ಸಾರಾಂಶ
ಹಾರೋಹಳ್ಳಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಮುಖ್ಯ ಆರ್ಥಿಕ ಸಲಹೆಗಾರರಾದ ಕುಂತಲ್ ಸೆನ್ಸರ್ಮ ರವರು ಹಾರೋಹಳ್ಳಿಯ ಆರ್-ಎಸ್ಇಟಿಐ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ವ- ಉದ್ಯೋಗ ಕೌಶಲ್ಯ ತರಬೇತಿ ಪಡೆಯುತ್ತಿರುವ ಶಿಕ್ಷಣಾರ್ಥಿಗಳೊಂದಿಗೆ ಸಂವಾದ ನಡೆಸಿ, ತರಬೇತಿ ಸಂಸ್ಥೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಚೀಲೂರು ಗ್ರಾಮ ಪಂಚಾಯಿತಿಯ ಹನುಮನಹಳ್ಳಿ ಗ್ರಾಮದ ಶಿವಮ್ಮರವರ ಕುರಿ ಶೆಡ್ ಮತ್ತು ದನದ ಕೊಟ್ಟಿಗೆ ಕಾಮಗಾರಿಗಳನ್ನು ವೀಕ್ಷಿಸಿ ನಂತರ ಅಮೃತ ಸರೋವರ ಕೆರೆಯನ್ನು ವೀಕ್ಷಿಸಿದರು.
ದೊಡ್ಡಮರಳವಾಡಿ ಗ್ರಾಮ ಪಂಚಾಯಿತಿಯ ಆನೆಹೊಸಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರ, ಶಾಲಾ ಶೌಚಾಲಯ ಹಾಗೂ ಹನುಮಪುರ ಊರ ಮುಂದಿನ ಕೆರೆಯನ್ನು ವೀಕ್ಷಿಸಿ, ನಂತರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಮಹಾತ್ಮಗಾಂಧಿ ನರೇಗಾ ಯೋಜನೆಯ ಕಡತಗಳನ್ನು ಪರಿಶೀಲಿಸಿ, ಪಿಂಚಣಿ, ಮಾಸಾಶನ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.ಈ ವೇಳೆ ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ , ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಕಾರ್ಯಾಚರಣೆಯ ಅಧಿಕಾರಿ ವೇಣುಗೋಪಾಲ್ , ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರು, ಸಹಾಯಕ ಕಾರ್ಯದರ್ಶಿಗಳು, ಕನಕಪುರ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಜಿಲ್ಲಾ ಪಂಚಾಯಿತಿಯ ಎಡಿಪಿಸಿ, ಜಿಲ್ಲಾ ಐಇಸಿ, ತಾಲೂಕು ಐಇಸಿ ಹಾಗೂ ಇತರೆ ಅಧಿಕಾರಿ , ಸಿಬ್ಬಂದಿ ಹಾಜರಿದ್ದರು.