ಬ್ಯಾಡಗಿ: ಪಟ್ಟಣದಲ್ಲಿನ ಮುಖ್ಯರಸ್ತೆ ವರ್ತಕ ಸಂಜಯ ಜೈನ್ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಕಟ್ಟಡವನ್ನು ತೆರವುಗೊಳಿಸಿಕೊಂಡು ಮುಖ್ಯರಸ್ತೆ ಅಗಲೀಕರಣಕ್ಕೆ ಶುಭಾರಂಭ ನೀಡಿದ್ದಲ್ಲದೇ ಸರ್ಕಾರದ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುವ ಮೂಲಕ ಇನ್ನಿತರ ವರ್ತಕರಿಗೆ ಮಾದರಿಯಾಗಿದ್ದಾರೆ.
ಸಂಜಯ ಜೈನ್ ವಾರದ ಹಿಂದಷ್ಟೇ ಶಾಸಕ ಬಸವರಾಜ ಶಿವಣ್ಣನವರ ಸಮ್ಮುಖದಲ್ಲಿ ಪರಿಹಾರದ ಮೊತ್ತವನ್ನು ಪಡೆದುಕೊಂಡಿದ್ದರು. ಅಂದು ಅವರು ನಮ್ಮ ಕಟ್ಟಡವನ್ನು ನಾನೇ ಖುದ್ದಾಗಿ ತೆರವುಗೊಳಿಸಿಕೊಳ್ಳುತ್ತೇನೆ ಎಂದು ಭರವಸೆಯನ್ನೂ ನೀಡಿದ್ದರು, ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಅವರು ಇದೀಗ ಜೆಸಿಬಿ ಯಂತ್ರದ ಮೂಲಕ ತಮ್ಮ ಅಂಗಡಿ ತೆರವುಗೊಳಿಸಿಕೊಂಡಿದ್ದಾರೆ.ವಿರೋಧಿ ಪಾಳಯದಲ್ಲಿದ್ದ ಸಂಜಯ್:
ಈ ಮೊದಲು ಅಗಲೀಕರಣ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಸಂಜಯ ಜೈನ್ ಅಗಲೀಕರಣ ಮಾಡದಂತೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದೀಗ ಹೈಕೋರ್ಟ್ ಎಲ್ಲ ಕೇಸ್‌ಗಳನ್ನು ಖುಲಾಸೆಗೊಳಿಸಿದೆ, ಹೈಕೋರ್ಟ್ ಆದೇಶದಂತೆ ನಡೆದುಕೊಳ್ಳುವ ಉದ್ದೇಶದಿಂದ ಹಾಗೂ ಜೈನ್ ಸಮುದಾಯದ ಮುಖಂಡರ ಒಮ್ಮತದ ನಿರ್ಧಾರಕ್ಕೆ ತಲೆಬಾಗಿ ಅಗಲೀಕರಣಕ್ಕೆ ಸಾಥ್ ನೀಡುತ್ತಿರುವ ಅವರು ಬುಧವಾರ ತಮ್ಮ ಸ್ವಂತ ಖರ್ಚಿನಲ್ಲಿ ಜೆಸಿಬಿ ಮೂಲಕ ಕಟ್ಟಡಗಳನ್ನು ತೆರವುಗೊಳಿಸಿಕೊಂಡರು..ನಮ್ಮ ಮನವಿಯನ್ನು ಜೈನ್ ಸಮುದಾಯ ಪುರಸ್ಕರಿಸಿದ್ದು, ಪರಿಹಾರದ ಮೊತ್ತವನ್ನು ಪಡೆದುಕೊಳ್ಳುವುದರ ಜೊತೆಗೆ ಸ್ವತಃ ಅಂಗಡಿಗಳನ್ನು ತೆರವುಗೊಳಿಸಿಕೊಳ್ಳುವ ಮೂಲಕ ಅಗಲೀಕರಣಕ್ಕೆ ಕೈಜೋಡಿಸುತ್ತಿರುವುದು ಸ್ವಾಗತಾರ್ಹ ಕ್ರಮ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಈ ಮೊದಲು ಗಜಾನನ ಅರ್ಬನ್ ಬ್ಯಾಂಕ್ ಸ್ವತಃ ಕಟ್ಟಡ ತೆರವುಗೊಳಿಸಿಕೊಂಡಿದ್ದು, ಬಳಿಕ ಈಗ ಸಂಜಯ ಜೈನ್ ಅಗಲೀಕರಣಕ್ಕೆ ಸಾಥ್ ನೀಡುತ್ತಿರುವುದು ಸ್ವಾಗತಾರ್ಹ. ಶೇ. 50ರಷ್ಟು ಮಾಲೀಕರು ಪರಿಹಾರ ಪಡೆದುಕೊಂಡಿದ್ದಾರೆ. ಸಂಜಯ ಜೈನ್ ಮಾದರಿಯಲ್ಲಿ ಎಲ್ಲರೂ ಮನ ಪರಿವರ್ತನೆ ಮಾಡಿಕೊಂಡಲ್ಲಿ ಸುಸಜ್ಜಿತ ದ್ವಿಮುಖ ರಸ್ತೆ ಮಾಡಿಕೊಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.
ಸಂತ್ರಸ್ತ ಮಾಲೀಕರ ಭೂಸ್ವಾಧೀನಕ್ಕೂ ಮುಂಚೆಯೇ ಪರಿಹಾರ ನೀಡುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ಹೀಗಾಗಿ, ಇಂತಹ ಜನಪರ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಕೈಜೋಡಿಸಬೇಕಾಗುತ್ತದೆ. ಇನ್ನೂ ಕಾಲ ಮಿಂಚಿಲ್ಲ ಪರಿಹಾರದ ಹಣ ಪಡೆದು ಅಗಲೀಕರಣಕ್ಕೆ ಸಹಕರಿಸಿ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.
ಪಟ್ಟಣಕ್ಕೆ ಅಗಲೀಕರಣ ಅನಿವಾರ್ಯ. ಪಟ್ಟಣದ ಅಭಿವೃದ್ಧಿಗೆ ಸುಸಜ್ಜಿತ ಮುಖ್ಯರಸ್ತೆ ಅವಶ್ಯ. ಯಾರ ಒತ್ತಡವಿಲ್ಲದೆ ನಾನು ಸ್ವತಃ ಮುಂದೆ ನಿಂತು ಕಟ್ಟಡ ತೆರವುಗೊಳಿಸಿಕೊಂಡಿದ್ದೇನೆ. ನನ್ನಂತೆ ಎಲ್ಲರೂ ಕಟ್ಟಡ ತೆರವುಗೊಳಿಸಿಕೊಳ್ಳಲು ಮನವಿ ಮಾಡುತ್ತೇನೆ ಎಂದು ಮುಖ್ಯರಸ್ತೆ ವರ್ತಕ .ಸಂಜಯ ಜೈನ್ ಹೇಳಿದರು.