ಸಾರಾಂಶ
ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಬೇಕೆಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಬೇಕೆಂದು ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮನವಿ ಮಾಡಿದರು.ಭಾನುವಾರ ಗುರುಮಠಕಲ್ ಮತಕ್ಷೇತ್ರದ ಹೊನಗೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವ ಕಲಬುರಗಿ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆಯುತ್ತದೆ, ಇದು ಶರಣರ-ಸೂಫಿ ಸಂತರ ನಾಡು, ಬಿಜೆಪಿ ಪಕ್ಷದವರು ಸಮಾಜದಲ್ಲಿ ವಿಷ ಬೀಜ ಬಿತ್ತುವ ಮೂಲಕ ಜಾತಿ-ಜಾತಿಗಳ ಮಧ್ಯೆ ವೈರತ್ವ ಮೂಡಿಸಿ, ಸಾಮರಸ್ಯ ಹಾಳು ಮಾಡಿದ್ದಾರೆ, ಕಳೆದ 5 ವರ್ಷಗಳಲ್ಲಿ ಸಂಸದರು ಈ ಭಾಗಕ್ಕೆ ಅವರು ನೀಡಿರುವ ಕೊಡುಗೆ ಏನು ಎಂದು ಮತದಾರರು ಪ್ರಶ್ನೀಸಿ, ಚಿಂತನೆ ಮಾಡಿ, ಮತ ಚಲಾಯಿಸಬೇಕೆಂದು ಹೇಳಿದರು.
ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ನನಗೆ ಹಾಗೂ ನನ್ನ ಸಮುದಾಯಕ್ಕೆ ನಿಮ್ಮ ಸಮಾಜವನ್ನು ಎಸ್.ಟಿ ವರ್ಗಕ್ಕೆ ಸೇರಿಸುತ್ತೇವೆ ಎಂದು ಭರವಸೆ ನೀಡಿ, ಡಾ. ಜಾಧವ್ ಸಂಸದರಾಗಿ ಆಯ್ಕೆಯಾದ ನಂತರ ಎಲ್ಲರೂ ನಮಗೆ ಮೋಸ ಮಾಡಿದ್ದಾರೆ, ಅವರಿಗೆ ಈ ಚುನಾವಣೆಯಲ್ಲಿ ನಾವೆಲ್ಲರೂ ತಕ್ಕ ಪಾಠ ಕಲಿಸಬೇಕಾಗಿದೆ, ಖರ್ಗೆ ಕುಟುಂಬದಿಂದ ಮಾತ್ರ ಗುರುಮಠಕಲ್ ಕ್ಷೇತ್ರದ ಜನರಿಗೆ ನ್ಯಾಯ ಸಿಗುತ್ತದೆ, ಕಾಂಗ್ರೆಸ್ ಭದ್ರ ಕೋಟೆಯಾಗಿರುವ ಕಲಬುರಗಿ ಕ್ಷೇತ್ರವನ್ನು ಮರು ವಶಪಡಿಸಿಕೊಳ್ಳೋಣ ಎಂದು ಹೇಳಿದರು.