ಸಾರಾಂಶ
ಹಾವೇರಿ: ಸ್ವಾಮಿ ವಿವೇಕಾನಂದರ ಬದುಕು ದೇಶದ ಭವಿಷ್ಯದ ಯುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ಪ್ರೇರಣಾಶಕ್ತಿಯಾಗಿದೆ ಎಂದು ಶಿಕ್ಷಣಪ್ರೇಮಿ ಎಂ.ಕೆ. ಪಾಟೀಲ ಹೇಳಿದರು.
ಸ್ಥಳೀಯ ಬಸವೇಶ್ವರ ನಗರದ ೧೨ನೇ ಕ್ರಾಸ್‌ನಲ್ಲಿರುವ ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಸ್ವಾಮಿ ವಿವೇಕಾನಂದ ಪಿಯು ಕಾಲೇಜು ಸಹಯೋಗದೊಂದಿಗೆ ಆಯೋಜಿಸಿದ ಸ್ವಾಮಿ ವಿವೇಕಾನಂದರ ಜಯಂತಿ-ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತ ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಶ್ವದಲ್ಲಿ ಪ್ರಸಾರ ಮಾಡಿದ ಸಂತರಾಗಿ ಸ್ವಾಮಿ ವಿವೇಕಾನಂದರು ಎಲ್ಲರ ಮನ ಗೆದ್ದಿದ್ದಾರೆ. ಅವರ ಜೀವನದ ತತ್ವ-ಸಿದ್ಧಾಂತಗಳು ನಮಗೆ ಆದರ್ಶಪ್ರಾಯವಾಗಿವೆ. ಅವುಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕಿದೆ ಎಂದರು.ಸಂಪನ್ಮೂಲ ವ್ಯಕಿಗಳು ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಸದಸ್ಯರಾದ ಹನಮಂತಪ್ಪ ಗೊಲ್ಲರ ಮಾತನಾಡಿ, ಪ್ರಚಂಡ ಇಚ್ಛಾಶಕ್ತಿ, ತಮ್ಮ ಚಾಣಾಕ್ಷತನ, ಪ್ರಖರ ವಾಗ್ಮಿತನದ ಮೂಲಕ ವಿಶ್ವದಲ್ಲಿ ತಮ್ಮದೆ ಆದ ಚಾಪು ಮೂಡಿಸಿದವರು ಸ್ವಾಮಿ ವಿವೇಕಾನಂದರು. ಅವರ ಬದುಕು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನರಿಗೆ ಮಾದರಿಯಾಗಿದೆ. ಅವರ ಜೀವನ ಸಂದೇಶವನ್ನು ನಾವೆಲ್ಲರೂ ಅಳವಡಿಸಿಕೊಂಡು ಉಜ್ವಲ ಭಾರತಕ್ಕೆ ನಾವು ಕೊಡುಗೆ ನೀಡುವಂತವರಾಗಬೇಕು ಎಂದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಗೌರವ ಕಾಯಾಧ್ಯಕ್ಷ ಸಂಜೀವಕುಮಾರ ನೀರಲಗಿ ಅವರು, ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ಸಂದೇಶ ಪಾಲನೆ ಮಾಡುವಂತೆ ಕೋರಿದರು.ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಪ್ರಾಚಾರ್ಯ ರವಿಕುಮಾರ ಪೂಜಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಹಾಗೂ ಯುವಜನರ ನಿಜವಾದ ಬದುಕಿನ ಹೀರೋಗಳು. ನಮಗೆ ಉತ್ತಮ ಮಾರ್ಗದರ್ಶನ ಹಾಗೂ ಬದುಕಿಗೆ ಪ್ರೇರಣೆ ನೀಡಿದವರು. ಸ್ವಾಮಿ ವಿವೇಕಾನಂದರ ಜೀವನದ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಅವರ ಸಂದೇಶ-ಆದರ್ಶಗಳನ್ನು ಅಳವಡಿಸಿಕೊಂಡರೆ ತಮ್ಮ ಗುರಿ ಸಾಧನೆಗೆ ಸಹಕಾರಿಯಾಗಲಿದೆ ಎಂದರು.
ಭಾರತೀಯ ರೆಡ್‌ಕ್ರಾಸ್ ಖಜಾಂಚಿ, ಬ್ಲಡ್ ಬ್ಯಾಂಕ್ ಸಮಿತಿಯ ಕಾಯಾಧ್ಯಕ್ಷ ಪ್ರಭು ಹಿಟ್ನಳ್ಳಿ, ಜಿಲ್ಲಾ ಗೌರವ ಸಹಕಾರ್ಯದರ್ಶಿ ನಿಂಗಪ್ಪ ಆರೇರ, ಜಿಲ್ಲಾ ಸಮಿತಿ ಸದಸ್ಯರಾದ ರವಿ ಹಿಂಚಿಗೇರಿ, ಉಪನ್ಯಾಸಕರಾದ ಅನಿಷಾ ಮಹೇಂದ್ರಕರ, ಕಾವ್ಯಾ ಪವಲಿ, ಪ್ರಮೋದ ಬಣಕಾರ, ನೀತಾ ಬಳ್ಳಾರಿ, ಸಂಯೋಜಕರಾದ ಡಾ. ಅಂಕಿತಾ ಆನಂದ, ಇರ್ಶಾದಅಲಿ ದುಂಡಸಿ ಹಾಗೂ ವಿದ್ಯಾರ್ಥಿಗಳು ಇದ್ದರು.ವಿದ್ಯಾರ್ಥಿನಿ ಸಂಗೀತಾ ಶ್ಯಾಕಾಪುರ ಪ್ರಾರ್ಥಿಸಿದರು. ಚನ್ನಮ್ಮ ಬೂದಿಹಾಳ ಸ್ವಾಗತಿಸಿದರು. ರಕ್ಷಿತಾ ನಾಗಜ್ಜೆನವರ ಕಾರ್ಯಕ್ರಮ ನಿರೂಪಿಸಿದರು. ಭೂಮಿಕಾ ಎಸ್. ವಂದಿಸಿದರು.