ಸಾರಾಂಶ
ಧಾರವಾಡ:
ಸಿವಿಲ್ ನ್ಯಾಯಾಧೀಶರಾದ ಪಿ.ಎಫ್. ದೊಡಮನಿ ಅವರು ಉಪ ಲೋಕಾಯುಕ್ತ ನ್ಯಾಯಮೂರ್ತಿಗಳ ನಿರ್ದೇಶನದಂತೆ ಗುರುವಾರ ಇಲ್ಲಿಯ ಕೆಲಗೇರಿ ಕೆರೆಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಪರಿಶೀಲಿಸಿದರು.ಕರ್ನಾಟಕ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ನವೆಂಬರ್ ಕೊನೆ ವಾರದಲ್ಲಿ ಸಾರ್ವಜನಿಕರ ದೂರಗಳ ಹಿನ್ನಲೆಯಲ್ಲಿ ನಗರದ ಕೆಲಗೇರಿ ಕೆರೆಗೆ ಭೇಟಿ ನೀಡಿ, ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ್ದರು. ಈ ವೇಳೆ ಕೆರೆಯ ಸುತ್ತಮುತ್ತ ಬೆಳೆದಿದ್ದ ಕಳೆ ಮತ್ತು ಕಸವನ್ನು 20 ದಿನದೊಳಗೆ ಮಹಾನಗರ ಪಾಲಿಕೆಯಿಂದ ಸ್ವಚ್ಛಗೊಳಿಸಬೇಕೆಂದು ಮತ್ತು ಕೃಷಿ ವಿಶ್ವವಿದ್ಯಾಲಯ ಕೆರೆಯಲ್ಲಿನ ಜಲ ಕಳೆ ತೆಗೆಯಬೇಕೆಂದು ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಪಿ.ಎಫ್. ದೊಡ್ಡಮನಿ ಅವರು ಕೆಲಗೇರಿ ಕೆರೆಗೆ ಹಿರಿಯ ನಾಗರಿಕರು ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕೆರೆ ಆವರಣದಲ್ಲಿ ಕಸ, ಕುರುಚಲ ಗಿಡ ಸ್ವಚ್ಛ ಮಾಡಿರುವುದು ಕಂಡು ಬಂದಿದೆ. ಆದರೆ ಅಲ್ಲಲ್ಲಿ ಪ್ಲಾಸ್ಟಿಕ್ ಲೋಟಾ, ಬಾಟಲಿ, ಇತ್ಯಾದಿ ತ್ಯಾಜ್ಯ ವಸ್ತುಗಳನ್ನು ಎಸೆದಿರುವುದನ್ನು ಗಮನಿಸಲಾಯಿತು. ಕೃಷಿ ವಿಶ್ವವಿದ್ಯಾಲಯದವರು ತೆಗೆಯಬೇಕಿದ್ದ ಜಲಕಳೆ (ವಿಡ್) ಕೆರೆಯಲ್ಲಿ ಹಾಗೆ ಇರುವುದು ಕಂಡು ಬಂದಿತ್ತು. ತಕ್ಷಣವೇ ಉಪಲೋಕಾಯುಕ್ತರು ನೀಡಿದ್ದ ನಿರ್ದೇಶನ ಪಾಲಿಸಿ ಅನುಪಾಲನಾ ವರದಿ ನೀಡಲು ಕೃಷಿ ವಿವಿಗೆ ಸೂಚಿಸಿದರು.ಕೆರೆಯ ದಂಡೆ ಹಾಗೂ ವಾಯು ವಿಹಾರದ ಮಾರ್ಗದಲ್ಲಿ ಮದ್ಯಪಾನ ಮಾಡಿ ಎಸೆದ ಬಾಟಲಿ, ಪ್ಲಾಸ್ಟಿಕ್ ಗ್ಲಾಸ್ ಹಾಗೂ ಇತರೆ ತ್ಯಾಜ್ಯ ವಸ್ತುಗಳು ಬಿದ್ದಿರುವುದು ಕಂಡು ಬಂದಿತ್ತು. ಇಂತಹ ಚಟುವಟಿಕೆಗಳು ನಡೆಯದಂತೆ ಪ್ರತಿದಿನ ನಿರಂತರವಾಗಿ ಗಸ್ತು ತಿರುಗಲು ಆರಕ್ಷಕರನ್ನು ನೇಮಿಸುವಂತೆ ಪೊಲೀಸ್ ಆಯುಕ್ತರಿಗೆ ಹಿರಿಯ ಸಿವಿಲ್ ನ್ಯಾಯಾಧೀಶರು ತಿಳಿಸಿದರು.
ಈ ಸಮಯದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಸ್. ಮೀತ್ತಲಕೋಡ, ಪಾಲಿಕೆಯ ಕಿರಿಯ ಎಂಜಿನಿಯರ್ ವೀರೇಶ ಕುಂಬಾರ, ಪಾಲಿಕೆಯ ಸಿಬ್ಬಂದಿ ಮತ್ತು ಹಿರಿಯ ನಾಗರಿಕರು ಇದ್ದರು.