ಸಾರಾಂಶ
ಹಳಿಯಾಳ: ವಾಂತಿ- ಭೇದಿ ಬಾಧಿತ ಬಿದ್ರೊಳ್ಳಿ ಗ್ರಾಮಕ್ಕೆ ಗುರುವಾರ ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲು ಆದೇಶಿಸಿದೆ.ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಸ್ಥಳೀಯ ಗ್ರಾಪಂಕ್ಕೂ ಸೂಚನೆಗಳನ್ನು ನೀಡಿದ್ದು, ವಾಂತಿ- ಭೇದಿ ಬಾಧಿತ ರೋಗಿಗಳ ಆರೋಗ್ಯದ ಮೇಲೆ ನಿಗಾ ವಹಿಸಲು ಯಡೋಗಾ ಆರೋಗ್ಯ ಘಟಕಕ್ಕೆ ತಿಳಿಸಿದೆ. ಬಿದ್ರೊಳ್ಳಿಯಲ್ಲಿ ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಯಾವುದೇ ಆತಂಕ ಪಡುವ ವಿಷಯವಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ತಿಳಿಸಿದ್ದಾರೆ.ತುರ್ತು ಸಭೆ: ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ. ಅರ್ಚನಾ ನಾಯ್ಕ, ಡಾ. ರೇಣುಕಾ ಪ್ರಭು, ಡಾ. ಗೌರಿ ಮೊದಲಾದ ಪ್ರಮುಖ ವೈದ್ಯರ ತಂಡವು ಯಡೋಗಾ ಗ್ರಾಮದ ಆರೋಗ್ಯ ಘಟಕಕ್ಕೆ ಭೇಟಿ ನೀಡಿ ಬಿದ್ರೊಳ್ಳಿ ಗ್ರಾಮದಲ್ಲಿ ವ್ಯಾಪಿಸಿದ ವಾಂತಿ- ಭೇದಿಯ ಪರಿಸ್ಥಿತಿಯ ಅವಲೋಕನ ಸಭೆ ನಡೆಸಿದರು.
ಗ್ರಾಮದಲ್ಲಿ ವಾಂತಿ- ಭೇದಿ ಹರಡಲು ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕಿ, ತಾಲೂಕು ವೈದ್ಯರಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು. ಸಭೆಯಲ್ಲಿ ಸ್ಥಳಿಯ ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ, ಸ್ಥಳೀಯ ಆರೋಗ್ಯ ಘಟಕದ ವೈದ್ಯ ಡಾ. ಸ್ಟೇನ್ಲಿ ಇತರರು ಇದ್ದರು.ಸೂಕ್ತ ಚಿಕಿತ್ಸೆ: ಗುರುವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ವೈದ್ಯರ ತಂಡವು ಗ್ರಾಮಕ್ಕೆ ಭೇಟಿ ನೀಡಿದೆ. ವಾಂತಿ- ಭೇದಿ ಆರಂಭಗೊಂಡ ನಂತರ ಗ್ರಾಮದಲ್ಲಿ ಎರಡೂ ಜನ ಮೃತಪಟ್ಟಿದ್ದಾರೆ. ಆದರೆ ಇವರು ವಾಂತಿ ಭೇದಿಯಿಂದ ಮೃತಪಟ್ಟಿಲ್ಲ. ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ್ ತಿಳಿಸಿದರು.ಕ್ಲೋರಿನೇಷನ್: ಜಿಲ್ಲಾ ವೈದ್ಯಾಧಿಕಾರಿಗಳ ತಂಡದ ನಿರ್ದೇಶನದಂತೆ ಪ್ರತಿ ದಿನ ಗ್ರಾಮದಲ್ಲಿ ಕ್ಲೋರಿನೇಷನ್ ಮಾಡಲಾಗುತ್ತಿದೆ. ಅಲ್ಲದೇ ಗ್ರಾಪಂ ವತಿಯಿಂದ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಮೊದಲಗೇರಾ ಗ್ರಾಪಂ ಪಿಡಿಒ ರವೀಂದ್ರ ಬಾಬು ತಿಳಿಸಿದರು.