ಸ್ವಾತಂತ್ರ್ಯ, ಸಮಾನತೆ, ಸೋದರತ್ವವನ್ನು ಒಳಗೊಂಡ ಜೀವನ ಪದ್ದತಿ ಭಾರತಕ್ಕೆ ಬರಬೇಕು. ಇಲ್ಲವಾದರೆ ಬೇರೆ ಮೌಲ್ಯಗಳಿಗೆ ಅರ್ಥ ಬರುವುದಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರುಸಮಾನತೆ ರಾಜಕೀಯವಾಗಿ ಮಾತ್ರವಲ್ಲ, ಸಾಮಾಜಿಕ, ಆರ್ಥಿಕ ಜೀವನ, ಆಲೋಚನ ಕ್ರಮದಲ್ಲಿ ಬರಬೇಕು ಎಂದು ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.ಡಾ.ಬಿ.ಆರ್. ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ವತಿಯಿಂದ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಂವಿಧಾನಿಕ ಸಂಸ್ಕೃತಿ ವಿಷಯ ಕುರಿತು ಅವರು ಮಾತನಾಡಿದರು. ಸ್ವಾತಂತ್ರ್ಯ, ಸಮಾನತೆ, ಸೋದರತ್ವವನ್ನು ಒಳಗೊಂಡ ಜೀವನ ಪದ್ದತಿ ಭಾರತಕ್ಕೆ ಬರಬೇಕು. ಇಲ್ಲವಾದರೆ ಬೇರೆ ಮೌಲ್ಯಗಳಿಗೆ ಅರ್ಥ ಬರುವುದಿಲ್ಲ. ಸಂವಿಧಾನದಲ್ಲಿ ಅಡಕವಾದ ಈ ವಿಚಾರಗಳು ಸಾಕಾರಗೊಳ್ಳಬೇಕಾದರೆ ಅದಕ್ಕೆ ಸಾಂಸ್ಕೃತಿ ತಳಹದಿ ಮುಖ್ಯ. ಅಂಬೇಡ್ಕರ್‌ಅವರು ಸಂವಿಧಾನಿಕವಾಗಿ ದೊರೆತಿರುವ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳುವ ಹಕ್ಕು, ಧಾರ್ಮಿಕ ಹಕ್ಕನ್ನು ದಿನ ನಿತ್ಯದ ಬದುಕಿನಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು. ಅದರಿಂದ ಆಗುವ ಅನುಕೂಲತೆ ಕುರಿತು ಹೇಳಿದ್ದಾರೆ. ಈ ರೀತಿಯ ಜೀವನ ವಿಧಾನದಲ್ಲಿ ಸಂಸ್ಕೃತಿ ಪ್ರಭಾವವಿದೆ ಎಂದರು.ಸಂವಿಧಾನದಲ್ಲಿ ಇರುವ ಪ್ರಮುಖ ವಿಚಾರಗಳಲ್ಲಿ ಸಂಸ್ಕೃತಿ ಅಡಕವಾಗಿದೆ. ಸಂವಿಧಾನದಲ್ಲಿರು ಪೀಠಿಕೆ, ಮೂಲಭೂತ ಹಕ್ಕು ಮತ್ತು ಕರ್ತವ್ಯ ಮಾರ್ಗದರ್ಶಕ ಸೂತ್ರಗಳಲ್ಲಿ ಸಂಸ್ಕೃತಿ ಇದೆ. ಈ ನಾಲ್ಕು ಸಂಗತಿಗಳಲ್ಲಿ ಮೂಲಭೂತ ಕರ್ತವ್ಯಕ್ಕೆ ಅಂಬೇಡ್ಕರ್‌ಹೆಚ್ಚು ಒತ್ತು ನೀಡಿದ್ದಾರೆ. ಅದರ ಭಾಗವಾದ ರಾಷ್ಟ್ರಧ್ವಜ, ರಾಷ್ಟ್ರದ ಹೋರಾಟವನ್ನು ಗೌರವಿಸುವುದು, ಭಾಷಿಕ ಮತ್ತು ಪ್ರಾಂತ್ಯ ವೈವಿಧ್ಯವನ್ನು ಗುರುತಿಸುವಾಗ ಸಂಸ್ಕೃತಿ ಬರುತ್ತದೆ ಎಂದರು.ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನದಲ್ಲಿ ಸಮಾನತೆ ಬೇಕು ಎಂದು ಸಂವಿಧಾನ ಹೇಳುತ್ತದೆ. ಇದು ನಮ್ಮ ಭಾರತದ ಸಂಸ್ಕೃತಿಯ ಒಂದು ಭಾಗವೂ ಕೂಡ. ಹಾಗೆಯೇ ಬಹುತ್ವದ ಸಂಸ್ಕೃತಿ, ಧಾರ್ಮಿಕ ಸಾಮರಸ್ಯ ವಿಚಾರದಲ್ಲಿ ಸಾಂಸ್ಕೃತಿಕ ನೆಲಗಟ್ಟನ್ನು ನಾವು ಕಾಣುತ್ತೇವೆ ಎಂದು ಅವರು ತಿಳಿಸಿದರು.ಸಂವಿಧಾನದಂತಹ ಆದರ್ಶವನ್ನು ಅಳವಡಿಸಿಕೊಳ್ಳುವುದು ಮುಖ್ಯವಲ್ಲ. ಅದನ್ನು ಬಳಕೆ ಮಾಡುವವರು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದು ಬಹಳ ಮುಖ್ಯ. ಎಷ್ಟೇ ಉಪಯೋಕ್ತವಾದ ಆದರ್ಶವನ್ನು ಜಾರಿಗೆ ತಂದರೂ ಅದನ್ನು ಬಳಕೆ ಮಾಡುವವರು ತಿರಸ್ಕರಿಸಿದರೆ ಅದಕ್ಕೆ ಬೆಲೆ ಇರುವುದಿಲ್ಲ ಎಂದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಹೆಚ್ಚಾಗಿ ಸಂವಿಧಾನದ ಬಗ್ಗೆ ತಿಳಿದುಕೊಂಡು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್. ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಡಾ.ಎಸ್. ನರೇಂದ್ರಕುಮಾರ್ ಮೊದಲಾದವರು ಇದ್ದರು.