ವಾಲಿಬಾಲ್‌: ಕಣ್ತಣಿಸಿದ ಕರ್ನಾಟಕ, ತಮಿಳುನಾಡು ಪಂದ್ಯ

| Published : Oct 07 2024, 01:35 AM IST

ಸಾರಾಂಶ

ಚನ್ನರಾಯಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿರುವ ಆಲ್ ಇಂಡಿಯಾ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಮೊದಲ ಆಟವಾಡಿದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಜನರಿಗೆ ತಮ್ಮ ಆಟದ ಮೂಲಕ ರಸದೌತಣ ನೀಡಿದವು.

ವಾಲಿಬಾಲ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಿದ ಚಿಯರ್‌ ಗರ್ಲ್ಸ್ । ಆಟದ ಮೆರಗು ಹೆಚ್ಚಿಸಿದ ಡೊಳ್ಳು ಗೊಂಬೆಗಳು । ಆಗಾಗ್ಗೆ ಸುರಿದ ಮಳೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಮಾಧ್ಯಮಿಕ ಶಾಲಾ ಆವರಣದಲ್ಲಿ ಆಯೋಜಿಸಿರುವ ಆಲ್ ಇಂಡಿಯಾ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಮೊದಲ ಆಟವಾಡಿದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಜನರಿಗೆ ತಮ್ಮ ಆಟದ ಮೂಲಕ ರಸದೌತಣ ನೀಡಿದವು.

ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹಕಾರದಿಂದ ಅಯೋಜಿಸಲಾಗಿದ್ದ ವರ್ಣರಂಜಿತ ವಾಲಿಬಾಲ್ ಪಂದ್ಯಾವಳಿಗೆ ವರ್ಣರಂಜಿತ ವೇದಿಕೆಯನ್ನು ಸೃಷ್ಟಿ ಮಾಡಲಾಗಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿಯವರ ೫೪ ನೇ ವರ್ಷದ ಹುಟ್ಟುಹಬ್ಬದ ಸಲುವಾಗಿ ಆಯೋಜಿಸಿದ್ದ ಪಂದ್ಯಾವಳಿಗೆ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಸೇರಿದಂತೆ ಅನೇಕ ಗಣ್ಯರು ದೀಪ ಬೆಳಗಿಸಿ, ನೆಟ್‌ಗೆ ಕಟ್ಟಲಾಗಿದ್ದ ವಾಲಿಬಾಲ್‌ನ್ನು ಬಿಡುಗಡೆಗೊಳಿಸುವ ಮೂಲಕ ಚಾಲನೆ ನೀಡಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ರಾಜಕೀಯದ ಜತೆಗೆ ಸಾರ್ವಜನಿಕರ ಮುಖಂಡ ಎಂ.ಎ.ಗೋಪಾಲಸ್ವಾಮಿಯವರು ಯುವಕರಿಗೆ, ಕ್ರೀಡಾಸಕ್ತರಿಗೆ ವಿವಿಧ ರಾಜ್ಯಗಳಿಂದ ತಂಡಗಳನ್ನು ಕರೆಸಿ ಮನರಂಜನೆ ನೀಡುತ್ತಿದ್ದಾರೆ. ರಾಜಕೀಯ ನಿಂತ ನೀರಲ್ಲ, ಸೋತು ಗೆದ್ದವರೇ ಎಲ್ಲರೂ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅತ್ಯಲ್ಪ ಮತಗಳ ಅಂತರದಿಂದ ಸೋತರೂ, ಕ್ಷೇತ್ರದಲ್ಲಿ ಜನರ ಕಷ್ಟ, ಸಮಸ್ಯೆ ಆಲಿಸುತ್ತಿರುವ ಮುಖಂಡ ಎಂ.ಎ.ಗೋಪಾಲಸ್ವಾಮಿಯವರಿಗೆ ಶೀಘ್ರವೇ ಒಳ್ಳೆ ದಿನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕ್ರೀಡಾಪ್ರೇಮಿಗಳು ತಮ್ಮ ನೆಚ್ಚಿನ ವಾಲಿಬಾಲ್ ನೋಡಲು ಸಾವಿರಾರು ಕ್ರೀಡಾಸಕ್ತರು ಕಿಕ್ಕಿರಿದು ಸೇರಿದ್ದರು. ಜಗಮಗಿಸುವ ಬಣ್ಣ, ಬಣ್ಣದ ಲೈಟುಗಳು, ೫ ಸಾವಿರ ಮಂದಿ ಕೂತು ನೋಡಬಹುದಾದ ಪೇಕ್ಷಕರ ಗ್ಯಾಲರಿ, ಇವೆಲ್ಲವಕ್ಕೂ ಮೆರಗು ನೀಡುವಂತೆ ರಾಷ್ಟ್ರವನ್ನು ಪ್ರತಿನಿಧಿಸಿದ ಅತ್ಯುತ್ತಮ ಆಟಗಾರರ ಆಟ ನೆರೆದಿದ್ದ ಪೇಕ್ಷಕರ ಗಣ್ಯರ ಮೆಚ್ಚುಗೆ ಗಳಿಸಿತ್ತು. ಪ್ರತಿ ಆಟದ ಮಧ್ಯೆ ಬಂದು ಕುಣಿಯುವ ಚಿಯರ್ ಗರ್ಲ್ ಮತ್ತು ಡೊಳ್ಳು ಗೊಂಬೆಗಳು ಆಟದ ಮೆರಗನ್ನು ಮತ್ತಷ್ಟು ಹೆಚ್ಚು ಮಾಡಿತ್ತು.

ಆಗಾಗ ಬಂದು ಹೋಗುತ್ತಿದ್ದ ಸೋನೆ ಮಳೆಯ ನಡುವೆಯೂ ಮೊದಲ ಪಂದ್ಯವಾಡಿದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಜನರಿಗೆ ತಮ್ಮ ಆಟದ ಮೂಲಕ ರಸದೌತಣ ನೀಡಿದವು. ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಸಹಕಾರದಿಂದ ಅಯೋಜಿಸಲಾಗಿದ್ದ ವರ್ಣರಂಜಿತ ವಾಲಿಬಾಲ್ ಪಂದ್ಯಾವಳಿಗೆ ವರ್ಣರಂಜಿತ ವೇದಿಕೆಯನ್ನು ಸೃಷ್ಟಿ ಮಾಡಲಾಗಿತ್ತು. ಮೂರು ದಿನಗಳ ಪಂದ್ಯಾವಳಿಗೆ ಮೊದಲ ದಿನವೇ ಮಳೆರಾಯನ ಕಾಟ ಎದುರಾಗಿ ೨ಘಂಟೆ ತಡವಾಗಿ ಟೂರ್ನಿಗೆ ಚಾಲನೆ ನೀಡಲಾಯಿತು.

ಇದೇ ವೇಳೆ ಹಿರಿಯ ವಾಲಿಬಾಲ್ ಆಟಗಾರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಎಂ.ಎ.ಗೋಪಾಲಸ್ವಾಮಿಯವರ ಹುಟ್ಟುಹಬ್ಬಕ್ಕೆ ಸಚಿವ ಚಲುವರಾಯಸ್ವಾಮಿ, ಸಂಸದ ಶ್ರೇಯಸ್ ಪಟೇಲ್, ವರ್ತೂರ್ ಸಂತೋಷ್, ತನಿಷಾ, ರಕ್ಷಕ್‌ ಬುಲೆಟ್ ಸೇರಿದಂತೆ ಅನೇಕ ಚಲನಚಿತ್ರ ನಟರು ಆಗಮಿಸಿ ಶುಭಾಷಯ ಕೋರಿದರು.

ಮಾಜಿ ಎಂಎಲ್ಲಿ ಎಂ.ಎ.ಗೋಪಾಲಸ್ವಾಮಿ, ಮುಖಂಡ ಬಾಗೂರು ಪುಟ್ಟರಾಜು, ಮುರಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ಮಂಜೇಗೌಡ, ಕರ್ನಾಟಕ ರಾಜ್ಯ ವಾಲಿಬಾಲ್ ಅಸೊಸಿಯೇಷನ್ ಪ್ರಧಾನ ಕಾರ್ಯದರ್ಶಿ ನಂದಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಆರ್.ಮೂರ್ತಿ, ಗ್ಯಾರಂಟಿ ಯೋಜನೆ ಸಮಿತಿ ತಾ.ಅಧ್ಯಕ್ಷ ಪ್ರಕಾಶ್‌ಗೌಡ, ಜಿಪಂ ಮಾಜಿ ಸದಸ್ಯ ಎಂ.ಎ.ರಂಗಸ್ವಾಮಿ, ಅಶೋಕ್, ಜಗದೀಶ್ ಇದ್ದರು.