ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು

| Published : Feb 13 2025, 12:50 AM IST

ಸಾರಾಂಶ

ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದೆ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ತಂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತು.

ಬ್ಯಾಡಗಿ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ತಂಡ ಬುಧವಾರ ಪಟ್ಟಣದ ಎಪಿಎಂಸಿ ಆವರಣ, ಕಚೇರಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿದೆ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಂಡ ಘಟನೆ ನಡೆಯಿತು.

ಎಪಿಎಂಸಿ ಪ್ರಾಂಗಣದ ಕೆಲ ಅಂಗಡಿಗಳಿಗೆ ಭೇಟಿ ನೀಡಿದ ಉಪ ಲೋಕಾಯುಕ್ತರು ಪರಿಶೀಲನೆ ನಡೆಸಿದರು. ಕೆಲವು ಅಂಗಡಿಗಳಲ್ಲಿ ತೂಕದ ಯಂತ್ರಗಳಲ್ಲಿ ವ್ಯತ್ಯಾಸ ಕಂಡು ಬಂತು. ಈ ಕುರಿತು ಅಧಿಕಾರಿಗಳಿಗೆ ಪ್ರಶ್ನಿಸಿ ರೈತರಿಗೆ ಮೋಸವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ರೈತನಿಗೆ ತೂಕದಲ್ಲಿ ಮೋಸವಾದಲ್ಲಿ ನಮ್ಮಿಂದಲೇ ವರ್ತಕರಿಗೆ ಸಹಕಾರ ನೀಡಿದಂತಾಗುತ್ತದೆ. ನೀವೆಲ್ಲ ಏನು ಮಾಡುತ್ತಿದ್ದೀರಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಎಪಿಎಂಸಿ ಸಿಬ್ಬಂದಿ ಪೋಟೇರ ದೇಶದಲ್ಲಿಯೇ ಮೊದಲ ಬಾರಿಗೆ ಎಲೆಕ್ಟ್ರಾನಿಕ್ಸ್ ತೂಕದ ಯಂತ್ರಗಳ ಬಳಕೆ ಮತ್ತು ಇ-ಟೆಂಡರ್ ವ್ಯವಸ್ಥೆ ಅಳವಡಿಸಿದ ಏಕೈಕ ಮಾರುಕಟ್ಟೆ ಇದಾಗಿದ್ದು, ನಮ್ಮ ಸಿಬ್ಬಂದಿಯಿಂದಲೇ ತೂಕ ಮಾಡಿಸಲಾಗುವುದು. ಯಾವುದೇ ಕಾರಣಕ್ಕೂ ಇಂತಹುದಕ್ಕೆ ಅವಕಾಶ ನೀಡಿಲ್ಲ ಎಂದರು.

ಕಳಂಕ ತಂದರೆ ದೂರು

ಇದೊಂದು ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ. ಮೂಲ ಸೌಕರ್ಯ ಸೇರಿದಂತೆ ರೈತರಿಗೆ ಅವಶ್ಯವಿರುವ ಸೌಲಭ್ಯ ಕಲ್ಪಿಸಬೇಕು. ರೈತ ಭವನವನ್ನು ಜನರ ಉಪಯೋಗಕ್ಕೆ ನೀಡಿಲ್ಲವೇಕೆ? ಸಾರ್ವಜನಿಕ ಶೌಚಾಲಯಗಳಿಲ್ಲವೇಕೆ? ಇಲ್ಲಿರುವ ಕೆಲವೊಂದು ಅಂಗಡಿಗಳಲ್ಲಿ ತೂಕದಲ್ಲಿ ರೈತರಿಗೆ ಮೋಸವಾಗುತ್ತಿರುವ ದೂರುಗಳು ಕೇಳಿ ಬಂದಿವೆ. ಅಂತಹ ದಲಾಲರು ಮತ್ತು ವರ್ತಕರ ಅಂಗಡಿಗಳನ್ನು ಕೂಡಲೇ ಸೀಜ್ ಮಾಡಿ ಅವರ ವಿರುದ್ದ ಸೆಕ್ಷನ್ 420ರ ಅಡಿ ಜಾಮೀನು ರಹಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು.

ಹಮಾಲರ ನೋಂದಣಿ ಕಡ್ಡಾಯ

ಬಹುದೊಡ್ಡ ಮಾರುಕಟ್ಟೆಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಈಗಿರುವ ಮಾಹಿತಿಯಂತೆ ಕೇವಲ 269 ನೋಂದಾಯಿತ ಹಮಾಲರಿದ್ದಾರೆ. ಇನ್ನುಳಿದ ಅಸಂಘಟಿತ ಕಾರ್ಮಿಕರಿಗೆ ಪ್ರಾಂಗಣದಲ್ಲಿ ಏನಾದರೂ ತೊಂದರೆ ಆದರೆ ಜವಾಬ್ದಾರಿ ಯಾರು? ಕೂಡಲೇ ಅಸಂಘಟಿತ ಕಾರ್ಮಿಕರನ್ನು ನೋಂದಣಿ ಮಾಡಿಸಿಕೊಳ್ಳುವಂತೆ ಸೂಚನೆ ನೀಡಿದರು.

ದೂರು ದಾಖಲು

ಕೋಲ್ಡ್ ಸ್ಟೋರೇಜ್‌ನಲ್ಲಿ ದಾಸ್ತಾನು ಮಾಡಿದ ರೈತರಿಗೆ ಎಪಿಎಂಸಿಯಿಂದ ಸಾಲ ಸೌಲಭ್ಯ ಏಕೆ ನೀಡಿಲ್ಲ? ಕೂಡಲೇ ಕೋಲ್ಡ್ ಸ್ಟೋರೆಜ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ. ರೈತರಿಗೆ ಸಾಲ ಸೌಲಭ್ಯಕ್ಕೆ ಅನುಕೂಲ ಕಲ್ಪಿಸಿಕೊಡಿ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಕೋಟಿಗಟ್ಟಲೇ ಸಹಾಯಧನವನ್ನು ಎಲ್ಲ ಕೋಲ್ಡ್ ಸ್ಟೋರೇಜ್ ಮಾಲೀಕರು ಪಡೆದಿದ್ದಾರೆ. ಸಹಾಯಧನದ ಮೂಲ ಉದ್ದೇಶ ರೈತರಿಗೆ ಅನುಕೂಲಕ್ಕೆ ಹೊರತು ವರ್ತಕರ ಲಾಭಕ್ಕಾಗಿ ಅಲ್ಲ. ಅದಾಗ್ಯೂ, ಎಪಿಎಂಸಿ ಸಿಬ್ಬಂದಿ ನೀಡಿದ ಮಾಹಿತಿ ಸಮಂಜಸವಾಗಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ತಿಳಿಸಿದರು.

ಮದ್ಯದಂಗಡಿ ಪರಿಶೀಲನೆ

ಸ್ಟೇಷನ್ ರಸ್ತೆಯಲ್ಲಿ ನರ್ಮದಾ ಬಾರ್‌ಗೆ ತೆರಳಿದ ಲೋಕಾಯುಕ್ತರು ಸ್ಟಾಕ್ ರಜಿಸ್ಟರ್ ಚೆಕ್ ಮಾಡಲು ಮುಂದಾದರು, ಆದರೆ, ಬಾರ್ ಸಿಬ್ಬಂದಿಗೆ ಇಂತಹ ಯಾವುದೇ ಮಾಹಿತಿ ಇರಲಿಲ್ಲ. ಸ್ಥಗಿತಗೊಂಡಿದ್ದ ಸಿಸಿ ಟಿವಿಗಳನ್ನು ನೋಡಿ ಕೂಡಲೇ ವಿಡಿಯೋ ಪೋಟೆಜ್ ತೆಗೆಯುವಂತೆ ಸೂಚಿಸಿದರು. ಇದಕ್ಕೆ ಬಾರ್ ಸಿಬ್ಬಂದಿಯಿಂದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ್ ದಾನಮ್ಮನವರ, ಸಿಇಒ ಅಕ್ಷಯ್ ಶ್ರೀಧರ, ಎಸ್ಪಿ ಅಂಶುಕುಮಾರ, ಉಪವಿಭಾಗಾಧಿಕಾರಿ ಚನ್ನಪ್ಪ, ತಹಸೀಲ್ದಾರ್‌ ಫೈರೋಜ್ ಶಾ, ಟಿಇಒ ಕೆ.ಎಂ. ಮಲ್ಲಿಕಾರ್ಜುನ, ಎಪಿಎಂಸಿ ಸಿಬ್ಬಂದಿ ಬಿ.ಎಸ್. ಗೌಡರ, ವಿಜಯಕುಮಾರ ಗೂರಪ್ಪನವರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.ಇನ್ಸೂರೆನ್ಸ್, ನಿವೇಶನ ಕೊಡಿಸಿ ಸ್ವಾಮಿ

ನೋಂದಾಯಿತ ಕೂಲಿ ಕಾರ್ಮಿಕರಿಗೆ, ಗುತ್ತಿಗೆ ಸಿಬ್ಬಂದಿ (ಸೆಕ್ಯೂರಿಟಿ ಗಾರ್ಡ್ ಮತ್ತು ಹೊರಗುತ್ತಿಗೆ)ಗೆ ಈ ವರೆಗೂ ನಿವೇಶನ ನೀಡಿಲ್ಲ. ಕೇವಲ 6 ತಿಂಗಳಷ್ಟೇ ಇಲ್ಲಿ ಕೆಲಸ ಸಿಗುತ್ತಿದ್ದು, ಇದರಿಂದ ಜೀವನ ನಿರ್ವಹಣೆ ಅಸಾಧ್ಯ. ಹೀಗಾಗಿ, ಮನೆ ಅಥವಾ ನಿವೇಶನ ನೀಡಬೇಕು. ಕೆಲಸ ಮಾಡುವ ವೇಳೆ ದುರ್ಘಟನೆಯಾದಲ್ಲಿ ನಮ್ಮನ್ನು ಜನರಲ್ ಇನ್ಸೂರೆನ್ಸ್ ವ್ಯಾಪ್ತಿಗೆ ಒಳಪಡಿಸುವಂತೆ ಹಮಾಲರು ಆಗ್ರಹಿಸಿದರು.