ಸುಂಕಾತೊಣ್ಣೂರು ಅಲೆಮನೆಗೆ ಶ್ರೀಲಂಕಾ ರೈತರ ಭೇಟಿ

| Published : Aug 25 2024, 01:55 AM IST

ಸಾರಾಂಶ

ಅಲೆಮನೆಯಲ್ಲಿ ಸಾವಯವ ಪದ್ಧತಿಯಲ್ಲಿ ಯಾವುದೇ ರಾಸಾಯನಿಕ ಮಿಶ್ರಣ ಮಾಡಿದೆ ಬೆಲ್ಲ ತಯಾರಿಕೆ ಮಾಡುವುದು, ಬೆಲ್ಲ ತಯಾರಿಸಿ ಬಳಿಕ ಸಂರಕ್ಷಣೆ ಹಾಗೂ ಮಾರಾಟ ಮಾಡಿದ ವಿಧಾನವನ್ನು ವೀಕ್ಷಿಸಿ, ಬಳಿಕ ಸಾವಯವ ಬೆಲ್ಲ ಸವಿದ ರೈತರು, ದೇವೇಗೌಡರ ಸಾವಯವ ಕೃಷಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶ್ರೀಲಂಕಾ ದೇಶದ ಹಲವು ಪ್ರವಾಸಿಗ ರೈತರು ತಾಲೂಕಿನ ಸುಂಕಾತೊಣ್ಣೂರು ಗ್ರಾಮದ ದೇವೇಗೌಡರ ಅಲೆಮನೆಗೆ ಆಗಮಿಸಿ ಸಾವಯವ ಕೃಷಿ ಹಾಗೂ ಬೆಲ್ಲ ತಯಾರಿಕೆ ಕುರಿತು ಅಧ್ಯಯನ ನಡೆಸಿದರು.

ಸಾವಯವ ಕೃಷಿಕ, ಬೆಲ್ಲ ಉತ್ಪಾದನೆ ಮಾಡುವ ರೈತ ದೇವೇಗೌಡರ ಅಲೆಮನೆಗೆ ಶುಕ್ರವಾರ ಭೇಟಿಕೊಟ್ಟು ಶ್ರೀಲಂಕಾ ದೇಶದ ರೈತರಾದ ರಾಣಿಯಮ್ಮ, ಅನುಕ ಹಾಗೂ ಶ್ರಮಿಳಾ ಸೇರಿ ಸುಮಾರು 13ಕ್ಕೂ ಅಧಿಕ ಮಂದಿ ರೈತರು ಸಾವಯವ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಾವಯವ ಪದ್ಧತಿಯಲ್ಲಿ ಕಬ್ಬು ಬೆಳೆದು ಬಳಿಕ ಸಾವಯವ ಪದ್ಧತಿಯಲ್ಲಿಯೇ ಬೆಲ್ಲ ಉತ್ಪಾದಿಸಿ ಮಾರಾಟ ಮಾಡುವ ಮೂಲಕ ರೈತ ದೇವೇಗೌಡರು, ಈ ಭಾಗದಲ್ಲಿ ಸಾವಯವ ಕೃಷಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇವೇಗೌಡರ ಆಲೆಮನೆಗೆ ಆಗಮಿಸಿದ ಶ್ರೀಲಂಕಾ ರಾಷ್ಟ್ರದ ರೈತರು ಸುಮಾರು ಎರಡು ಗಂಟೆಗೂ ಅಧಿಕ ಕಾಲ ಸಾವಯವ ಕೃಷಿ, ಬೆಲ್ಲ ತಯಾರಿಕೆ ಹಾಗೂ ಮಾರುಕಟ್ಟೆ ಬಗ್ಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಅಲೆಮನೆಯಲ್ಲಿ ಸಾವಯವ ಪದ್ಧತಿಯಲ್ಲಿ ಯಾವುದೇ ರಾಸಾಯನಿಕ ಮಿಶ್ರಣ ಮಾಡಿದೆ ಬೆಲ್ಲ ತಯಾರಿಕೆ ಮಾಡುವುದು, ಬೆಲ್ಲ ತಯಾರಿಸಿ ಬಳಿಕ ಸಂರಕ್ಷಣೆ ಹಾಗೂ ಮಾರಾಟ ಮಾಡಿದ ವಿಧಾನವನ್ನು ವೀಕ್ಷಿಸಿ, ಬಳಿಕ ಸಾವಯವ ಬೆಲ್ಲ ಸವಿದ ರೈತರು, ದೇವೇಗೌಡರ ಸಾವಯವ ಕೃಷಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಅಲೆಮನೆ ಬಳಿಯೇ ಶ್ರೀಲಂಕಾದ ರೈತರಿಗೆ ಹಿಂದೂ ಸಂಪ್ರದಾಯದಂತೆ ಬಾಳೆ ಎಲೆಯಲ್ಲಿ ಸಸ್ಯಹಾರಿ ಊಟ ಮಾಡಿಸಿದರು. ನಂತರ ದೇವೇಗೌಡರ ಪತ್ನಿ ಕೆಂಪಮ್ಮ ರೈತ ಮಹಿಳೆಯರಿಗೆ ಹಿಂದೂ ಸಂಪ್ರದಾಯದಂತೆ ಅರಿಸಿಣ, ಕುಂಕುಮ, ಬಳೆ, ಹೂ, ರವಿಕೆ ಪೀಸ್ ಹಾಗೂ ತೆಂಗಿನಕಾಯಿಕೊಟ್ಟು ಅಭಿನಂದಿಸಿದರು.

ನಂತರ ಶ್ರೀಲಂಕಾ ರೈತರು ಭತ್ತ ಬೆಳೆಯುವುದಕ್ಕೆ ಪ್ರಸಿದ್ಧಿ ಪಡೆದಿರುವ ಮಂಡ್ಯ ತಾಲೂಕಿನ ಶಿವಳ್ಳಿ ಬೋರೇಗೌಡರ ಜಮೀನಿಗೆ ತೆರಳಿದರು. ಇದೇ ವೇಳೆ ಫಸ್ಟ್‌ಅರ್ಥ್ ಪೌಂಡೇಷನ್(ಪ್ರಥಮ ಭೂಮಿ)ನ ಕಿರಣ್‌ಪ್ರಕಾಶ್ ಹಾಗೂ ಎಂ.ಪಿ.ಗಂಗಾಧರ್‌ ಅವರು ನೈಸರ್ಗಿಕ ಕೃಷಿ ಬೇಸಾಯ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು.

ಸಾವಯವ ಕೃಷಿಕ ರೈತ ದೇವೇಗೌಡ ಮಾತನಾಡಿ, ಸಾವಯವ ಕೃಷಿ, ಸಾವಯವ ಆಹಾರಕ್ಕೆ ಸಾವಿಲ್ಲ. ನಾವು ಹಣದಾಸೆಗಾಗಿ ರಾಸಾಯನಿಕ ಕೃಷಿ ಮೂಲಕ ಉತ್ಪಾದನೆ ಮಾಡುತ್ತಿರುವ ಆಹಾರ ನಮಗೆ ವಿಷವಾಗಿ ಪರಿಣಮಿಸಿದೆ. ನಮ್ಮಆಹಾರ ಔಷಧ ಆಗಬೇಕೇ ಹೊರತು ವಿಷವಾಗಬಾರದು ಎಂದು ಬೇಸರ ವ್ಯಕ್ತಪಡಿಸಿದರು.

ಭೂಮಿ ಒಳಗಡೆ ಸಿಗುವಂತಹ ಪೆಟ್ರೋಲ್, ಡಿಸೇಲ್ ಸೇರಿ ಇತರೆ ಪದಾರ್ಥಗಳು ವಿಷವಾಗಿವೆ. ಭೂಮಿ ಮೇಲೆ ಸಿಗುವುದು ನಮಗೆ ಅಮೃತ. ಆದರೆ, ನಾವು ಭೂಮಿ ಒಳಗೆ ಸಿಗುವುದನ್ನು ಪಡೆದು ಮತ್ತೆ ವಿಷವನ್ನು ಭೂಮಿಗೆ ನೀಡುತ್ತಿದ್ದೇವೆ. ಇದರಿಂದಾಗಿಯೇ ಭೂಮಿ ನಮಗೆ ವಿಷ ನೀಡುತ್ತಿದ್ದಾಳೆ. ಬಿಳಿ ಆಹಾರ ಪದಾರ್ಥಗಳು ಸಂಪೂರ್ಣ ವಿಷಕಾರಿಯಾಗಿವೆ. ಹಾಗಾಗಿ ಬಿಳಿ ಆಹಾರ ಪದಾರ್ಥ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಫಸ್ಟ್‌ಅರ್ಥ್ ಫೌಂಡೇಷನ್(ಪ್ರಥಮ ಭೂಮಿ)ನ ಕಿರಣ್‌ಪ್ರಕಾಶ್ ಹಾಗೂ ಎಂ.ಪಿ.ಗಂಗಾಧರ್ ಸೇರಿ ಹಲವರು ಹಾಜರಿದ್ದರು.