ವಿವೇಕ ವಿದ್ಯಾರ್ಥಿ ಪರೀಕ್ಷೆ: ಪ್ರತಿಭಾವಂತರಿಗೆ ಬಹುಮಾನ ವಿತರಣೆ

| Published : Feb 12 2024, 01:33 AM IST

ಸಾರಾಂಶ

ರ್‍ಯಾಂಕ್‌ ಪಡೆದ ವಿದ್ಯಾರ್ಥಿಗಳಿಗೆ ನಗದು, ಪ್ರಮಾಣಪತ್ರ ವಿತರಿಸಿ ಗೌವಿಸಲಾಯಿತು. 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. 8ನೇ, 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ರಾಮಕೃಷ್ಣ ವಿವೇಕಾನಂದ ಭಾವಪ್ರಚಾರ ಪರಿಷತ್ ವತಿಯಿಂದ ಕಳೆದ ನವೆಂಬರ್ ತಿಂಗಳಲ್ಲಿ ಆಯೋಜಿಸಲಾಗಿದ್ದ ವಿವೇಕ ವಿದ್ಯಾರ್ಥಿ ಲಿಖಿತ ಪರೀಕ್ಷೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರ್‍ಯಾಂಕ್‌ ಗಳಿಸಿದಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಣೆ ಕಾರ್ಯಕ್ರಮ ನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋಶಾಲೆ ಪರಿಸರದಲ್ಲಿ ಜರುಗಿತು.

8ನೇ, 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿವೇಕ ವಿದ್ಯಾರ್ಥಿ ಪರೀಕ್ಷೆ ನಡೆಸಲಾಗಿತ್ತು. ಬೀದರ್ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದರು. ರಾಜ್ಯದ ತುಮಕೂರು ಜಿಲ್ಲೆ ಹೊರತುಪಡಿಸಿದರೆ ಜಿಲ್ಲೆಯಲ್ಲಿಯೇ ಅತ್ಯಧಿಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದಾರೆ.

ವಿಜಯಪುರ-ಗದಗ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ನಿರ್ಭಯಾನಂದ ಸರಸ್ವತಿ ಹಾಗೂ ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರಾದ ಜ್ಯೋತಿರ್ಮಯಾನಂದ ಸ್ವಾಮಿ ನೇತೃತ್ವ ವಹಿಸಿದ್ದರು.

ಬೀದರ್ ಜಿಲ್ಲೆಯಲ್ಲಿ ವಿವೇಕ ವಿದ್ಯಾರ್ಥಿ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಹಿರಿಯ ಪತ್ರಕರ್ತ ಸದಾನಂದ ಜೋಶಿ, ಪ್ರಮುಖರಾದ ಚನ್ನಬಸವ ಹೇಡೆ, ಹಾವಗಿರಾವ ಕಳಸೆ, ಬಾಲಾಜಿ ಪವಾರ್, ಜಯಪ್ರಕಾಶ ಪೊದ್ದಾರ್, ಸಂತೋಷಕುಮಾರ ಪೂಜಾರಿ, ದತ್ತು ತುಪ್ಪದ, ಶರದ್ ನಾರಾಯಣಪೇಟಕರ್, ಶಾಂತಲಿಂಗ ಮಠಪತಿ, ಬಸವರಾಜ ಸೀರೆ, ಅಶೋಕ ಶೆಂಬೆಳ್ಳಿ, ಮಹಾಲಿಂಗ ಖಂಡ್ರೆ, ಮಾರುತಿ ಸಗರ್, ಸಂತೋಷ ಚಿಲ್ಲಾ ಇತರರನ್ನು ಪೂಜ್ಯರು ಸತ್ಕರಿಸಿದರು.

ಜಿಲ್ಲಾಮಟ್ಟದಲ್ಲಿ ರ್‍ಯಾಂಕ್‌ ಗಳಿಸಿದ ವಿದ್ಯಾರ್ಥಿಗಳು: ವಿವೇಕ ವಿದ್ಯಾರ್ಥಿ ಪರೀಕ್ಷೆಯಲ್ಲಿ ಜಿಲ್ಲಾ ಮಟ್ಟದಲ್ಲಿ ರ್‍ಯಾಂಕ್‌ ಪಡೆದ 8, 9, 10ನೇ ತರಗತಿ ಮಕ್ಕಳಿಗೆ ಮೂರೂ ವಿಭಾಗದಲ್ಲಿ ಕ್ರಮವಾಗಿ 2500 ರು., 2,000 ಮತ್ತು 1500 ರು. ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

10ನೇ ತರಗತಿಯಲ್ಲಿ ಬೀದರ್ ವಿದ್ಯಾಶ್ರೀ ಪ್ರೌಢಶಾಲೆಯ ವಿನಾಯಕ (ಪ್ರಥಮ), ಮಂಠಾಳ ಕೆಪಿಎಸ್ ಶಾಲೆಯ ಪ್ರೀತಿ ಶಿವಯ್ಯ (ದ್ವಿತೀಯ) ಹಾಗೂ ದುಬಲಗುಂಡಿ ಬಸವತೀರ್ಥ ವಿದ್ಯಾಪೀಠದ ಪ್ರಜ್ವಲ್ ಲಕ್ಷ್ಮಣ ತೃತೀಯ ಸ್ಥಾನ ಪಡೆದರು.

9ನೇ ತರಗತಿಯಲ್ಲಿ ಭಾಲ್ಕಿ ಕರಡ್ಯಾಳ ಗುರುಕುಲದ ಸ್ವಪ್ನಾ ರಾಜಕುಮಾರ (ಪ್ರಥಮ), ಸಂತಪುರ ಅನುಭವ ಮಂಟಪ ಗುರುಕುಲದ ಗಿರೀಶ್ ಬಸವರಾಜ (ದ್ವಿತೀಯ) ಮತ್ತು ಬೀದರ್ ಜನಸೇವಾ ಶಾಲೆಯ ಶ್ರೇಯಾ ತೃತೀಯ ಸ್ಥಾನ ಬಾಚಿದರು.

8ನೇ ತರಗತಿಯಲ್ಲಿ ಔರಾದ್ ಮೊರಾರ್ಜಿ ದೇಸಾಯಿ ಶಾಲೆಯ ದಿವ್ಯಾ ಬಸವರಾಜ (ಪ್ರಥಮ), ನಿಟ್ಟೂರ್ ವೀರಭದ್ರೇಶ್ವರ ಶಾಲೆಯ ರೇವಣಸಿದ್ದಯ್ಯ (ದ್ವಿತೀಯ) ಮತ್ತು ಹಳ್ಳಿಖೇಡ್ ಬಸವತೀರ್ಥ ಶಾಲೆಯ ವೆಂಕಟರೆಡ್ಡಿ ತೃತೀಯ ಪಡೆದರು. ತಾಲೂಕು ಮಟ್ಟದಲ್ಲಿ ಸಹ ಮೂರೂ ವಿಭಾಗದಲ್ಲಿನ ಮಕ್ಕಳಿಗೆ ಬಹುಮಾನ, ಪ್ರಮಾಣಪತ್ರ ನೀಡಿ ಸತ್ಕರಿಸಲಾಯಿತು.