ಸಾರಾಂಶ
ಚುನಾವಣೆ ಧ್ವಜಾರೋಹಣ ಕಾರ್ಯಕ್ರಮಕ್ಕೆ ಡಿಸಿ ಸುಶೀಲಾ ಚಾಲನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಸಾರ್ವತ್ರಿಕ ಲೋಕಸಭಾ ಹಾಗೂ ಸುರಪುರ ವಿಧಾನಸಭೆ ಉಪ ಚುನಾವಣೆ ಹಿನ್ನಲೆ ಮತದಾನ ಜಾಗೃತಿ ಮೂಡಿಸುವ ಸಲುವಾಗಿ "ನಮ್ಮ ನಡೆ ಮತಗಟ್ಟೆಯ ಕಡೆ " ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ರಾಷ್ಟ್ರೀಯ ಹಬ್ಬ ಮಾದರಿಯಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಸುಶೀಲಾ ತಿಳಿಸಿದ್ದಾರೆ.ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಚುನಾವಣೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಮೇ.07ರಂದು ನಡೆಯುವ ಚುನಾವಣೆಯಂದು ಮತಗಟ್ಡೆಗೆ ತೆರಳಿ ತಮ್ಮ ಅಮೂಲ್ಯವಾದ ಮತ ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಬೇಕು ಎಂದರು. ಜಿಲ್ಲೆಯ ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ? ಇಲ್ಲವೇ ಎಂದು ಪರಿಶಿಲೀಸಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಕಲ್ಪಿಸಲಾದ ಮೂಲಭೂತ ಸೌಕರ್ಯಗಳ ಬಗ್ಗೆ ಅರಿತುಕೊಂಡು ಖಚಿತಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ್ಯೆ ಗರಿಮಾ ಪನ್ವಾರ, ಜಿಲ್ಲಾ ಪಂಚಾಯತ ಸಿಪಿಒ ಗುರುನಾಥ ಗೌಡಪ್ಪನ್ನೋರ್, ಚುನಾವಣೆ ತಹಸೀಲ್ದಾರ ಸಂತೋಷರಾಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಉತ್ತರಾದೇವಿ ಮಠಪತಿ, ನಗರಸಭೆ ಪೌರಾಯುಕ್ತ ಲಕ್ಷ್ಮೀಕಾಂತ ಮುಂತಾದವರಿದ್ದರು.