ಇಂದು ಗುರುಸಿದ್ದೇಶ್ವರ ಬಸವ ದೇವಸ್ಥಾನ ಸಂಪ್ರೋಕ್ಷಣೆ

| Published : Feb 21 2025, 12:45 AM IST

ಸಾರಾಂಶ

ನಟ, ನಿರ್ಮಾಪಕ ಗಣೇಶರಾವ್ ಕೇಸರ್ಕರ್ ಅವರು ತಮ್ಮ ಹುಟ್ಟಿದ ಊರಿನ ಶಾಲಾಭಿವೃದ್ಧಿಗಾಗಿ ಈಗಾಗಲೇ ಅನೇಕ ಪರಿಕರ, ಆಟೋಪಕರಣಗಳನ್ನು ಕೊಡುಗೆಯಾಗಿ ನೀಡಿದ್ದು ಅಲ್ಲದೆ ಸರ್ಕಾರಿ ಶಾಲೆ ದತ್ತು ಪಡೆದಿದ್ದಾರೆ.

ಎನ್.ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ವ್ಯಕ್ತಿ ಬೆಳೆದಂತೆಲ್ಲಾ ಹುಟ್ಟಿದ ಊರು, ಬೆಳೆದು ಬಂದ ಹಾದಿಯನ್ನು ಮರೆತು ವ್ಯವಹಾರದತ್ತ ಹೆಚ್ಚು ಕೇಂದ್ರಿಕೃತಗೊಳುತ್ತಿರುವ ಅನೇಕ ಪ್ರಸಂಗಗಳ ನಡುವೆಯೂ ಇಲ್ಲೊಬ್ಬ ಚಲನಚಿತ್ರ ನಟ, ನಿರ್ಮಾಪಕ ಗಣೇಶರಾವ್ ಕೇಸರ್ಕರ್ ಅವರು ತಮ್ಮ ಹುಟ್ಟಿದ ಊರಿನ ಶಾಲಾಭಿವೃದ್ಧಿಗಾಗಿ ಈಗಾಗಲೇ ಅನೇಕ ಪರಿಕರ, ಆಟೋಪಕರಣಗಳನ್ನು ಕೊಡುಗೆಯಾಗಿ ನೀಡಿದ್ದು ಅಲ್ಲದೆ ಸರ್ಕಾರಿ ಶಾಲೆ ದತ್ತು ಪಡೆದಿದ್ದಾರೆ. ತಾವೇ ಸ್ವತಃ ಲಕ್ಷಾಂತರ ಹಣ ವ್ಯಯಿಸಿ ಗ್ರಾಮದಲ್ಲಿ ಗುರುಸಿದ್ದೇಶ್ವರ ಬಸವ ದೇವಸ್ಥಾನ ನಿರ್ಮಿಸಿ ಆ ದೇಗುಲ ಸಂಪ್ರೋಕ್ಷಣೆಗೆ ಮುಂದಾಗುವ ಮೂಲಕ ಪ್ರಶಂಸೆಗೆ ಭಾಜನರಾಗಿದ್ದಾರೆ.

ಊರ ಬಸವನ ಸ್ಮರಣಾರ್ಥ ಗದ್ದುಗೆ ನಿರ್ಮಾಣ:

ಹೊಂಡರಬಾಳು ಗ್ರಾಮದಲ್ಲಿ ಮನೆ ಮಾತಾಗಿದ್ದ ಊರ ಬಸವನ ಸ್ಮರಣಾರ್ಥ ಗುರುಸಿದ್ದೇಶ್ವರ ಬಸವ ಗದ್ದುಗೆ ನಿರ್ಮಾಣ ಮಾಡಲಾಗಿದೆ. ಕಳೆದ 9ತಿಂಗಳ ಹಿಂದೆ ಗ್ರಾಮದ ಬಸವ ಅನಾರೋಗ್ಯದಿಂದ ನಿಧನವಾಗಿತ್ತು. ಈ ಹಿನ್ನೆಲೆ ಗ್ರಾಮಾದ್ಯಂತ ಮೆರವಣಿಗೆ ನಡೆಸಿ ಗೌರವ ಸಲ್ಲಿಸುವ ಮೂಲಕ ಅಗಲಿದ ಬಸವನ ಅಂತ್ಯಸಂಸ್ಕಾರವನ್ನು ನಡೆಸಲಾಗಿತ್ತು. ಅಂದು ಬಸವನ ಅಂತ್ಯ ಸಂಸ್ಕಾರ ನೆರವೇರಿಸಿದ ಜಾಗದಲ್ಲಿ ಗಣೇಶರಾವ್ ಕೇಸರ್ಕರ್ ಅವರು ಗ್ರಾಮಸ್ಥರು, ಮುಖಂಡರ ಸಹಕಾರ ಪಡೆದು ಬಸವ ಗದ್ದುಗೆ ನಿರ್ಮಿಸಿ ಆ ಸ್ಥಳದಲ್ಲಿ ಬಸವ ಮೂರ್ತಿ ಪ್ರತಿಷ್ಠಾಪಿಸಿ ಗುರುಸಿದ್ದೇಶ್ವರ ಬಸವ ದೇವಸ್ಥಾನದ ಸಂಪ್ರೋಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಗಲಿದ ಬಸವ ಗ್ರಾಮದ ಅನೇಕ ಮುಖಂಡರ ಪ್ರೀತಿಗೆ ಪಾತ್ರವಾಗಿತ್ತು. ಈ ಹಿನ್ನೆಲೆ ಗ್ರಾಮಸ್ಥರ ಬೆಂಬಲದೊಂದಿಗೆ ಗಣೇಶರಾವ್ ಅವರು ಇಂದು ಬಸವಮೂರ್ತಿ ಪ್ರತಿಷ್ಠಾಪಿಸಿ ದೇಗುಲ ಸಂಪ್ರೋಕ್ಷಣೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಫೆ.21ರಂದು ಗ್ರಾಮದ ಎಲ್ಲಾ ಮುಖಂಡರು, ಗಣ್ಯರ ಸಮ್ಮುಖದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಬೆಳಗ್ಗೆ 10ಗಂಟೆಗೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸುವ ಜೊತೆಗೆ ನೂತನ ದೇಗುಲ ಉದ್ಘಾಟನೆಯನ್ನು ಸಾಲೂರು ಮಠಾಧ್ಯಕ್ಷ ಡಾ.ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೆರವೇರಿಸಲಿದ್ದಾರೆ.

ಈ ವೇಳೆ ಬೆಂಗಳೂರು ಗಟ್ಟಿಹಳ್ಳಿಯ ಗೋಸಾಯಿ ಮಹಾ ಸಂಸ್ಥಾನ ಮಠದ ಜಗದ್ಗುರು ವೇದಾಂತಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ, ಹೊಂಡರಬಾಳು ಗ್ರಾಮದ ಶಂಕಿನ ಮಠಾಧ್ಯಕ್ಷ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ, ಗಣೇಶರಾವ್ ಅವರು ತಮ್ಮ ತಂದೆ ಸ್ಮರಣಾರ್ಥ ಈ ಸೇವಾ ಕಾರ್ಯಕೈಗೊಂಡಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

2ದಿನಗಳ ಕಾಲ ವಿಶೇಷ ಪೂಜೆ:ಗ್ರಾಮದಲ್ಲಿ ದೇಗುಲ ಸಂಪ್ರೋಕ್ಷಣೆ ಹಿನ್ನೆಲೆ 2 ದಿನಗಳ ಕಾಲವೂ ವಿಶೇಷ ಪೂಜೆ, ಹೋಮ ಇತ್ಯಾದಿ ಸೇವಾ ಕೈಂಕರ್ಯಗಳು ಸಾಂಘವಾಗಿ ನೆರವೇರಲಿದೆ. ಮಹಾ ರುದ್ರಾಭಿಷೇಕ, ಮೂರ್ತಿ ಪ್ರತಿಷ್ಠಾಪನೆ, ವಿಶೇಷ ಪೂಜೆ ಬಳಿಕ ಪ್ರಸಾದ ವಿನಿಯೋಗ ಜರುಗಲಿದೆ. ಶುಕ್ರವಾರ ಬೆಳಗ್ಗೆ 3ಗಂಟೆಯಿಂದ 6ಗಂಟೆತನಕ ಬಸವ ಪ್ರತಿಷ್ಠಾನ ವ್ಯಾಸಗಳು, ನವಗ್ರಹ ಹೋಮ, ಮೃತ್ಯುಂಜಯ ಹೋಮ, ರುದ್ರಹೋಮ, ಶಕ್ತಿಹೋಮ, ಗಣ ಹೋಮ, ನವಗ್ರಹ ಹೋಮಕುಂಬಾಭಿಷೇಕ ಅಲಂಕಾರವು ಬ್ರಾಹ್ಮಿ ಮುಹೂರ್ತದ ಅಮೃತ ಲಗ್ನದಲ್ಲಿ ಜರುಗಲಿದೆ.

ಸಂತಸದಿಂದಲೇ ಶಾಲೆ ದತ್ತು ಸ್ವೀಕಾರ: ತಾವು ಅಧ್ಯಯನ ಮಾಡಿದ ಹೊಂಡರಬಾಳು ಗ್ರಾಮದ ಸರ್ಕಾರಿ ಶಾಲೆ ದತ್ತು ಸ್ವೀಕರಿಸಿರುವ ಗಣೇಶರಾವ್ ಇಲ್ಲಿ ನಿರ್ಮಾಣವಾಗಬೇಕಾದ ಕೊಠಡಿ, ಮಕ್ಕಳ ಅಭಿವೃದ್ಧಿಗಾಗಿ ಆಗಬೇಕಾದ ಕೆಲಸ ಕಾರ್ಯಗಳು, ಅಗತ್ಯ ಪರಿಕರಗಳ ಕುರಿತು ಈಗಾಗಲೇ ಮುಖ್ಯ ಶಿಕ್ಷಕರ ಜೊತೆ ಚರ್ಚಿಸಿದ್ದು ಶೀಘ್ರದಲ್ಲೆ ಶಾಲೆಯ ಸಮಗ್ರ ಪ್ರಗತಿಗಾಗಿ ಗ್ರಾಮಸ್ಥರ ಸಹಕಾರದೊಂದಿಗೆ ಅಗತ್ಯ ಕ್ರಮಕೈಗೊಳ್ಳಲಿದ್ದಾರೆ. ಸರ್ಕಾರಿ ಶಾಲೆಯನ್ನು ಸಂತದಿಂದಲೇ ದತ್ತು ಸ್ವೀಕರಿಸಿದ್ದೇನೆ ಎಂದಿದ್ದಾರೆ.

ಹುಟ್ಟೂರಲ್ಲಿ ಬಸವನ ಗದ್ದುಗೆ ನಿರ್ಮಿಸಿ ಅದರ ಸಂಪ್ರೋಕ್ಷಣೆಗೆ ಅವಕಾಶ ಒದಗಿಸಿದ ಹೊಂಡರಬಾಳು ಗ್ರಾಮಸ್ಥರಿಗೆ ನಾ ಎಂದೆಂದಿಗೂ ಆಭಾರಿ. ಬಸವ ಗದ್ದುಗೆ ನಿರ್ಮಾಣ ನನ್ನ ಪಾಲಿನ ಸೌಭಾಗ್ಯವೇ ಸರಿ. ಅಗಲಿದ ಬಸವನ ಅಂತ್ಯಸಂಸ್ಕಾರ ನಡೆಸಿದ ಸ್ಥಳದಲ್ಲಿ ಗದ್ದುಗೆ ನಿರ್ಮಿಸಿ ಬಸವ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು ಸಾಲೂರುಶ್ರೀ, ಗೋಸಾಯಿ ಮಹಾ ಸಂಸ್ಥಾನ ಮಠದ ಜಗದ್ಗುರು, ವಿವಿಧ ಮಠಾಧೀಶರು ಗ್ರಾಮಸ್ಥರು, ಹಿರಿಯರು, ರಾಜಕೀಯ ಪಕ್ಷಗಳು ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. -ಗಣೇಶ್ ರಾವ್ ಕೇಸರ್ಕರ್, ನಟ, ನಿರ್ಮಾಪಕ, ಬಸನ ಗದ್ದುಗೆ ನಿರ್ಮಾತೃ