀಧರ, ಜಿಲ್ಲಾ ಖಜಾನಾಧಿಕಾರಿ ರಘುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಗಣಪತಿ, ಡಿಎಸ್‍ಎಸ್ ಜಿಲ್ಲಾ ಸಂಚಾಲಕ ದಿವಾಕರ, ಲೋಕೋಪಯೋಗಿ ಇಲಾಖೆ ಇಇ ಪ್ರಭು, ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಎಂ. ಯತ್ನಟ್ಟಿ, ಜಿಪಂ ಎಂಜಿನಿಯರ್ ನಾಯಕ್, ಜಯಣ್ಣ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಲೋಕೇಶ್, ಪ್ರಕಾಶ್, ಭಾರತಿ, ಚಂದ್ರು, ಬಿಸಿಎಂ ಇಲಾಖೆ ವ್ಯವಸ್ಥಾಪಕ ಶಿವಶಂಕರ ಮತ್ತಿತರರು ಇದ್ದರು.ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶೇಖರ್ ಸ್ವಾಗತಿಸಿದರು. ಪವನ್ ಕುಮಾರ್ ನಿರೂಪಿಸಿದರು. ಆಲೂರು ಸಿದ್ದಾಪುರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ತಾಲೂಕು ಅಧಿಕಾರಿ ಶ್ರೀಕಾಂತ್ ವಂದಿಸಿದರು.
