ಪ್ರತಿ ತಾಲೂಕಿಗೂ ಭೇಟಿ ನೀಡಿ ಸಮಸ್ಯೆ ಸ್ಪಂದನೆ: ಜೆ.ಜೆ.ತಿರುಮಲೇಶ್‌

| Published : Oct 12 2023, 12:00 AM IST

ಸಾರಾಂಶ

ಪ್ರತಿ ತಾಲೂಕಿಗೂ ಭೇಟಿ ನೀಡಿ ಸಮಸ್ಯೆ ಸ್ಪಂದನೆ: ಜೆ.ಜೆ.ತಿರುಮಲೇಶ್‌
ತಾಲೂಕು ಕಚೇರಿಯಲ್ಲಿ ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ. ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಇನ್ನು ಮುಂದೆ ಎಲ್ಲಾ ತಾಲೂಕಿಗೂ ಪ್ರತಿ ತಿಂಗಳು ಲೋಕಾಯುಕ್ತರು ಭೇಟಿ ನೀಡಿ ಜನ ಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆ ಕೇಳಲಾಗುವುದು ಎಂದು ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್‌ಪಿ. ಜೆ.ಜೆ.ತಿರುಮಲೇಶ್ ತಿಳಿಸಿದರು. ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಜನ ಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಲಂಚ ಕೇಳುವುದು. ಕೆಲಸ ಮಾಡಿ ಕೊಡದೆ ತೊಂದರೆ ನೀಡಿದರೆ ಲೋಕಾಯುಕ್ತರಿಗೆ ದೂರು ಸಲ್ಲಿಸಬಹುದು. ಈ ಹಿಂದೆ ಸ್ಥಗಿತವಾಗಿದ್ದ ಲೋಕಾಯುಕ್ತ ಕಳೆದ 1 ವರ್ಷದಿಂದ ಮತ್ತೆ ಪ್ರಾರಂಭವಾಗಿದೆ. ಲೋಕಾಯುಕ್ತ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಲಿದೆ ಎಂದರು. ಸಾರ್ವಜನಿಕರು ಬಾಯಿ ಮಾತಿನಿಂದ ಆರೋಪ ಮಾಡಿದರೆ ಪ್ರಯೋಜನವಿಲ್ಲ. ಲೋಕಾಯುಕ್ತಕ್ಕೆ ದೂರು ಸಲ್ಲಿಸಬೇಕಾದರೆ ನಿಗದಿತ ಫಾಂರನಲ್ಲಿ ದೂರು ನೀಡಬೇಕು. ದೂರಿನ ಜೊತೆ ಸೂಕ್ತ ದಾಖಲೆಯೂ ನೀಡ ಬೇಕು. ದೂರುಗಳನ್ನು ಪರಿಶೀಲಿಸಿ ಮುಂದಿನ ತಿಂಗಳು ಮತ್ತೆ ಬಂದಾಗ ಸೂಕ್ತ ಪರಿಹಾರ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದರು. ಲೋಕಾಯುಕ್ತ ಪೊಲೀಸ್ ಇನ್ಸಪೆಕ್ಟರ್ ಎ.ಜಿ.ರಾಥೋಡ್ ಮಾತನಾಡಿ, ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳನ್ನು ಸೇರಿಸಿಕೊಂಡು ಜನ ಸಂಪರ್ಕ ಸಭೆ ಮಾಡುತ್ತಿದ್ದೇವೆ. ಸಾರ್ವಜನಿಕರ ಅರ್ಜಿ ಪರಿಶೀಲನೆ ಮಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಆಡಳಿತದಲ್ಲಿ ಸುಧಾರಣೆ ಮಾಡುವುದು ಲೋಕಾಯುಕ್ತದ ಗುರಿ. ಸಾರ್ವಜನಿಕರು ಜನ ಸಂಪರ್ಕ ಸಭೆ ಅಥವಾ ಜಿಲ್ಲಾ ಲೋಕಾಯುಕ್ತ ಕಚೇರಿ ಹಾಗೂ ಆನ್ ಲೈನ್ ನಲ್ಲೂ ದೂರು ನೀಡಲು ಅವಕಾಶವಿದೆ. ಎಲ್ಲಾ ಸರ್ಕಾರಿ ಕಚೇರಿ ಅಧಿಕಾರಿಗಳು ಪ್ರಾಮಾಣಿಕತೆ ಯಿಂದ ಕೆಲಸ ಮಾಡಬೇಕು ಎಂಬುದೇ ಲೋಕಾಯುಕ್ತರ ಉದ್ದೇಶ ಎಂದರು.ಸಭೆಯಲ್ಲಿ ತಹಸೀಲ್ದಾರ್ ತನುಜ ಟಿ.ಸವದತ್ತಿ ಉಪಸ್ಥಿತರಿದ್ದರು. ಸಾರ್ವಜನಿಕರ ದೂರು ಸಲ್ಲಿಕೆ: ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಜನ ಸಂಗ್ರಾಮ ಪರಿಷತ್‌ ಸದಸ್ಯ ವಾಸುದೇವಕೋಟ್ಯಾನ್‌, ವಾಲ್ಮೀಕಿ ಸಂಘದ ಶೃಂಗೇರಿ ಕ್ಷೇತ್ರ ಅಧ್ಯಕ್ಷ ಎ.ಸಿ.ಶ್ರೀನಿವಾಸ್, ಬಗರ್‌ ಹುಕಂ ಸಮಿತಿ ಸದಸ್ಯ ಮಂಜುನಾಥ್‌, ಮುಖಂಡ ಎ.ಇ.ಚೆರಿಯನ್‌ , ನಾಗಲಾಪುರದ ಸುಧಾಕರ್,ಡಿಎಸ್‌ಎಸ್‌ ಮುಖಂಡ ಡಿ.ರಾಮು, ಗ್ರಾಪಂ ಮಾಜಿ ಸದಸ್ಯ ಶೆಟ್ಟಿ ಕೊಪ್ಪ ಮಹೇಶ್‌ ಮುಂತಾದವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ಲೋಕಾಯುಕ್ತರಿಗೆ ಬಂದ ಬಹುತೇಕ ಅರ್ಜಿಗಳಲ್ಲಿ ತಾಲೂಕು ಕಚೇರಿಯಲ್ಲಿ ನಮ್ಮ ಕಡತ ಕಳುವಾಗಿದೆ ಎಂದು ದೂರಿದ್ದಾರೆ. ಕರ್ನಾಟಕ ಪಬ್ಲಿಕ್‌ ಸ್ಕೂಲಿಗೆ ಭೂಧಾನದಿಂದ ಬಂದಿದ್ದ ಭೂಮಿಯನ್ನು ಕೆಲವರು ಒತ್ತುವರಿ ಮಾಡಿದ್ದು ಇದನ್ನು ಬಿಡಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ತಾಲೂಕಿನ ಸಾವಿರಾರು ಎಕ್ರೆ ಕಂದಾಯ ಭೂಮಿ 1930 ರಂತೆ ಅರಣ್ಯ ಎಂದು ದಾಖಲಾಗಿದೆ. ಇದರಿಂದ ಕೃಷಿ ಮಾಡಿಕೊಂಡು ಬಂದಿದ್ದ ರೈತರಿಗೆ ತೊಂದರೆಯಾಗಿದ್ದು ಇದನ್ನು ಬಗೆಹರಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ನಾಗಲಾಪುರ ಗ್ರಾಮದಲ್ಲಿ ಹಿಂದೂ ರುದ್ರಭೂಮಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದೂರುಗಳಲ್ಲಿ ತಿಳಿಸಿದ್ದಾರೆ. ---- ಬಾಕ್ಸ್--- ತಹಸೀಲ್ದಾರ್‌ಗೆ ಸೂಚನೆ ತಾಲೂಕು ಕಚೇರಿಯಲ್ಲಿ ಕಡತ ಕಾಣೆಯಾಗುತ್ತಿದೆ ಸಾರ್ವಜನಿಕರು ದೂರಿಗೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತ ಜಿಲ್ಲಾ ಡಿವೈಎಸ್ಪಿ. ತಿರುಮಲೇಶ್, ತಾಲೂಕು ಕಚೇರಿಯಲ್ಲಿ ಕಡತ ಇರಲೇಬೇಕು. ಕಾಣೆಯಾಗಿದ್ದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಬೇಕು ಎಂದು ತಹಸೀಲ್ದಾರ್‌ ಅವರಿಗೆ ಸೂಚಿಸಿದರು.