ಎಚ್ಡಿಕೆ ಅವಧಿಯಲ್ಲಿ ವಿಐಎಸ್‌ಎಲ್ ಅಭಿವೃದ್ಧಿ ವಿಶ್ವಾಸ: ಶಾರದಾ ಅಪ್ಪಾಜಿ

| Published : Jun 21 2024, 01:00 AM IST

ಎಚ್ಡಿಕೆ ಅವಧಿಯಲ್ಲಿ ವಿಐಎಸ್‌ಎಲ್ ಅಭಿವೃದ್ಧಿ ವಿಶ್ವಾಸ: ಶಾರದಾ ಅಪ್ಪಾಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಮಾರಸ್ವಾಮಿಯವರು ಬೃಹತ್ ಕೈಗಾರಿಕೆ ಹಾಗೂ ಉಕ್ಕುಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಅಧಿಕಾರಿಗಳ ಸಭೆ ನಡೆಸಿರು ವುದು ಕುಮಾರಸ್ವಾಮಿಯವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ ಎಂದು ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರದಲ್ಲಿ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ನೂತನ ಸಚಿವರಾಗಿರುವ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿರವರು ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿ ಪಡಿಸುವ ವಿಶ್ವಾಸವಿದೆ ಎಂದು ಜಾತ್ಯತೀತ ಜನತಾದಳ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ ಹೇಳಿದರು. ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಮೈತ್ರಿಕೂಟ ಅಭೂತ ಪೂರ್ವ ಗೆಲುವು ಸಾಧಿಸುವ ಮೂಲಕ ಎನ್‌ಡಿಎ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಬೃಹತ್ ಕೈಗಾರಿಕೆ ಹಾಗೂ ಉಕ್ಕುಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದರ ಮರುದಿನವೇ ರಾಜ್ಯದ ಹೆಮ್ಮೆಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಬೆಳವಣಿಗೆ ಕುರಿತು ಅಧಿಕಾರಿಗಳ ಸಭೆ ನಡೆಸಿರು ವುದು ಕುಮಾರಸ್ವಾಮಿಯವರ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ ಎಂದರು. ಇನ್ನು, ಜ.೧೬, ೨೦೨೩ರಂದು ಸೈಲ್ ಆಡಳಿತ ಮಂಡಳಿ ನೀತಿ ಆಯೋಗದ ಹೆಸರಿನಲ್ಲಿ ಕಾರ್ಖಾನೆಯ ಎಲ್ಲಾ ಉತ್ಪಾದನಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಕಾರ್ಖಾನೆಯನ್ನು ಸಂಪೂರ್ಣವಾಗಿ ಮುಚ್ಚಲು ತೆಗೆದುಕೊಂಡ ತೀರ್ಮಾನವನ್ನು ಒಕ್ಕೊರಲಿನಿಂದ ವಿರೋಧಿಸಿ ಕಾರ್ಖಾನೆಯ ಮುಂಭಾಗ ಇಂದಿಗೂ ನಡೆಯುತ್ತಿ ರುವ ಸತ್ಯಾಗ್ರಹ ೫೦೦ ದಿನಗಳನ್ನು ದಾಟಿದೆ. ಈ ಹೋರಾಟವನ್ನು ಬೆಂಬಲಿಸಿ ಖುದ್ದು ಕುಮಾರಸ್ವಾಮಿ ಸಹ ಪ್ರತಿಭಟನಾ ಸ್ಥಳಕ್ಕಾಗಮಿಸಿ ಯಾವುದೇ ಕಾರಣ ಕ್ಕೂ ಕಾರ್ಖಾನೆಯನ್ನು ಮುಚ್ಚಲು ಅವಕಾಶ ನೀಡುವುದಿಲ್ಲ. ಬದಲಾಗಿ ಬಂಡವಾಳ ತೊಡಗಿಸಿ ಲಾಭದಾಯಕವಾಗಿ ಮುನ್ನಡೆಸಲಾಗುವುದು ಎಂದು ಭರವಸೆ ನೀಡಿದ್ದರು. ಹೋರಾಟದ ಪ್ರತಿಫಲ ಎಂಬಂತೆ ಇದೀಗ ಉಕ್ಕು ಖಾತೆ ಕೇಂದ್ರ ಸಚಿವರಾಗಿರುವುದು ಕಾರ್ಮಿಕ ವಲಯದಲ್ಲಿ ಸಂತಸ ಮೂಡಿಸಿದೆ ಎಂದರು.

ಈ ಹಿನ್ನೆಲೆಯಲ್ಲಿ ಬಂಡವಾಳ ಹಿಂತೆಗೆದುಕೊಳ್ಳುವ, ಕಾರ್ಖಾನೆಯನ್ನು ಮುಚ್ಚುವ ಪ್ರಕ್ರಿಯೆಗಳನ್ನು ಶಾಶ್ವತವಾಗಿ ಹಿಂಪಡೆದು ಈಗಾಗಲೇ ಕೇಂದ್ರ ಸರ್ಕಾರ ಹಲ ವಾರು ಬಾರಿ ಬಹಿರಂಗವಾಗಿಯೇ ನೀಡಿರುವ ಭರವಸೆಯಂತೆ, ಸೈಲ್ ತನ್ನ ಅಧೀನದ ಇತರೆ ಉಕ್ಕು ಉದ್ಯಮಗಳನ್ನು ಅಭಿವೃದ್ಧಿಪಡಿಸಿರುವ ಮಾದರಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸಿ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ತಾಲೂಕು ನಗರ ಅಧ್ಯಕ್ಷ ಆರ್. ಕರುಣಾಮೂರ್ತಿ, ಮುಖಂಡರಾದ ನರಸಿಂಹಚಾರ್, ತಿಮ್ಮೇಗೌಡ, ರಾಮಕೃಷ್ಣ, ಚಂದ್ರಶೇಖರ್, ಎಚ್.ಬಿ ರವಿಕುಮಾರ್, ಉಮೇಶ್, ಉದಯಕುಮಾರ್, ಮಂಜುಳ ಸುಬ್ಬಣ್ಣ, ಭಾಗ್ಯಮ್ಮ, ವಿಶಾಲಾಕ್ಷಿ, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್, ಎಐಟಿಯುಸಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.