ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮೇ 4ರಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8ರಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳು, ಚುನಾವಣೆ ಏಜೆಂಟರು ಹಾಗೂ ಮತ ಎಣಿಕೆ ಏಜೆಂಟರು ಬೆಳಗ್ಗೆ 7 ಗಂಟೆಗೆ ಹಾಜರಿರಲು ತಿಳಿಸಲಾಗಿದೆ. ಭದ್ರತಾ ಕೊಠಡಿಯನ್ನು ಬೆಳಗ್ಗೆ 7 ಗಂಟೆಗೆ ಚುನಾವಣೆ ವೀಕ್ಷಕರ, ಅಭ್ಯರ್ಥಿಗಳ, ಏಜೆಂಟರ ಸಮ್ಮುಖದಲ್ಲಿ ತೆರೆಯಲಾಗುತ್ತಿದೆ.
ಇವಿಎಂ ಮತ ಏಣಿಕೆ ಕಾರ್ಯಕ್ಕಾಗಿ ನೆಲ ಮಹಡಿಯ ರೂಮ್ ನಂ.4ರಲ್ಲಿ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತಪತ್ರಗಳ ಎಣಿಕೆಗಾಗಿ ನೆಲ ಮಹಡಿಯ 9ರ ಕೊಠಡಿಯಲ್ಲಿ ಒಂದು ಟೇಬಲ್ ಹಾಗೂ ಇಟಿಪಿಬಿಎಸ್ ಸ್ಕ್ಯಾನಿಂಗ್‌ಗಾಗಿ ಕೊಠಡಿ ಸಂ.9ರಲ್ಲಿ ಒಂದು ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ತಲಾ ಒಬ್ಬರು ಎಣಿಕೆ ಮೇಲ್ವಿಚಾರಕ, ಎಣಿಕೆ ಸಹಾಯಕ ಹಾಗೂ ಮೈಕ್ರೋ ಅಬ್ಸರ್ವರ್ ನೇಮಕ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಓರ್ವ ಸಹಾಯಕ ಚುನಾವಣಾಧಿಕಾರಿಗಳು ಇರಲಿದ್ದಾರೆ.ಸೇವಾ ಮತದಾರರಿಂದ ಸ್ವೀಕರಿಸಲ್ಪಡುವ ಅಂಚೆ ಮತಪತ್ರಗಳ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಸಲುವಾಗಿ ಒಂದು ಟೇಬಲ್ ಮಾಡಲಾಗಿದ್ದು, ಓರ್ವ ಸ್ಕ್ಯಾನಿಂಗ್ ಮೇಲ್ವಿಚಾರಕರು, ಓರ್ವ ಅಸಿಸ್ಟಂಟ್ ಹಾಗೂ ಇಬ್ಬರು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಕಾಯ್ದಿಟ್ಟ ಸಿಬ್ಬಂದಿ ಸೇರಿದಂತೆ ಎಣಿಕೆ ಕಾರ್ಯಕ್ಕೆ ಒಟ್ಟು 63 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಸುತ್ತುವಾರು ಮತ ಎಣಿಕೆಯಾದ ವಿವರವನ್ನು ಪಬ್ಲಿಕ್ ಅಡ್ರೇಸ್ ಸಿಸ್ಟಮ್ ವ್ಯವಸ್ಥೆ ಮಾಡಲಾಗಿದೆ
ಅಭ್ಯರ್ಥಿ, ಅಭ್ಯರ್ಥಿ ಎಜೆಂಟರಿಗೆ ಮತ ಎಣಿಕೆ ಪೂರ್ವ ದಿಕ್ಕಿನಲ್ಲಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಏಜೆಂಟರಿಗೆ ಮುಖ್ಯ ದ್ವಾರದಲ್ಲಿ ಪ್ರವೇಶ ಇರುವುದಿಲ್ಲ. ಸದರಿ ವಾಹನಗಳಿಗೆ ಮುಖ್ಯದ್ವಾರದ 200 ಮೀಟರ್ ಮುಂಚಿತವಾಗಿ ಇರುವ ಜಿಲ್ಲಾ ಪಶು ಸಂಗೋಪನಾ ಆಸ್ಪತ್ರೆ ಎದುರುಗಡೆ ಹೋಗುವ ರಸ್ತೆ ಮುಖಾಂತರ ಮತ ಎಣಿಕೆ ಕೇಂದ್ರದಿಂದ ಸುಮಾರು 200 ಮೀಟರ್ ಅಂತರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಸಿಬ್ಬಂದಿಗೆ ಹಾಗೂ ಮಾಧ್ಯಮದವರಿಗೆ ಮಾತ್ರ ಮುಖ್ಯ ದ್ವಾರದಿಂದ ಪ್ರವೇಶವಿರುತ್ತದೆ. ಎಣಿಕೆ ಕೇಂದ್ರದಲ್ಲಿ ಮೊಬೈಲ್ ಫೋನ್ ನಿರ್ಬಂಧಿಸಲಾಗಿದೆ
ನಿಷೇಧಾಜ್ಞೆ ಜಾರಿ: ಮೇ 4ರ ಬೆಳಗ್ಗೆ 6 ಗಂಟೆಯಿಂದ ಮೇ 5ರ ಬೆಳಗ್ಗೆ 6 ಗಂಟೆವರೆಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ನ್ನು ಜಾರಿ ಮಾಡಿ ಆದೇಶಿಸಲಾಗಿದೆ. ಅಲ್ಲದೇ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರದ 10 ಕಿ.ಮೀ ವ್ಯಾಪ್ತಿಯಲ್ಲಿ ಮೇ 4ರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮಧ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಹೋಟಲ್, ಕ್ಲಬ್, ಡಾಬಾ ಮತ್ತು ಇನ್ನೀತರ ಸ್ಥಳಗಳಲ್ಲಿ ಮಧ್ಯ ಮಾರಾಟ ಹಾಗೂ ಸರಬರಾಜು ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.