ಸಾರಾಂಶ
ತಾಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದೂರು ಗ್ರಾಮದಲ್ಲಿ ಆರು ಜನ ವಾಂತಿಭೇದಿಯಿಂದ ಅಸ್ವಸ್ಥಗೊಂಡು, ಚಿಕತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಸೇವನೆ ಇದಕ್ಕೆ ಕಾರಣ ಎನ್ನಲಾಗಿದೆ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಅಲ್ಲಲ್ಲಿ ಸೋರಿಕೆಯಾಗುತ್ತಿತ್ತು. ಇದರಿಂದ ಕಲುಷಿತ ನೀರು ಮಿಶ್ರಣಗೊಂಡಿದ್ದು, ಅದೇ ನೀರನ್ನು ಕುಡಿಯಲು ಬಳಸಿದ್ದು ಈ ಸಮಸ್ಯೆಗೆ ಕಾರಣವಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಗುರುಮಠಕಲ್
ತಾಲೂಕಿನ ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದೂರು ಗ್ರಾಮದಲ್ಲಿ ಆರು ಜನ ವಾಂತಿಭೇದಿಯಿಂದ ಅಸ್ವಸ್ಥಗೊಂಡು, ಚಿಕತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಸೇವನೆ ಇದಕ್ಕೆ ಕಾರಣ ಎನ್ನಲಾಗಿದೆ. ಗ್ರಾಮಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಅಲ್ಲಲ್ಲಿ ಸೋರಿಕೆಯಾಗುತ್ತಿತ್ತು. ಇದರಿಂದ ಕಲುಷಿತ ನೀರು ಮಿಶ್ರಣಗೊಂಡಿದ್ದು, ಅದೇ ನೀರನ್ನು ಕುಡಿಯಲು ಬಳಸಿದ್ದು ಈ ಸಮಸ್ಯೆಗೆ ಕಾರಣವಿರಬಹುದು ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಬ್ಬರು, ಖಾಸಗಿ ಆಸ್ಪತ್ರೆಯಲ್ಲಿ ಮೂವರು ಹಾಗೂ ಯಾದಗಿರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೂ ಇನ್ನೊಬ್ಬರು ಗುಣಮುಖರಾಗಿದ್ದಾರೆ ಹಿಂದಿರುಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಪ್ರಕರಣದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ತೆರಳಿದ್ದ ಟಿಎಚ್‌ಓ ಡಾ. ಹಣಮಂತರೆಡ್ಡಿ ಅವರು, ಪರಿಸ್ಥಿತಿಯ ಕುರಿತು ಪರಿಶೀಲಿಸಿ, ಜಲಮೂಲಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಜತೆಗೆ ಗ್ರಾಮದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಆರಂಭಿಸಲಾಗಿದೆ ಎಂದರು.
ಗ್ರಾಮದಲ್ಲಿ ಒಂದು ಬೋರವೆಲ್, ಮೂರು ಸಿಂಗಲ್ ಫೇಸ್, ಒಂದು ಕೈಪಂಪ್ , ಒಂದು ತೆರೆದ ಬಾವಿಗಳಿದ್ದು, ಕ್ಲೋರಿನೇಶನ್ ಕೆಲಸ ಮಾಡಲಾಗಿದೆ. ಪ್ರತಿ ಶನಿವಾರ ಕ್ಲೋರಿನೇಶನ್ ಮಾಡಿ ಜುಲೈ 14 ರಂದು ಗ್ರಾಮದ ಎಲ್ಲಾ ಜಲ ಮೂಲಗಳ ನೀರಿನ ಮಾದರಿ ಪರೀಕ್ಷೆ ಮಾಡಿಸಿದಾಗ ಕುಡಿಯಲು ಯೋಗ್ಯವಾಗಿದ್ದವು ಎಂದು ಪಿಡಿಓ ಭೀಮರಾಯ ಮಾಹಿತಿ ನೀಡಿದರು.