ಸಾರಾಂಶ
ಹುಬ್ಬಳ್ಳಿ: ಇಲ್ಲಿನ ಸ್ಟೇಷನ್ ರಸ್ತೆಯ ಶ್ರೀ ಗಣೇಶೋತ್ಸವ ಮಂಡಳಿ ವಿಶಿಷ್ಟ ರೂಪಕಗಳಿಂದಲೇ ಪ್ರಖ್ಯಾತಿ ಪಡೆದಿದೆ. ಕಳೆದ 49 ವರ್ಷಗಳಿಂದ ಗಣೇಶ ಚತುರ್ಥಿಯಲ್ಲಿ 11 ದಿನಗಳ ಕಾಲ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯ ರೂಪಕ ದೃಶ್ಯಾವಳಿ ಪ್ರಸ್ತುತಪಡಿಸುವ ಮೂಲಕ ಜನಮನ್ನಣೆಗೆ ಕಾರಣವಾಗಿದೆ.
ಭಕ್ತರ ಅಭಿರುಚಿಗೆ ತಕ್ಕಂತೆ ಪ್ರತಿವರ್ಷವೂ ಒಂದೊಂದು ಇತಿಹಾಸ ಸಾರುವ ರೂಪಕ ಪ್ರದರ್ಶಿಸುವುದರೊಂದಿಗೆ ಮೆಚ್ಚುಗೆಗೆ ಕಾರಣವಾಗಿದೆ. ಈ ಬಾರಿ ಶ್ರೀ ಮೈಲಾರಲಿಂಗೇಶ್ವರರ ಮಹಿಮೆ ಸಾರುವ ರೂಪಕಗಳ ಪ್ರಸ್ತುತಪಡಿಸಲಾಗುತ್ತಿದೆ.ಬುಧವಾರ ಇಲ್ಲಿನ ಗಣೇಶಪೇಟ ಶ್ರೀ ಕರೆಮ್ಮ ದೇವಸ್ಥಾನದ ಭಕ್ತರ ಸಹಕಾರದೊಂದಿಗೆ ಗೊರವಯ್ಯನವರಿಂದ ಶ್ರೀ ಮೈಲಾರಲಿಂಗೇಶ್ವರ ದೋಣಿ ಪೂಜಾ, ಬೆಳಕು ಹೊರಡಿಸುವ ಪೂಜೆ, ಕುದರಿಕಾರರ ಪೂಜೆ ಮೂಲಕ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ನಿತ್ಯವೂ 15 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವುದು ಇಲ್ಲಿನ ವಿಶೇಷ.
ಕಂಪ್ಲಿ ನೇತೃತ್ವದಲ್ಲಿ ಪ್ರಾರಂಭ: ಈ ಮಂಡಳಿಯು 1976ರಲ್ಲಿ ಜಿ.ಆರ್. ಕಂಪ್ಲಿ ನೇತೃತ್ವದಲ್ಲಿ ಪ್ರಾರಂಭವಾಯಿತು. ಮೊದಲು ಸಣ್ಣ ಪ್ರಮಾಣದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿತ್ತು. 1986ರಿಂದ ಪ್ರತಿ ವರ್ಷವೂ ವಿಭಿನ್ನ ರೀತಿಯ ದೃಶ್ಯಾವಳಿ ಪ್ರದರ್ಶಿಸಿಕೊಂಡು ಬರಲಾಗುತ್ತಿದೆ. ಕಂಪ್ಲಿ ಅವರೇ 42 ವರ್ಷಗಳ ಕಾಲ ಅಧ್ಯಕ್ಷರಾಗಿ ಮುಂದುವರಿದಿದ್ದರು. ಅವರು ನಿಧನರಾದ ನಂತರ ಹಿಂದೆ 26 ವರ್ಷಗಳಿಂದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀನಿವಾಸ ಬೋಚಗೇರಿ ಅವರು ಕಳೆದ 3 ವರ್ಷಗಳಿಂದ ಮಂಡಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಯಾವೆಲ್ಲ ರೂಪಕಗಳ ಪ್ರದರ್ಶನ?: 1986ರಿಂದ ಪ್ರಸಕ್ತ ಸಾಲಿನ ವರೆಗೂ ಯಶಸ್ವಿ ಕಾರ್ಯ ಕೈಗೊಂಡಿದ್ದು, ಮಂಡಳದಿಂದ 1986ರಲ್ಲಿ ಪ್ರಥಮ ಬಾರಿಗೆ ವೈಕುಂಠ ದರ್ಶನದ ದೃಶ್ಯಾವಳಿ ಪ್ರಸ್ತುತಪಡಿಸಲಾಯಿತು. ನಂತರ 87ರಲ್ಲಿ ಕೈಲಾಸ, 88ರಲ್ಲಿ ಮಹಾಭಾರತ, 89ರಲ್ಲಿ ರಾಮಾಯಣ, 90ರಲ್ಲಿ ಶ್ರೀ ಸತ್ಯನಾರಾಯಣ, 2023ರಲ್ಲಿ ಪಂಢರಪುರದ ಪಾಂಡುರಂಗ ವಿಠ್ಠಲ, 24ರಲ್ಲಿ ಶ್ರೀ ಶಿರಸಿ ಮಾರಿಕಾಂಬಾ ಜೀವನ ಚರಿತ್ರೆ ರೂಪಕ ಪ್ರಸ್ತುತಪಡಿಸಲಾಗಿತ್ತು. ಈ ಬಾರಿ ಶ್ರೀ ಮೈಲಾರಲಿಂಗೇಶ್ವರ ರೂಪಕ ದೃಶ್ಯಾವಳಿ ಪ್ರಸ್ತುತಪಡಿಸಲಾಗುತ್ತಿದೆ.
ಈ ಎಲ್ಲ ಕಾರ್ಯಗಳ ಯಶಸ್ಸಿಗೆ ಮಂಡಳಿಯ ಉಪಾಧ್ಯಕ್ಷ ಶ್ರೀಧರ ದಿವಟೆ, ಗೌರವಾಧ್ಯಕ್ಷ ಕಾಶೀನಾಥ ನಿರಂಜನ, ಕಾರ್ಯಾಧ್ಯಕ್ಷ ಸುನೀಲ ವಾಳ್ವೇಕರ, ಕಾರ್ಯದರ್ಶಿ ಅಭಿಷೇಕ ಕಲ್ಯಾಣಮಠ ಸೇರಿದಂತೆ ಹಲವರು ಕೈಜೋಡಿಸಿದ್ದು, ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.ಗಣೇಶೋತ್ಸವದಲ್ಲಿ ಪ್ರತಿವರ್ಷವೂ ಪೌರಾಣಿಕ, ಐತಿಹಾಸಿಕ ದೃಶ್ಯಾವಳಿಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಇದಕ್ಕೆಲ್ಲ ಜಿ.ಆರ್. ಕಂಪ್ಲಿ ಅವರೇ ಪ್ರೇರಣೆ. ಕಾರ್ಯಕ್ರಮದ ಯಶಸ್ಸಿಗೆ ಮಂಡಳಿಯ ಎಲ್ಲ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಶ್ರೀ ಗಣೇಶೋತ್ಸವ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಬೋಚಗೇರಿ ಹೇಳಿದರು.