ವಿಶ್ವೇಶ್ವರಯ್ಯನವರದ್ದು ಬಹುಮುಖ ಪ್ರತಿಭೆ : ಶಿವಶಂಕರ

| Published : Sep 24 2024, 01:49 AM IST

ವಿಶ್ವೇಶ್ವರಯ್ಯನವರದ್ದು ಬಹುಮುಖ ಪ್ರತಿಭೆ : ಶಿವಶಂಕರ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪದಿಂದ ಸರ್‌.ಎಂ. ವಿಶ್ವೇಶ್ವರಯ್ಯನವರ ಜನ್ಮದಿನ ಆಚರಿಸಲಾಯಿತು.

ಬೀದರ್: ಸರ್.ಎಂ. ವಿಶ್ವೇಶ್ವರಯ್ಯನವರು ಈ ನಾಡು ಕಂಡ ಬಹುಮುಖ ಪ್ರತಿಭೆ. ಅವರು ಕೇವಲ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸದೆ ರಾಜ್ಯಾಡಳಿತ ವ್ಯವಸ್ಥೆ, ರಸ್ತೆ, ಕಟ್ಟಡ, ನೀರಾವರಿ, ಆರ್ಥಿಕತೆ, ಸಾಮಾಜಿಕ ಚಿಂತನೆ, ನಾಡು-ನುಡಿಯ ಬಗ್ಗೆ ಗೌರವ ಮುಂತಾದ ಕಾರಣಗಳಿಗಾಗಿ ಅವರು ನಮಗೆ ಬಹುಮುಖ್ಯ ಎನಿಸುತ್ತಾರೆ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶಿವಶಂಕರ ಕಾಮಶೆಟ್ಟಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವೇಶ್ವರಯ್ಯನವರಿಗೆ ಸದಾ ಸಮಾಜದ ಬಗ್ಗೆ ಕಾಳಜಿ ಇತ್ತು, ಅವರಂತಹ ಎಂಜಿನಿಯರ್‌ಗಳನ್ನು ಈಗ ಹುಡುಕುವುದು ಕಷ್ಟ ಎಂದು ಹೇಳಿದರು.

ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಮಲಿಂಗ ಬಿರಾದಾರ ಮಾತನಾಡಿ, ವಿಶ್ವೇಶ್ವರಯ್ಯನವರು 102 ವರ್ಷ ಬದುಕಿ ಸಾರ್ಥಕ ಮತ್ತು ಸರಳ ಜೀವನ ನಡೆಸಿದವರು ಎಂದು ಹೇಳಿದರು.

ಹಿರಿಯ ಪತ್ರಕರ್ತ ಸದಾನಂದ ಜೋಶಿ ಮಾತನಾಡಿ, ಶೈಕ್ಷಣಿಕ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಪೂರ್ಣಿಮಾ ಅವರು ತಮ್ಮ ಕಷ್ಟದ ಬದುಕಿನಲ್ಲೂ ಉತ್ತಮ ಕಾರ್ಯಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಶೈಕ್ಷಣಿಕ ಸೇವೆ ಅನನ್ಯವಾದದ್ದು ಎಂದರು.

ಜಿಲ್ಲಾ ಪ್ರಥಮ ಶೈಕ್ಷಣಿಕ ಸಮ್ಮೇಳನ ಅಧ್ಯಕ್ಷೆ ಡಾ.ಪೂರ್ಣಿಮಾ ಜಾರ್ಜ್‌ ಅವರು ವಿಶೇಷ ಉಪನ್ಯಾಸ ನೀಡಿ, ವಿಶ್ವೇಶ್ವರಯ್ಯನವರು 1884ರಲ್ಲಿ ಮುಂಬಯಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸೇರಿದರು. ನಂತರ ಭಾರತೀಯ ನೀರಾವರಿ ಆಯೋಗಕ್ಕೆ ಸೇರಿದ ಅವರು ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ಪರಿಚಯಿಸಿದರು.

ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ಬಹಳಷ್ಟು ಶ್ರಮಿಸಿದರು. ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ‘ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸ’ ಕಂಡು ಹಿಡಿದರು. ವಿಶ್ವೇಶ್ವರಯ್ಯನವರ ಸೇವೆಯನ್ನು ಎಷ್ಟು ಹೊಗಳಿದರು ಕಡಿಮೆ ಎಂದು ಹೇಳಿದ ಅವರು, ಪ್ರಥಮ ಶೈಕ್ಷಣಿಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಅಭಿನಂದನೆ ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮ್ಮೇಳನವೊಂದನ್ನು ಯಶಸ್ವಿ ಮಾಡುವಲ್ಲಿ ಜಿಲ್ಲೆಯ ಅನೇಕರ ಶ್ರಮ ಇರುವುದನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಎಂಜಿನಿಯರ್‌ಗಳಾದ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ, ಗಣೇಶ ಶೀಲವಂತ, ಜ್ಞಾನಸುಧಾ ಸಂಸ್ಥೆಯ ನಿರ್ದೇಶಕ ಮುನೇಶ್ವರ ಲಾಖಾ, ಧನರಾಜ್ ಹಂಗರಗಿ ಮತ್ತಿತರು ಇದ್ದರು.

ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಡಾ.ಶ್ರೇಯಾ ಮಹೀಂದ್ರಕರ್ ನಿರೂಪಿಸಿದರೆ ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಮನೋಹರ ವಂದಿಸಿದರು.

ಇದೇ ಸಂದರ್ಭದಲ್ಲಿ ಶೈಕ್ಷಣಿಕ ಸಮ್ಮೇಳನದ ಯಶಸ್ವಿಗೆ ಕೈಜೋಡಿಸಿದ ಸರ್ವರನ್ನೂ ಸಮ್ಮೇಳನಾಧ್ಯಕ್ಷರಾದ ಪೂರ್ಣಿಮಾ ಜಿ. ಅವರು ಗೌರವಿಸಿದರು.