ಕೊಪ್ಪಳ: ಭಾಗ್ಯನಗರ ಸ್ಮಶಾನವನ್ನು ರಾಜ್ಯದಲ್ಲಿಯೇ ಮಾದರಿಯ ಸ್ಮಶಾನ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸಲು ಭಾಗ್ಯನಗರ ಪಪಂ ಬಜೆಟ್ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಅಧ್ಯಕ್ಷ ಶ್ರೀನಿವಾಸ ಹ್ಯಾಟಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ಮಾಡಿ ಸ್ಥಳೀಯ ಸಮುದಾಯಗಳ ಸಹಯೋಗ ಪಡೆದುಕೊಂಡು ರಾಜ್ಯದಲ್ಲಿಯೇ ಮಾದರಿ ಸ್ಮಶಾನವನ್ನಾಗಿ ಅಭಿವೃದ್ಧಿ ಪಡಿಸಲು ತೀರ್ಮಾನ ಮಾಡಲಾಗಿದೆ. ಸ್ಮಶಾನ ಅಭಿವೃದ್ಧಿ ಮಾಡುವ ಕುರಿತು ಈಗಾಗಲೇ ಹರಿಹರ, ಹುಲಕೋಟಿ ಸೇರಿದಂತೆ ರಾಜ್ಯದ ಅನೇಕ ಸ್ಮಶಾನಗಳನ್ನು ನೋಡಿಕೊಂಡು ಬರಲಾಗಿದ್ದು, ಅದಕ್ಕಿಂತಲೂ ವಿಶೇಷವಾಗಿ ರಾಜ್ಯದಲ್ಲಿಯೇ ಮಾದರಿ ಸ್ಮಶಾನ ನಿರ್ಮಾಣ ಮಾಡಲು ಸರ್ವಾನುಮತದಿಂದ ತೀರ್ಮಾನ ಮಾಡಲಾಗಿದೆ. ಇದಕ್ಕಾಗಿ ಭಾಗ್ಯನಗರದಲ್ಲಿರುವ ಎಲ್ಲ ಸಮುದಾಯಗಳ ಅಧ್ಯಕ್ಷರನ್ನೊಳಗೊಂಡು ಸಮಿತಿ ರಚನೆ ಮಾಡುವುದು ಮತ್ತು ಸಮುದಾಯದ ಸಹಭಾಗಿತ್ವ ಬಳಕೆ ಮಾಡಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಸ್ಮಶಾನಕ್ಕೆ ಈಗಾಗಲೇ ನಾಲ್ಕು ಎಕರೆ ಭೂಮಿ ಇದ್ದು, ಅದನ್ನು ಬೇಲಿ ಹಾಕಿಕೊಂಡು ಒತ್ತುವರಿ ತೆರವು ಮಾಡುವುದು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಮಾದರಿ ಸ್ಮಶಾನ ನಿರ್ಮಾಣ ಮಾಡೋಣ ಎಂದು ಅಧ್ಯಕ್ಷ ಶ್ರೀನಿವಾಸ ಹ್ಯಾಟಿ ಹೇಳಿದ್ದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು.

ಭಾಗ್ಯನಗರ ಪಟ್ಟಣಕ್ಕೆ ತುಂಗಭದ್ರಾ ನದಿಯ ನೀರು ಇದುವರೆಗೂ ಪೂರೈಕೆಯಾಗುತ್ತಿಲ್ಲ.ಈಗಲೂ ಬೋರವೆಲ್ ನೀರೇ ಗತಿ ಎನ್ನುವಂತಾಗಿದೆ. ಹೀಗಾಗಿ, ಭಾಗ್ಯನಗರ ಪಟ್ಟಣಕ್ಕೆ ತುಂಗಭದ್ರಾ ನೀರು ಪೂರೈಕೆ ಮಾಡುವ ಯೋಜನೆ ಈಗಾಗಲೇ ಪ್ರಗತಿಯಲ್ಲಿದ್ದು,ಅದನ್ನು ಆಗಸ್ಟ್ ವೇಳೆಗೆ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.ಆಗಸ್ಟ್ ವೇಳೆಗೆ ಪ್ರತಿ ಮನೆಗೂ ತುಂಗಭದ್ರಾ ನೀರು ಪೂರೈಕೆ ಮಾಡಲು ಎಲ್ಲರೂ ಸರ್ವಾನುಮತದಿಂದ ತೀರ್ಮಾನಿಸಿ ಅಧಿಕಾರಿಗಳಿಗೆ ಸೂಚಿಸಿದರು. ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಈಗಾಗಲೇ 22 ಸಾವಿರದಿಂದ 28 ಸಾವಿರ ಜನಸಂಖ್ಯೆಯಾಗಿದ್ದು, ಪುರಸಭೆಯಾಗುವುದಕ್ಕೆ ಎಲ್ಲ ರೀತಿಯ ಅರ್ಹತೆ ಇದೆ. ಹೀಗಾಗಿ, ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲು ತೀರ್ಮಾನಿಸಲಾಯಿತು.

ಭಾಗ್ಯನಗರ ಪಟ್ಟಣ ಪಂಚಾಯಿತಿಯಾಗಿದ್ದರೂ ಈಗಲೂ ಗ್ರಾಪಂ ಹಳೆಕಟ್ಟಡದಲ್ಲಿದೆ. ಹೀಗಾಗಿ ಇದನ್ನು ಪಟ್ಟಣ ಪಂಚಾಯಿತಿಗಾಗಿಯೇ ನೂತನ ಕಟ್ಟಡ ನಿರ್ಮಾಣ ಮಾಡುವ ಅಗತ್ಯದದ ಕುರಿತು ಸಭೆಯಲ್ಲಿ ಗಂಭೀರವಾಗಿ ಚರ್ಚೆ ಮಾಡಲಾಯಿತು. ಈಗಾಗಲೇ ಕಟ್ಟಡಕ್ಕೆ ಐದು ಕೋಟಿ ಅನುದಾನ ಇದ್ದು, ಈಗಿರುವ ಪಂಚಾಯಿತಿ ಕಟ್ಟಡ ತೆರವು ಮಾಡಿ ವಿಸ್ತಾರವಾಗಿರುವ ಕಟ್ಟಡ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು.

ಇದಲ್ಲದೆ ಭಾಗ್ಯನಗರದ ಅಭಿವೃದ್ಧಿ ಮತ್ತು ಆಡಳಿತ ಸುಧಾರಣೆಯ ದೃಷ್ಠಿಯಿಂದ ಅನೇಕ ನಿರ್ಧಾರ ತೆಗೆದುಕೊಳ್ಳಲಾಯಿತು.ಕರ ವಸೂಲಿ ಮತ್ತು ಸಾರ್ವಜನಿಕರ ಸೇವೆ ಸೇರಿದಂತೆ ಅನೇಕ ಸುಧಾರಣಾ ಕ್ರಮ ಕೈಗೊಳ್ಳಲು ಚರ್ಚಿಸಲಾಯಿತು. ಅಲ್ಲದೆ ಸಾರ್ವಜನಿಕರಿಂದಲೂ ಸಲಹೆ, ಸೂಚನೆ ಪಡೆದು, ಅಭಿವೃದ್ಧಿಗೆ ಆದ್ಯತೆ ನೀಡಲು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಮಾಡಲಾಯಿತು.


ಉಪಾಧ್ಯಕ್ಷ ಹೊನ್ನೂರಸಾಬ ಮತ್ತು ಪಪಂ ಮುಖ್ಯಾಧಿಕಾರಿ ಸುರೇಶ ಬಬಲಾದಿ ಇದ್ದರು.

ಭಾಗ್ಯನಗರ ಪಪಂ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.ವಿಶೇಷವಾಗಿ ಮಾದರಿ ಸ್ಮಶಾನ ನಿರ್ಮಾಣಕ್ಕೆ ಸರ್ವಾನುಮತದಿಂದ ತೀರ್ಮಾನ ಮಾಡಲಾಗಿದೆ ಎಂದು ಭಾಗ್ಯನಗರ ಪಪಂ ಅಧ್ಯಕ್ಷ ಶ್ರೀನಿವಾಸ ಹ್ಯಾಟಿ ತಿಳಿಸಿದ್ದಾರೆ.