ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಎಬಿವಿಪಿಯಿಂದ ನೂರಾರು ವಿದ್ಯಾರ್ಥಿಗಳ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೆಳಗ್ಗೆ ‘ವಿವೇಕ ರನ್’ ಮ್ಯಾರಾಥಾನ್ ನಡೆಯಿತು.ಇಲ್ಲಿಯ ಬಿವಿಬಿ ಕಾಲೇಜು ಆವರಣದಿಂದ ಪ್ರಾರಂಭಗೊಂಡ ವಿವೇಕ ರನ್ ಮ್ಯಾರಥಾನ್ ಕಿಮ್ಸ್, ಹೊಸೂರ ಸರ್ಕಲ್, ಭಗತ್‌ಸಿಂಗ್ ಸರ್ಕಲ್, ಬಸವವನ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ಬಂದು ಸಂಪನ್ನಗೊಂಡಿತ್ತು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದ ಭಾವಚಿತ್ರವುಳ್ಳ ಬಿಳಿ ಟೀಶರ್ಟ್ ಧರಿಸಿ ಗಮನ ಸೆಳೆದರು.
ಇದಕ್ಕೂ ಪೂರ್ವದಲ್ಲಿ ಬಿವಿಬಿ ಕಾಲೇಜು ಆವರಣದ ಬಳಿ ನಿಲ್ಲಿಸಿದ ಸ್ವಾಮಿ ವಿವೇಕಾನಂದ 15 ಅಡಿ ಎತ್ತರದ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು.ಬಳಿಕ ನಡೆದ ಮ್ಯಾರಥಾನ್‌ಗೆ ಎಬಿವಿಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಬಾಲಕೃಷ್ಣಜೀ ಅವರು ಹಸಿರು ನಿಶಾನೆ ತೋರಿ, ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದ ಸ್ವಾಮಿ ವಿವೇಕಾನಂದರ ಕಲ್ಪನೆ, ಚಿಂತನೆ, ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ. ಯುವಶಕ್ತಿ ಬಗ್ಗೆ ವಿಶ್ವಕ್ಕೆ ಮನವರಿಕೆ ಮಾಡುವ ಜತೆಗೆ ಯುವ ಸಮೂಹವನ್ನು ಜಾಗೃತಗೊಳಿಸಿದ್ದಾರೆ. ಹೀಗಾಗಿ ಯುವ ಸಮುದಾಯ ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡುವ ಮೂಲಕ ಹೆಚ್ಚು ಪ್ರೇರಣೆ ಪಡೆಯಬೇಕು ಎಂದರು.
ಯುವ ರಾಷ್ಟ್ರ ಎಂಬ ಖ್ಯಾತಿ ಪಡೆದ ಭಾರತದಲ್ಲಿ ಶೇ. 69ರಷ್ಟುಯುವ ಸಮುದಾಯವಿದೆ. ಇದನ್ನು ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ಕೈಗೂಡಿಸಿಕೊಳ್ಳುವ ಕೆಲಸ ಆಗಬೇಕಿದೆ. ಹೀಗಾಗಿ, ನಮ್ಮ ಶಕ್ತಿ ನಾವು ಅರಿತು ಮುನ್ನುಗ್ಗಬೇಕು ಎಂದರು.ಪ್ರಾಂತ ಸಂಘಟನಾ ಕಾರ್ಯದರ್ಶಿ ಪೃಥ್ವಿಕುಮಾರ, ನಗರ ಸಂಘಟನಾ ಕಾರ್ಯದರ್ಶಿ ಮೊನಿಶ ವಿ.ಆರ್. ಗೌಡ, ಮಣಿಕಂಠ ಕಳಸಾ, ಸುಶೀಲ ಇಟಗಿ, ರಾಘವೇಂದ್ರ ಪೆದ್ದಾರ ಇತರರು ಇದ್ದರು.