ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರೂ ಪಾಲ್ಗೊಂಡು ಕಠಿಣ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಆರ್.ಎಸ್.ಎಸ್.ನವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎನ್ನುವವರು ಇತಿಹಾಸವನ್ನು ಓದಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್‍ಯಕಾರಿಣಿ ಆಹ್ವಾನಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಟೀಕಾಕಾರರಿಗೆ ತಿರುಗೇಟು ನೀಡಿದರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ನಡೆದ ಯುಗಾದಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ ಆರ್.ಎಸ್.ಎಸ್‌ನವರ ಕೊಡುಗೆ ಇಲ್ಲ ಎನ್ನುತ್ತಾರೆ. ಆದರೆ, ಡಾ. ಹೆಡಗೇವಾರ್ ಯುಗಾದಿ ಹಬ್ಬದ ದಿನವೇ ನಾಗ್‌ಪುರದಲ್ಲಿ ಸಂಘಟನೆಯನ್ನು ಪ್ರಾರಂಭಿಸಿದ್ದರು. ನಂತರ ಅಂದಿನ ಕಾಂಗ್ರೆಸ್ ಸಂಘಟನೆಯಲ್ಲಿ ಪಾಲ್ಗೊಂಡು ದೊಡ್ಡ ಮಟ್ಟದ ಹೋರಾಟ ನಡೆಸಿ ಎರಡು ಬಾರಿ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದನ್ನು ಇಂದಿನ ಕಾಂಗ್ರೆಸ್ಸಿಗರು ಇತಿಹಾಸ ಓದಿ ತಿಳಿದುಕೊಳ್ಳಲಿ ಎಂದು ಸಲಹೆ ನೀಡಿದರು.
ಈ ದೇಶಕ್ಕೆ ಕೇವಲ 50 ಮಂದಿ ಮುಸ್ಲಿಮರು ತಲ್ವಾರ್ ಹಿಡಿದು ಕುದುರೆ ಮೇಲೆ ಭಾರತಕ್ಕೆ ಬಂದರು. ಅವರೆಲ್ಲರೂ ಇಲ್ಲಿನವರನ್ನು ಮುಸ್ಲಿಮರನ್ನಾಗಿ ಪರಿವರ್ತಿಸಿ, ಅವರಿಂದ ಕೋಟ್ಯಾಂತರ ಜನ ಸಂಘಟಿತರಾಗಿ ಈ ದೇಶವನ್ನು ಆಳುವ ಮಟ್ಟಕ್ಕೆ ಕೊಂಡೊಯ್ದರು. ನಂತರ ಬ್ರಿಟಿಷರು ಕೇವಲ ತಕ್ಕಡಿ ಹಿಡಿದುಕೊಂಡು ಬಂದು ಭಾರತೀಯರ ಸ್ವಾತಂತ್ರ್ಯವನ್ನೇ ಕಸಿದುಕೊಂಡರು ಎಂದು ಇತಿಹಾಸವನ್ನು ಮೆಲುಕು ಹಾಕಿದರು.ಆಂಗ್ಲರು ಭಾರತ ಬಿಟ್ಟು ತೊಲಗಿದರೂ ಅವರು ಹುಟ್ಟಹಾಕಿದ ಆಂಗ್ಲ ಭಾಷೆ ಇಂದಿಗೂ ಭಾರತದಲ್ಲಿ ಭದ್ರವಾಗಿ ಬೇರೂರಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದರೂ ಶಿಕ್ಷಣ ವ್ಯವಸ್ಥೆ, ಗುಲಾಮಗಿರಿಯಲ್ಲೇ ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ದೇಶದ ಸಂಸ್ಕೃತಿ ಪರಂಪರೆಯಲ್ಲಿ ಗಟ್ಟಿಯಾದ ಬೇರುಗಳಿವೆ. ಅವುಗಳನ್ನು ಕಿತ್ತುಹಾಕಲು ಯಾರಿಗೂ ಇದುವರೆಗೆ ಸಾಧ್ಯವಾಗಿಲ್ಲ. ಅದೇ ಭಾರತದ ಭವಿಷ್ಯವನ್ನು ಸುಭದ್ರ ಸ್ಥಿತಿಯಲ್ಲಿ ಇಟ್ಟಿದೆ. ಪ್ರಯಾಗ್ ರಾಜ್‌ನಲ್ಲಿ ನಡೆದ ಕುಂಭಮೇಳ ಇದನ್ನು ಸಾಕ್ಷೀಕರಿಸಿದೆ ಎಂದು ತಿಳಿಸಿದರು.ಲೆಕ್ಕ ಪರಿಶೋಧಕ ಮತ್ತು ತೆರಿಗೆ ಸಲಹೆಗಾರ ಕೆ.ರಾಮಲಿಂಗೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೂಸ್ಥಾನವನ್ನು ರಕ್ಷಿಸಬೇಕಾದರೆ ನಾವು ಮೊದಲು ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಹಿಂದೂ ಎನ್ನುವುದು ರಕ್ತದಲ್ಲೇ ಬಂದಿದೆ. ನಮ್ಮನ್ನಾಳಿದ ರಾಜಕಾರಣಿಗಳು ಎಲ್ಲವನ್ನೂ ಕಲುಷಿತಗೊಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದೂಗಳಿಗೆ ಭಾರತ ಬಿಟ್ಟರೆ ಬೇರೆ ದೇಶವಿಲ್ಲ. ಎಲ್ಲೂ ನೆಲೆ ಸಿಗುವುದೂ ಇಲ್ಲ. ಇಂದಿನಿಂದಲೇ ಸಂಕಲ್ಪ ಮಾಡಿ ಹಿಂದೂ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಜೊತೆಗೆ ಪ್ರತಿಯೊಬ್ಬರೂ ಇಂದಿನಿಂದಲೇ ಆಂಗ್ಲ ಪದವನ್ನು ಕಿತ್ತೊಗೆಯಲು ಕನಿಷ್ಠ ನಮ್ಮ ಸಹಿಯನ್ನಾದರೂ ಕನ್ನಡದಲ್ಲೇ ಮಾಡುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.ನಗರ ಕಾರ್‍ಯವಾಹ ರಮೇಶ್ ಭಾಗವಹಿಸಿದ್ದರು.