ಸಾರಾಂಶ
ಮಕ್ಕಳ ಶಿಕ್ಷಣದ ಬಗ್ಗೆಯು ವಿಶೇಷ ಆಸಕ್ತಿ ವಹಿಸಿ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ಸೇವಾಕ್ಷೇತ್ರದಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ
ಕನ್ನಡಪ್ರಭ ವಾರ್ತೆ ಮಧುಗಿರಿ
ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ ಶ್ರೀಸ್ವಾಮಿ ಜಪಾನಂದಜೀ ಅವರು ಸಮಾಜದ ಎಲ್ಲರ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣದ ಬಗ್ಗೆಯು ವಿಶೇಷ ಆಸಕ್ತಿ ವಹಿಸಿ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ತಮ್ಮ ಸೇವಾಕ್ಷೇತ್ರದಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ನುಡಿದರು.ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂಭಾಗದ ಶ್ರೀಸಿದ್ಧಗಂಗಾ ಡಯಾಲಿಸಿಸ್ ಕೇಂದ್ರ ಮತ್ತು ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆಯಲ್ಲಿ ಶನಿವಾರ ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ವಿಶೇಷ ಗಮನ ಹರಿಸಿರುವ ಪಾವಗಡದ ಶ್ರೀಸ್ವಾಮಿ ಜಪಾನಂದಜೀ ತಾಲೂಕು ಮಟ್ಟದಿಂದ ಹೋಬಳಿ ಮಟ್ಟದ ಗ್ರಾಮೀಣ ಜನತೆಗೂ ಆರೋಗ್ಯ ರಕ್ಷಣೆ ತಲುಪುತ್ತಿದ್ದು, ಇದರ ಜೊತೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮಾಡಿರುವುದು ನಿಜಕ್ಕೂ ಅವರ ಜನಮುಖಿ ಶಕ್ತಿ ಮೆಚ್ಚುವಂಥದ್ದು ಎಂದರು.ಅತ್ಯಂತ ಹಿಂದುಳಿದ ಪಾವಗಡ ತಾಲೂಕಿನಲ್ಲಿ ಸಾವಿರಾರು ರೋಗಿಗಳಿಗೆ ಮುದುಡಿದ್ದ ಕೈಕಾಲುಗಳಿಗೆ ಶಕ್ತಿ ತುಂಬಿ ಆರೈಕೆ ಮಾಡಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನಿಜವಾದ ಸಮಾಜ ಸೇವೆ ಮಾಡಿರುವ ಅವರು, ಮಧುಗಿರಿಯಲ್ಲಿ ಡಯಾಲಿಸಿಸ್ ಕೇಂದ್ರ ತೆರೆದು ಬಡವರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದರು.
ಪಾವಗಡದ ಶ್ರೀಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾದ ಶ್ರೀಸ್ವಾಮಿ ಜಪಾನಂದಜೀ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅವರಿಗೆ ಆರೋಗ್ಯ ಯೋಗ ಕ್ಷೇಮ ನೋಡಿಕೊಳ್ಳುತ್ತಾ ಉತ್ತಮ ಶಿಕ್ಷಣ ನೀಡಿದಲ್ಲಿ ಭಾರತದ ಭವಿಷ್ಯ ಉಜ್ವಲವಾಗುತ್ತದೆ.ಇದಕ್ಕೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ,ಉದಾರ ದಾನಿಗಳು ನಮ್ಮ ಜೊತೆ ಕೈ ಜೋಡಿಸಿದರೆ ನವ ಭಾರತ ನಿರ್ಮಾಣ ಸುಲಭವಾಗಲಿದೆ.ಗ್ರಾಮೀಣರು ಅತ್ಯಂತ ಮುಗ್ದರು,ಅವರಿಗೆ ಆರೋಗ್ಯದ ರಕ್ಷಣೆ ಬಗ್ಗೆ ವಿಶೇಷ ಮಾಹಿತಿ ಒದಗಿಸಿ ಚಿಕಿತ್ಸೆ ನೀಡುವ ಮೂಲಕ ಬಲಿಷ್ಠ ಭಾರತ ಕಟ್ಟೋಣ ಎಂದು ಆಶಿಸಿದರು.ತುಮಕೂರಿನ ಶ್ರೀಸಿದ್ಧಗಂಗಾ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ತೆಯ ಪ್ರಾಂಶುಪಾಲರಾದ ಡಾ.ಶಾಲಿನಿ ಮಾತನಾಡಿದರು. ದಾನಿಗಳಾದ ಎಚ್.ಬಿ.ಶಿವಕುಮಾರ್ 90 ಸಾವಿರ ರು.ಬೆಲೆ ಬಾಳುವ ಇಸಿಜಿ ಯಂತ್ರವನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು.ಸುಮಾರು 200ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್,ಹಿರಿಯ ತಜ್ಞ ವೈದ್ಯ ಡಾ . ಜಯರಾಮ್, ದಾನಿಗಳಾದ ಎಚ್.ಬಿ.ರುದ್ರೇಶ್ ,ಶ್ರೀಸಿದ್ಧಗಂಗಾ ಆಸ್ಪತ್ರೆಯ ಸಿಇಒ ಡಾ.ಸಂಜೀವ್ ಕುಮಾರ್, ಡಾ.ಚಂದ್ರಶೇಖರ್, ವಾಕ್ ಮತ್ತು ಶ್ರವಣ ಸಂಸ್ಥೆಯ ಯೋಜನಾಧಿಕಾರಿ ರಿತುರಾಜನ್, ತಜ್ಞ ವೈದ್ಯರುಗಳಾದ ಡಾ.ಡಿ.ಪಿ.ಕುಶಾಲ್, ಡಾ. ನಟರಾಜ್,ಡಾ. ಮಹಾದೇವ್, ಡಾ.ಶೋಭಾ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಎಂಜಿಎಂ ನ್ಯಾಷನಲ್ ಸೊಸೈಟಿ ಕಾರ್ಯದರ್ಶಿ ಎಂ.ಎಸ್.ಶಂಕರನಾರಾಯಣ್, ಸಂಯೋಜಕರಾದ ಅನುರಾಧ ,ಅಕ್ಷಯ್, ಉಮಶಂಕರ್,ಎಚ್.ಆರ್.ಶಶಿಕುಮಾರ್ , ಗೀತಾಪಣೀಶ್ ಇತರರು ಉಪಸ್ಥಿತರಿದ್ದರು.