ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ (ಯುವಿಸಿಇ) ನೂತನ ಕಟ್ಟಡ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿದ್ದರೆ ದಂಡ ವಿಧಿಸುವುದಾಗಿ ಗುತ್ತಿಗೆದಾರರಿಗೆ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.ಯುವಿಸಿಇ ಮತ್ತು ನೃಪತುಂಗ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಕಟ್ಟಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಕಾಮಗಾರಿ ವಿಳಂಬ ಆಗುತ್ತಿರುವುದಕ್ಕೆ ಗುತ್ತಿಗೆದಾರರು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಿದರು.
ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನೂತನ ಕಟ್ಟಡದ ಅವಶ್ಯಕತೆ ಇದೆ. ₹87 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಆರಂಭವಾಗಿ ಈಗಾಗಲೇ ಒಂದು ವರ್ಷ ಕಳೆದಿದ್ದು, ಉಳಿದ ಒಂದು ವರ್ಷ ಮಾತ್ರ ಬಾಕಿ ಇದೆ. ಆದರೆ, ಕಾಮಗಾರಿ ಇನ್ನೂ ತಳಹದಿ ಹಂತದಲ್ಲಿಯೇ ಇದೆ. ವಿಳಂಬಕ್ಕೆ ಕಾರಣಗಳೇನು? ಈ ರೀತಿ ವಿಳಂಬ ಮಾಡುವುದು ಸರಿಯಲ್ಲ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.ನೃಪತುಂಗ ಮಂಡಳಿ ಕಟ್ಟಡಕ್ಕೆ ಮನವಿ:ನೃಪತುಂಗ ವಿಶ್ವವಿದ್ಯಾಲಯಕ್ಕೆ ಸಚಿವರು ಭೇಟಿ ನೀಡಿದಾಗ, ವಿವಿಯಲ್ಲಿ ಸದ್ಯ ₹57 ಕೋಟಿ ವೆಚ್ಚದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜತೆಗೆ ಅಂದಾಜು ₹30 ಕೋಟಿ ವೆಚ್ಚದಲ್ಲಿ ಆಡಳಿತ ಮಂಡಳಿ ನಿರ್ಮಾಣಕ್ಕೆ ನೀಲಿನಕ್ಷೆ ರಚನೆ ಮಾಡಲಾಗಿದೆ. ಸರ್ಕಾರದಿಂದ ಅನುಮತಿ ಕೊಡಿಸುವಂತೆ ಆಡಳಿತ ಮಂಡಳಿಯು ಮನವಿ ಮಾಡಿತು.
ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ವಿಶ್ವ ಬ್ಯಾಂಕಿನಿಂದ ಇಲಾಖೆಯ ವಿವಿಧ ಉದ್ದೇಶಗಳಿಗೆ ಸಾಲ ಪಡೆಯಲಾಗುತ್ತಿದೆ. ಸಾಧ್ಯವಾದರೆ ಈ ಹಣದಲ್ಲಿ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು.ಅಲ್ಲದೆ, ನೃಪತುಂಗ ವಿಶ್ವವಿದ್ಯಾಲಯ ತುಂಬೆಲ್ಲ ಕಟ್ಟಡವೇ ಆಗಿದೆ. ಹಳೆಯ ಕಟ್ಟಡದ ಮುಂಭಾಗವಿದ್ದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಮುಂದಾಲೋಚನೆ ಮಾಡಿದ್ದರೆ, ಹಳೆಯ ಕಟ್ಟಡಕ್ಕೆ ಹೊಂದಿಕೊಂಡಂತೆ ನಿರ್ಮಿಸಬಹುದಿತ್ತು. ಇದರಿಂದ ಒಂದಷ್ಟು ಮೈದಾನ ಸಿಗುತ್ತಿತ್ತು. ಮಾಸ್ಟರ್ ಪ್ಲ್ಯಾನ್ ಇಲ್ಲದೆ ಈ ರೀತಿ ಕಟ್ಟಡ ನಿರ್ಮಾಣ ಮಾಡಬೇಡಿ ಎಂದು ಸಚಿವರು ಸೂಚಿಸಿದರು.