ಜನಗಣತಿ ವೇಳೆ ಒಕ್ಕಲಿಗರು ನಿಖರ ಮಾಹಿತಿ ನೀಡಬೇಕು: ಶ್ರೀಪ್ರಸನ್ನನಾಥ ಸ್ವಾಮೀಜಿ

| Published : Aug 24 2025, 02:00 AM IST

ಜನಗಣತಿ ವೇಳೆ ಒಕ್ಕಲಿಗರು ನಿಖರ ಮಾಹಿತಿ ನೀಡಬೇಕು: ಶ್ರೀಪ್ರಸನ್ನನಾಥ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗ ನಡೆಯುವ ಜನಗಣತಿ ವರದಿಯ ಆಧಾರದ ಮೇಲೆ ಮೀಸಲಾತಿ ನಿಗಧಿಯಾಗಲಿದೆ. ಆದ್ದರಿಂದ ಜನಗಣತಿ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೆ ಹಾಗೂ ಹುಂಬುತನ ತೋರದೆ ಖಚಿತ ಮಾಹಿತಿ ನೀಡಬೇಕು. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಬಹಳ ಎಚ್ಚರದಿಂದ ಮಾಹಿತಿ ನೀಡಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಒಕ್ಕಲಿಗ ಸಮಾಜದ ಪ್ರತಿಯೊಬ್ಬರೂ ಜನಗಣತಿ ವೇಳೆ ನಿಖರವಾದ ಮಾಹಿತಿ ನೀಡುವಂತೆ ಗ್ರಾಮವಾರು ಅರಿವು ಮೂಡಿಸುವ ಮೂಲಕ ಸದೃಢ ಸಮಾಜ ಕಟ್ಟುವ ಕೆಲಸವಾಗಬೇಕು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಒಕ್ಕಲಿಗ ಸಮಾಜದ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿ, ಈಗ ನಡೆಯುವ ಜನಗಣತಿ ವರದಿಯ ಆಧಾರದ ಮೇಲೆ ಮೀಸಲಾತಿ ನಿಗಧಿಯಾಗಲಿದೆ. ಆದ್ದರಿಂದ ಜನಗಣತಿ ಸಮಯದಲ್ಲಿ ಯಾವುದೇ ಗೊಂದಲಗಳಿಗೆ ಒಳಗಾಗದೆ ಹಾಗೂ ಹುಂಬುತನ ತೋರದೆ ಖಚಿತ ಮಾಹಿತಿ ನೀಡಬೇಕು. ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ವಿಚಾರಗಳಿಗೆ ಸಂಬಂಧಿಸಿದ ವಿವರಗಳ ಬಗ್ಗೆ ಬಹಳ ಎಚ್ಚರದಿಂದ ಮಾಹಿತಿ ನೀಡಬೇಕು ಎಂದರು.

ಸಮುದಾಯದ ಮುಖಂಡರು ಪ್ರತಿ ಗ್ರಾಪಂ ಹಂತದಲ್ಲಿ ತಂಡಗಳನ್ನು ರಚಿಸಿಕೊಂಡು ಹಳ್ಳಿಗಳಿಗೆ ತೆರಳಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಜನಗಣತಿ ವೇಳೆ ನಿಖರ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು.

ರಾಜ್ಯದಲ್ಲಿ ಕಾಂತರಾಜು ಆಯೋಗ ಬಂದ ನಂತರ 61.45 ಲಕ್ಷ ಜನ ಮಾತ್ರ ಒಕ್ಕಲಿಗರಿದ್ದಾರೆಂದು ವರದಿ ಕೊಟ್ಟಿದ್ದಾರೆ. ಮಾಹಿತಿಯನ್ನು ಎಷ್ಟೇ ನೀಡಿದ್ದರೂ ಪರವಾಗಿಲ್ಲ. ಆದರೆ, ಜನಗಣತಿ ಮಾಡಿರುವ ಯಾರೂ ಕೂಡ ಯಾರ ಮನೆಗಳಿಗೂ ತೆರಳಿ ಮಾಹಿತಿ ಪಡೆದಿಲ್ಲ. ಮನೆಗಳಿಗೆ ತೆರಳಿ ಮಾಹಿತಿ ಪಡೆಯದೆ ವರದಿ ಹೇಗೆ ಕೊಟ್ಟಿದ್ದಾರೆ. ಈ ಎಲ್ಲವನ್ನು ಪ್ರಶ್ನಿಸಿದ ನಂತರ ಈ ವರದಿಯಲ್ಲಿ ತಪ್ಪಿದೆ ಎಂದು ಮರುಜನಗಣತಿ ನಡೆಸುತ್ತಿದ್ದಾರೆ ಎಂದರು.

ಸೆ.22 ರಿಂದ ಅ.7ರ ವರೆಗೆ ಜನಗಣತಿ ನಡೆಯಲಿದೆ. ಯಾರೂ ಕೂಡ ತಪ್ಪಿಸದೆ ಮಾಹಿತಿ ನೀಡಬೇಕು. ಸಮಾಜದ ಜನರಿಗೆ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ಶ್ರೀಮಠ ಹಾಗೂ ಒಕ್ಕಲಿಗ ಸಂಘ-ಸಂಸ್ಥೆಗಳು ಕಟಿಬದ್ದವಾಗಿವೆ ಎಂದು ತಿಳಿಸಿದರು.

ಒಕ್ಕಲಿಗ ನಿಗಮಕ್ಕೆ 264 ಕೋಟಿ ರು. ಹಣ ಬಂದಿದೆ. ಆದರೆ, ಅದು ಯಾರಿಗೆ ತಲುಪುತ್ತಿದೆ ಎಂಬುದು ಇದುವರೆಗೂ ತಿಳಿಯುತ್ತಿಲ್ಲ. ಕೆಲವರಿಗೆ ಮಾತ್ರ ನಿಗಮದಿಂದ ಸೌಲಭ್ಯಗಳು ತಲುಪುತ್ತಿವೆ. ಉಳಿದ ಹಣ ಸರ್ಕಾರಕ್ಕೆ ವಾಪಸ್ಸು ಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರು ಜಾಗೃತರಾಗಬೇಕಿದೆ. ಶ್ರೀಮಠ ಎಲ್ಲಾ ಜಿಲ್ಲೆಗಳಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದರು.

ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು ಮಾತನಾಡಿ, ಒಕ್ಕಲಿಗ ಜನಾಂಗಕ್ಕೆ ಅನ್ಯಾಯವಾಗದಂತೆ ನಮ್ಮ ಸಮಾಜದ ಶ್ರೀಗಳು ಹಾಗೂ ರಾಜ್ಯ ಒಕ್ಕಲಿಗರ ಸಂಘ ಹೋರಾಟ ನಡೆಸುತ್ತಿದೆ. ಬೇರೆ ಜಾತಿಗಳಿಗಿಂತ ನಾವು ಹೆಚ್ಚಿದ್ದೇವೆ ಎಂಬುದನ್ನು ನಿರೂಪಿಸಬೇಕಿದೆ ಎಂದರು.

ಸೈನಿಕರ ರೀತಿಯಲ್ಲಿ ನಮ್ಮ ಜನಾಂಗದ ಮುಖಂಡರು ನಮ್ಮ ಜನಾಂಗದ ಕುರಿತಾಗಿ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕಿದೆ. ಜಾತಿಗಣತಿಯನ್ನು ನಾವು ನಿರ್ಲಕ್ಷ್ಯ ಮಾಡಿದರೆ ಮುಂದೆ ನಮ್ಮ ಮಕ್ಕಳು ಬೀದಿಗೆ ಬೀಳಲಿದ್ದಾರೆ ಎಂದು ಎಚ್ಚರಿಸಿದರು.

ಇತರೆ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ ಎಂದು ಬಿಂಬಿಸಲು ಮುಂದಾಗಿದ್ದಾರೆ. ಏಕೆಂದರೆ ಮೀಸಲಾತಿಯ ಪ್ರಮಾಣ ಹೆಚ್ಚಿಸಿಕೊಳ್ಳುವ ಹುನ್ನಾರ ನಡೆಯುತ್ತಿದೆ. ಹಾಗಾಗಿ ಜಾತಿಗಣತಿ ಸಂದರ್ಭದಲ್ಲಿ ನಿಖರ ಮಾಹಿತಿ ನೀಡುವ ಮೂಲಕ ಸಮಾಜವನ್ನು ಕಟ್ಟುವ ಕೆಲಸ ಮಾಡಿ ಎಂದು ಮನವಿ ಮಾಡಿದರು.

ಒಕ್ಕಲಿಗರ ಹೋರಾಟ ಸಮಿತಿ ಕಾರ್ಯದರ್ಶಿ ನಾಗರಾಜು ಮಾತನಾಡಿ, ಹಲವು ಆಯೋಗಗಳು ನಮ್ಮ ಜನಾಂಗಕ್ಕಿದ್ದ ಮೀಸಲಾತಿ ಕಡಿತಗೊಳಿಸಿದರು. 2013ರಲ್ಲಿ ಸಿದ್ದರಾಮಯ್ಯ ಅವರು ಕಾಂತರಾಜು ಆಯೋಗದಲ್ಲಿ ನಮ್ಮ ಜನಾಂಗವನ್ನು ಕಡಿಮೆ ತೋರಿಸಿದ್ದಾರೆ. ಕೇವಲ ಶೇ.03ರಷ್ಟು ಇದ್ದಂತಹ ಒಂದು ವರ್ಗಕ್ಕೆ ಶೇ.10 ರಷ್ಟು ಮೀಸಲಾತಿ ನೀಡಿದ್ದಾರೆ ಎಂದರು.

ಕಾಂತರಾಜು ಸಮಿತಿಯ ವಿರೋಧಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಎಸ್.ಎಂ.ಕೃಷ್ಣ, ಸದಾನಂದಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಮುಂತಾದವರು ಸಹಿ ಹಾಕಿದ್ದಾರೆ. ಇದೆಲ್ಲದರ ಪರಿಣಾಮ ಈಗ ಪುನರ್ ಗಣತಿಗೆ ಆದೇಶ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಗೆ ತೆಗೆದುಕೊಳ್ಳಬೇಕಿದೆ. ಆದ್ದರಿಂದ ಎಲ್ಲರೂ ಸರಿಯಾದ ಮಾಹಿತಿ ನೀಡಿ ಎಂದರು.

ಸಭೆಯಲ್ಲಿ ಒಕ್ಕಲಿಗರ ಹೋರಾಟ ಸಮಿತಿ ಅಧ್ಯಕ್ಷ ಎಂ.ನಾಗರಾಜು ಮಾತನಾಡಿದರು. ಸಭೆ ಆರಂಭಕ್ಕೂ ಮುನ್ನ ವಿಶ್ವಒಕ್ಕಲಿಗರ ಮಠದ ಸಂಸ್ಥಾಪಕ ಪೀಠಾಧ್ಯಕ್ಷ ಶ್ರೀಕುಮಾರಚಂದ್ರಶೇಖರ ಸ್ವಾಮೀಜಿ ಅವರ ನಿಧನಕ್ಕೆ ಮೌನಾಚರಣೆ ಮಾಡಲಾಯಿತು.

ಸಭೆಯಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಸಿ.ಎನ್.ಮಂಜುನಾಥ್, ಟೌನ್ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜು, ಒಕ್ಕಲಿಗ ಸಹಕಾರ ಸಂಘದ ಅಧ್ಯಕ್ಷ ನಾಗೇಶ್, ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮೂಡ್ಲೀಗೌಡ, ಮುಖಂಡರಾದ ಎಚ್.ಟಿ.ಕೃಷ್ಣೇಗೌಡ, ಬಿ.ರಾಜೇಗೌಡ, ಕೊಣನೂರು ಹನುಮಂತು, ಕಂಚನಹಳ್ಳಿಬಾಲು, ಗೌರೀಶ್, ಎಸ್.ಎಂ.ಯದುರಾಜು, ಎನ್.ಕೆ.ವಸಂತಮಣಿ, ಗೀತಾ ದಾಸೇಗೌಡ ಸೇರಿದಂತೆ ಹಲವರು ಇದ್ದರು.