ಹಾವೇರಿ: ರಾಜ್ಯ ಸರ್ಕಾರದಿಂದ ವಿವಿಧ ಇಲಾಖೆಗಳಲ್ಲಿ ಕೈಗೊಂಡಿರುವ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ₹37 ಸಾವಿರ ಕೋಟಿ ಬಾಕಿ ಬರಬೇಕಿದೆ. ಬಾಕಿ ಬಿಡುಗಡೆ ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲ ಗುತ್ತಿಗೆದಾರರು ಮಾ. 5ರಂದು ಕಾಮಗಾರಿ ಬಂದ್ ಮಾಡಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು.ಕಳೆದ ಮೂರು ವರ್ಷಗಳಿಂದ ಕಾಮಗಾರಿ ಬಿಲ್ ಬಾಕಿ ಉಳಿದಿದೆ. ಈ ಬಗ್ಗೆ ಹಲವಾರು ಬಾರಿ ಮುಖ್ಯಮಂತ್ರಿಗಳ ಗಮನಕ್ಕೂ ತಂದರೂ ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಂಡಿಲ್ಲ. ಪ್ರತಿ ಬಾರಿ ಹಣ ಬಿಡುಗಡೆ ಬಗ್ಗೆ ಕೇಳಿದರೂ ಅದು ಹಳೆಯ ಸರ್ಕಾರದ್ದು ಎಂದು ಹೇಳುವ ಮೂಲಕ ಸಿಎಂ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ನಾವು ಅಧಿಕಾರಕ್ಕೆ ಬಂದರೆ ಪ್ಯಾಕೇಜ್ ಮಾಡಲ್ಲ ಎಂದಿದ್ದರು. ಆದರೆ, ಹಿಂದಿನ ಸರ್ಕಾರಕ್ಕಿಂತಲೂ ಈಗ ಹೆಚ್ಚಿನ ಪ್ಯಾಕೇಜ್ ನಡೆಯುತ್ತಿದೆ. ಹಣ ಇರುವ ಕಾಮಗಾರಿಗಳ ಪ್ಯಾಕೇಜ್ ಬೇರೆ ರಾಜ್ಯದವರಿಗೆ ಹೋಗುತ್ತಿದೆ ಎಂದು ಆರೋಪಿಸಿದರು.
ನಮ್ಮ ಸಮಸ್ಯೆ ಬಗೆಹರಿಸಿನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಗುತ್ತಿಗೆದಾರರು ಬಹಳ ಸಂಕಷ್ಟದಲ್ಲಿದ್ದು, ವಿಷ ಕುಡಿಯುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇವೆ. ಸಿಎಂ ಮೂರು ಬಾರಿ ಸಭೆ ಕರೆದರೂ ಯಾವುದೇ ಕಾರಣ ಹೇಳದೆ ಅನಿರ್ದಿಷ್ಟವಾಗಿ ಮುಂದೂಡಿದ್ದಾರೆ. ನಮಗೆ ದುಡ್ಡು ಮುಖ್ಯವಲ್ಲ, ನಮಗೆ ಹಲವಾರು ರೀತಿಯ ಸಮಸ್ಯೆಗಳಿದ್ದು, ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳೇ ಬೇಕು. ಕೆಲವು ಇಲಾಖೆಗಳ ಸಚಿವರು, ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಒತ್ತಾಯ ಎಂದರು. ಸಿಎಂ ಸಿದ್ದರಾಮಯ್ಯ ಈವರೆಗೂ ಗುತ್ತಿಗೆದಾರರೊಂದಿಗೆ ಔಪಚಾರಿಕವಾಗಿ ಒಂದೂ ಸಭೆ ಮಾಡಿಲ್ಲ. ಹೀಗಾಗಿ, ಸರ್ಕಾರದ ಗಮನ ಸೆಳೆಯಲು ಮಾ. 5ರಂದು ಒಂದು ದಿನ ಕಾಮಗಾರಿಗಳನ್ನು ಬಂದ್ ಮಾಡಿ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೂ ಸರ್ಕಾರ ಸ್ಪಂದಿಸದಿದ್ದರೆ ಏಪ್ರಿಲ್ ನಂತರ ಅನಿರ್ದಿಷ್ಟಾವಧಿಗೆ ಕಾಮಗಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಹಣ ಬಿಡುಗಡೆಗೆ ಹೆಚ್ಚು ಕಮಿಷನ್
ರಾಜ್ಯ ಸರ್ಕಾರದಲ್ಲಿ ಕಮಿಷನ್ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಮಿಷನ್ ಇರೋದು ನಿಜ. ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಹಿಂದಿನ ಸರ್ಕಾರಕ್ಕಿಂತ ಈ ಸರ್ಕಾರದಲ್ಲಿ ಹೆಚ್ಚಿನ ಕಮಿಷನ್ ಕೊಡಬೇಕಿದೆ. ಮೂರು ವರ್ಷದ ಹಣಕ್ಕೂ ನಾವು ಕಮಿಷನ್ ಕೊಡಬೇಕು. ಇದು ಬಹಳ ಅನ್ಯಾಯ. ಈ ಬಗ್ಗೆ ನಾವು ದೂರು ಕೊಡುವುದಿಲ್ಲ. ಸಿಎಂ, ಡಿಸಿಎಂ ನಮ್ಮ ನಾಡಿದ ದೊರೆ ಇದ್ದಂತೆ. ನಾವು ಮನೆಯ ಯಜಮಾನರ ಜೊತೆ ಹೊಡೆದಾಡಬೇಕೇ ಹೊರತು ಕೋರ್ಟ್, ಕಚೇರಿ ಹತ್ತುವ ಗುತ್ತಿಗೆದಾರರಲ್ಲ. ಬಾಕಿ ಹಣ ಕೊಡುವುದು ಅವರ ಧರ್ಮ ಎಂದರು.
ಸರ್ಕಾರ ಸಾವಿರಾರು ಕೋಟಿ ಸಾಲ ಮಾಡುತ್ತಿದೆ. ಸಾಲ ಮಾಡಿ ನಮಗೆ ಬರಬೇಕಾದ ಬಾಕಿ ಹಣ ನೀಡಬೇಕು. ನಮ್ಮ ಗುತ್ತಿಗೆದಾರರು ಅಮಾಯಕರು, ಬಡಪಾಯಿಗಳು ಸಾಲ ಮಾಡಿ, ಬಂಗಾರ ಅಡವಿಟ್ಟು ಕಾಮಗಾರಿ ಮಾಡಿರುತ್ತಾರೆ. ಸರ್ಕಾರ ನಮಗಾಗಿ ಒಂದು ಬಾರಿ ಸಾಲ ಮಾಡಿ ₹37 ಸಾವಿರ ಕೋಟಿ ಬಾಕಿ ಹಣ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು, ಹಾವೇರಿ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರ ಕೋಟಿ ಬಾಕಿ ಇದೆ ಎಂದರು.ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹಾವೇರಿ, ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಜಂಟಿ ಕಾರ್ಯದರ್ಶಿ ಲಿಂಗರಾಜ ಚಪ್ಪರದಹಳ್ಳಿ, ಮಲ್ಲಿಕಾರ್ಜುನ ಹಾವೇರಿ, ಎಸ್.ವಿ. ಹಿರೇಮಠ, ರವಿ ಸಿದ್ದಪ್ಪನವರ, ಕುಮಾರ ಹತ್ತಿಕಾಳ, ಜಿ.ಎಂ. ಜಗದೀಶ, ಜೆ.ಸಿ. ಮಧು, ಅಶೋಕ ಬಣಕಾರ ಇತರರು ಇದ್ದರು.