ಸಾರಾಂಶ
ಹೊಸಪೇಟೆ: ತಾಲೂಕಿನ ನಲ್ಲಾಪುರ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಕಲುಷಿತ ನೀರು ಸೇವಿಸಿ 18 ಜನರು ಅಸ್ವಸ್ಥರಾಗಿದ್ದು, ಈ ಪೈಕಿ ಮಹಿಳೆ ಸೇರಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗ್ರಾಮದ ಕಾಮಾಕ್ಷಿ (35) ಮತ್ತು ಯರಿಸ್ವಾಮಿ (30) ಎಂಬವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇನ್ನೂ ಆರೋಗ್ಯ ಇಲಾಖೆಯ ಸರ್ವೆ ವೇಳೆ ಮೂವರು ಅಸ್ವಸ್ಥರಾಗಿದ್ದು ಕಂಡು ಬಂದಿದ್ದು, ತಾತ್ಕಾಲಿಕ ಕೇಂದ್ರದಲ್ಲೇ ಚಿಕಿತ್ಸೆ ನೀಡಲಾಗಿದೆ.ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಗ್ರಾಮದಲ್ಲೇ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ. ಆರೋಗ್ಯ ಇಲಾಖೆಯಿಂದ ಮನೆ, ಮನೆ ಸರ್ವೆ ಕೂಡ ನಡೆಸಲಾಗುತ್ತಿದೆ. ಒವರ್‌ಹೆಡ್ ಟ್ಯಾಂಕ್ ಸ್ವಚ್ಛಗೊಳಿಸದೇ ಇರುವುದು ಮತ್ತು ಪೈಪ್‌ಲೈನ್‌ಗಳಲ್ಲಿ ಕಲುಷಿತ ನೀರು ಸೇರಿರಬಹುದು ಎಂದು ಶಂಕಿಸಲಾಗಿದೆ.ಜಿಪಂ ಸಿಇಒ ಸದಾಶಿವಪ್ರಭು ಬಿ., ಡಿಎಚ್‌ಒ ಡಾ. ಶಂಕರ ನಾಯ್ಕ, ಆರೋಗ್ಯ ಅಧಿಕಾರಿಗಳಾದ ಡಾ. ಜಂಬಯ್ಯ ನಾಯಕ, ಡಾ. ಭಾಸ್ಕರ್, ತಾಪಂ ಇಒ ಉಮೇಶ್ ಇನ್ನಿತರ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಲ್ಲಾಪುರ ಗ್ರಾಮಕ್ಕೆ ಜಿಪಂ ಸಿಇಒ ಭೇಟಿ: ತಾಲೂಕಿನ ಸೀತಾರಾಮ್ ತಾಂಡಾ ಗ್ರಾಪಂ ವ್ಯಾಪ್ತಿಯ ನಲ್ಲಾಪುರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಸದಾಶಿವ ಪ್ರಭು ಬಿ. ಭಾನುವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಪ್ರಕರಣದ ಬಗ್ಗೆ ಸಿಇಒ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಸ್ಥಳದಲ್ಲಿ ಹಾಜರಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ವಾಂತಿ-ಭೇದಿ ಪ್ರಕರಣಗಳ ಬಗ್ಗೆ ತೀವ್ರ ನಿಗಾವಹಿಸಲು ಸೂಚಿಸಿದರು. ತಾತ್ಕಾಲಿಕವಾಗಿ ಆಯುಷ್ ಇಲಾಖೆಯ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿರುವುದನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ತಾಪಂ ಇಒ ಉಮೇಶ್, ಟಿಎಚ್‌ಒ ಡಾ.ಭಾಸ್ಕರ್ ಮತ್ತಿತರರು ಇದ್ದರು.
ತಂಬ್ರಹಳ್ಳಿ ಗ್ರಾಮಕ್ಕೆ ಭೇಟಿ: ಬಳಿಕ ಜಿಪಂ ಸಿಇಒ ಸದಾಶಿವ ಪ್ರಭು ಬಿ. ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಕ್ಕೆ ಆಕಸ್ಮಿಕವಾಗಿ ಭೇಟಿ ನೀಡಿದರು. ಅಲ್ಲಿನ ಶೌಚಾಲಯದ ಪೈಪ್‌ಲೈನ್ ಒಡೆದು ಕಲುಷಿತ ನೀರು ಹೊರಹೋಗುತ್ತಿರುವುದನ್ನು ಗಮನಿಸಿದರು. ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಕರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅಲ್ಲಿನ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ನಿರ್ದೇಶನ ನೀಡಿದರು.ಇದೇ ವೇಳೆ ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳೊಂದಿಗೆ ಕೆಲ ಹೊತ್ತು ಆಪ್ತವಾಗಿ ಮಾತನಾಡಿ, ಅವರ ಓದು, ವಿದ್ಯಾಭ್ಯಾಸದ ಬಗ್ಗೆ ಚರ್ಚಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸರಿಯಾಗಿ ಎದುರಿಸಿರಿ ಎಂದು ವಿದ್ಯಾರ್ಥಿಗಳಿಗೆ ಸಿಇಒ ಅವರು ಹಾರೈಸಿದರು. ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ತಾಪಂ ಇಒ ಜಿ. ಪರಮೇಶ್ವರ್ ಇದ್ದರು.