ಸಾರಾಂಶ
ಸಂಡೂರು: ತಾಲೂಕಿನ ರಾಮಗಡ ಅರಣ್ಯ ವಲಯದಲ್ಲಿ ವಿಶ್ವೇಶ್ವರಯ್ಯ ಐರನ್ ಆ್ಯಂಡ್ ಸ್ಟೀಲ್ (ವಿಐಎಸ್‌ಎಲ್) ಕಂಪನಿಗೆ ೬೦.೭೦ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ೦.೯ ಮಿಲಿಯನ್ ಟನ್ ಕಬ್ಬಿಣದ ಅದಿರು ಉತ್ಪಾದನೆಗೆ ಅವಕಾಶ ನೀಡುವ ಸಂಬಂಧ ರಾಮಗಡದಲ್ಲಿ ಶುಕ್ರವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಡೆದ ಪರಿಸರ ಸಾರ್ವಜನಿಕ ಆಲಿಕೆ ಸಭೆಯಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾದವು.
ಪರ ಅಭಿಪ್ರಾಯಗಳು:ರಾಮಗಡದ ಶಾಜಾದ್ ಬೀ, ಇಮಾಮ್‌ಸಾಬ್, ದೇವರಾಜ್, ಸಿದ್ದಾಪುರದ ಜಿ. ಉಮೇಶ್‌ಗೌಡ, ಕೆ. ಹೊನ್ನೂರಪ್ಪ, ಗುಂಡಾ ಗ್ರಾಮದ ಸೋಮಣ್ಣ, ಸುಶೀಲಾನಗರದ ಷಣ್ಮುಖಪ್ಪ, ಚಂದ್ರಾನಾಯ್ಕ್, ಈಶ್ವರನಾಯ್ಕ್, ಸತೀಶ್, ಪಿ.ಎಸ್. ಧರ್ಮಾನಾಯ್ಕ್, ಗರಗದ ಕರಿಬಸವರಾಜ, ಸಂಡೂರಿನ ವಿಶ್ವನಾಥರೆಡ್ಡಿ ಮುಂತಾದವರು ಕಂಪನಿಗೆ ಗಣಿಗಾರಿಕೆಗೆ ಅನುಮತಿ ನೀಡಲು ಒಪ್ಪಿಗೆ ಸೂಚಿಸುವುದರೊಂದಿಗೆ, ಗಣಿಗಾರಿಕೆಯಿಂದ ಉಂಟಾಗುತ್ತಿರುವ ತೊಂದರೆಗಳಾದ ಧೂಳು, ಟ್ರಾಫಿಕ್ ಜಾಮ್, ರಸ್ತೆ ದುಸ್ಥಿತಿಯನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟರು.ಕಂಪನಿಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು. ವೈಜ್ಞಾನಿಕವಾಗಿ ಗಣಿಗಾರಿಕೆ ನಡೆಸಬೇಕು. ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ಬೇಡಿಕೆಗಳನ್ನಿಟ್ಟರು.
ವಿರೋಧ ಅಭಿಪ್ರಾಯಗಳು:ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದನ್ನು ವಿರೋಧಿಸಿ ಮಾತನಾಡಿದ ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಉಪಾಧ್ಯಕ್ಷ ಶ್ರೀಶೈಲ ಆಲ್ದಳ್ಳಿ, ೨೦೧೯ರಲ್ಲಿಯೇ ವಿಐಎಸ್‌ಎಲ್ ಸಂಸ್ಥೆಯಿಂದ ಬಂಡವಾಳ ಹಿಂದೆಗೆಯಲು ಮತ್ತು ಖಾಸಗಿಗೆ ಮಾರಾಟ ಮಾಡಲು ಸಿದ್ಧತೆ ನಡೆದಿತ್ತು. ಈಗ ಸಂಸ್ಥೆಗೆ ಗಣಿ ಪ್ರದೇಶ ಮಂಜೂರಾದರೆ ಗಣಿಯೊಂದಿಗೆ ಕಂಪನಿಯೂ ಖಾಸಗಿಯವರಿಗೆ ಮಾರಾಟವಾಗುವ ಸಾಧ್ಯತೆ ಇದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ, ಭೂಕುಸಿತಕ್ಕೆ ಕಾರಣವಾಗಲಿದೆ ಎಂದು ಅರಣ್ಯ ಇಲಾಖೆ ವರದಿ ನೀಡಿದೆ. ಯಾವುದೇ ಕಾರಣಕ್ಕೂ ಅರಣ್ಯ ಪ್ರದೇಶದಲ್ಲಿ ವಿಐಎಸ್‌ಎಲ್ ಕಂಪನಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟರು.
ಮತ್ತೊಂದು ವಯನಾಡ್ ಆಗುವುದು ಬೇಡ:ಯಶವಂತನಗರದ ಕಾಶಪ್ಪ ಗಣಿಗಾರಿಕೆಗೆ ಅನುಮತಿ ನೀಡುವುದನ್ನು ವಿರೋಧಿಸಿ, ಕಾಡಿನಲ್ಲೆಲ್ಲ ಗಣಿಗಾರಿಕೆ ನಡೆಸಿದರೆ, ಪ್ರಾಣಿ ಪಕ್ಷಿಗಳು ಎಲ್ಲಿ ಬದುಕಬೇಕು? ಇಲ್ಲಿನ ಅರಣ್ಯ ಹಾಗೂ ಖನಿಜ ಸಂಪತ್ತನ್ನು ಮುಂದಿನ ಪೀಳಿಗೆಗೂ ಉಳಿಸಬೇಕಿದೆ. ಸಂಡೂರನ್ನು ಮತ್ತೊಂದು ವಯನಾಡ್ ಆಗಿಸುವುದು ಬೇಡ ಎಂದು ತಿಳಿಸಿದರು.
ಪ್ರಕೃತಿಗೆ ವಿರುದ್ಧ ನಡೆದರೆ ವಿನಾಶ ಖಂಡಿತ:ಯಶವಂತನಗರದ ಸುಭಾನ್ ಮಾತನಾಡಿ, ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿದರೆ ಉದ್ಯೋಗ ಸೃಷ್ಟಿಯಾಗಲಿದೆ. ಇಲ್ಲಿ ಜಲ, ವಾಯು ಮಾಲಿನ್ಯದಿಂದ ಬಹುತೇಕ ಜನರು ಚರ್ಮರೋಗ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಪ್ರಕೃತಿಗೆ ವಿರುದ್ಧವಾಗಿ ನಡೆದರೆ ವಿನಾಶ ಖಂಡಿತ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಎಡಿಸಿ ಮಹಮ್ಮದ್ ಜುಬೇರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಹಿರಿಯ ಪರಿಸರ ಅಧಿಕಾರಿ ಬಿ.ಎಸ್. ಮುರಳೀಧರ್, ಪ್ರಭಾರ ಪರಿಸರ ಅಧಿಕಾರಿ ಎಸ್. ಪವನ್, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ಮಾಲಿನ್ಯ ನಿಯಂತ್ರಣಾ ಇಲಾಖೆಯ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು. ಪೊಲೀಸರು ಸಭೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದರು.ವಿಐಎಸ್‌ಎಲ್ ಕಂಪನಿ ನೀಡಿದ ವರದಿ ಸರಿ ಇಲ್ಲ. ಅಭಿವೃದ್ಧಿ ಹೆಸರಲ್ಲಿ ಭೂಮಿ ವಿನಾಶದ ದಾರಿಯಲ್ಲಿ ಸಾಗಿದೆ. ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎನ್ನುತ್ತಾರೆ ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಅಧ್ಯಕ್ಷ ಟಿ.ಎಂ. ಶಿವಕುಮಾರ್.ಸಂಡೂರು ಒಂದು ರಮಣೀಯ ತಾಣ. ಇತ್ತೀಚೆಗೆ ಇಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕಂಪನವಾಗಿದೆ. ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಇಲ್ಲಿನ ಅರಣ್ಯ, ಪರಿಸರ ಹಾಗೂ ಜೀವ ವೈವಿಧ್ಯದ ಸಂರಕ್ಷೆಗೆ ಹೆಚ್ಚು ಒತ್ತು ನೀಡಬೇಕು ಎನ್ನುತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಕೆ. ನಾಯ್ಡು.