ಸಾರಾಂಶ
ರಾಮನಗರ: ದೇಶದ ಅಭಿವೃದ್ಧಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸದೃಢ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ದೇಶದ ಎಲ್ಲಾ ನಾಗರೀಕರು ಸಂವಿಧಾನಬದ್ಧ ಹಕ್ಕನ್ನು ಚಲಾಯಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಎಂ.ಪಿ.ನಾಗಮ್ಮ ಹೇಳಿದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಣಕು ಯುವ ಸಂಸತ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಜನರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇತ್ತೀಚಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಶೇ.50 ಕ್ಕಿಂತಲೂ ಕಡಿಮೆ ಮತದಾನ ನಡೆಯುತ್ತಿದೆ. ಇದರಿಂದ ಸಮರ್ಥ ಪ್ರತಿನಿಧಿಗಳ ಆಯ್ಕೆ ಸಾಧ್ಯವಾಗುತ್ತಿಲ್ಲ. ಯುವಜನರು ಪ್ರಜಾಪ್ರಭುತ್ವದ ಬಗ್ಗೆ ಪ್ರಜ್ಞೆ ಬೆಳೆಸಿಕೊಳ್ಳಲು ಅಣಕು ಯುವ ಸಂಸತ್ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಿಗೂ ಸಮಾನ ಆದ್ಯತೆ ಇರುತ್ತದೆ. ಆಡಳಿತ ಪಕ್ಷವು ಕೈಗೊಳ್ಳುವ ನೀತಿ, ನಿರ್ಧಾರಗಳಲ್ಲಿ ಆಗುವ ಲೋಪದೋಷಗಳನ್ನು ವಿರೋಧ ಪಕ್ಷಗಳು ಗುರುತಿಸಿ, ಮುಖಾಮುಖಿ ಚರ್ಚಿಸುವುದರಿಂದ ದೇಶದಲ್ಲಿ ಅಭಿವೃದ್ಧಿಪರ ನೀತಿ, ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತದೆ. ಆಡಳಿತ ಅಥವಾ ವಿರೋಧ ಪಕ್ಷ ಯಾವುದೇ ಸ್ಥಾನಗಳು ದೊರೆತರೂ ದೇಶದ ಪ್ರಗತಿಗೆ ಶ್ರಮಿಸುವುದರಿಂದ ಜನಸಾಮಾನ್ಯರಿಗೆ ಒಳಿತಾಗುತ್ತದೆ ಎಂದು ಹೇಳಿದರು.ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಶಿವಣ್ಣ ಮಾತನಾಡಿ, ಭಾರತವು ಬಹು ಭಾಷೆ, ಸಂಸ್ಕೃತಿ, ಧರ್ಮ, ಜಾತಿ, ಆಚಾರ, ವಿಚಾರಗಳನ್ನು ಒಳಗೊಂಡ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಏಕ ಭಾಷೆ, ಏಕ ಸಂಸ್ಕೃತಿಯು ಭಾರತದ ಪರಂಪರೆಗೆ ಒಗ್ಗುವುದಿಲ್ಲ ಎಂದರು.
ಪ್ರಜಾಪ್ರಭುತ್ವದ ಉಳಿವಿಗೆ ಪ್ರಜೆಗಳ ಪ್ರಬುದ್ಧತೆ ಮುಖ್ಯವಾಗಲಿದೆ. ವ್ಯವಸ್ಥೆಯ ನ್ಯೂನ್ಯತೆಗಳನ್ನು ಉಪಯೋಗಪಡಿಸಿಕೊಂಡ ಕೆಲವೇ ಕೆಲವು ಮಂದಿ ಮಾತ್ರವೇ ವಂಶಪಾರಂಪರ್ಯವಾಗಿ ಅಧಿಕಾರ ನಡೆಸುತ್ತಿದ್ದಾರೆ. ಯಾವುದೇ ಜಾತಿ, ಭಾಷೆ, ಧರ್ಮ, ಆಸೆ, ಆಮಿಷಗಳಿಗೆ ಒಳಗಾಗದೆ ರಾಜಕೀಯ ಪ್ರಜ್ಞಾವಂತಿಕೆಯನ್ನು ಬೆಳೆಸಿಕೊಂಡು ನಿಷ್ಪಕ್ಷಪಾತ, ನಿರ್ಭಿತವಾಗಿ ಮತ ಚಲಾಯಿದಾಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷರಣೆ ಮಾಡಲು ಸಾಧ್ಯ ಎಂದು ತಿಳಿಸಿದರು.ದೇಶದ ಒಟ್ಟು ಜನಸಂಖ್ಯೆಯಲ್ಲಿ ಪುರಷರಷ್ಟೇ ಮಹಿಳೆಯರ ಸಂಖ್ಯೆಯೂ ಇದೆ. ಆದರೆ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರ ಪ್ರಾತಿನಿಧ್ಯತೆ ಶೇ.5ರಷ್ಟನ್ನೂ ಮೀರದಿರುವುದು ದುರದೃಷ್ಟಕರ ಸಂಗತಿ ಎಂದು ವಿಷಾದಿಸಿದರು.
ಶಿವಣ್ಣ ಮತನಾಡಿ, ದೇಶ ಸ್ವಾತಂತ್ರ್ಯಗೊಂಡು 75 ವರ್ಷಗಳೇ ಕಳೆದಿವೆ. ಮಹಿಳೆಯರಲ್ಲಿ ಇಂದಿರಾಗಾಂಧಿ ಅವರೊಬ್ಬರೇ ಪ್ರಧಾನಿ ಆಗಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಇಂದಿಗೂ ಮಹಿಳೆಯರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿಲ್ಲ. ದೇಶದ ರಾಜಕಾರಣದಲ್ಲಿ ಮಹಿಳೆಯರನ್ನು ಮತದಾನಕ್ಕೆ ಮಾತ್ರವೇ ಸೀಮಿತಗೊಳಿಸಲಾಗಿದೆ. ಆಡಳಿತದ ಅವಕಾಶಗಳನ್ನು ದೊರಕಿಸಿಕೊಡಲು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಬೇಕು. ಹೀಗಾದಾಗ ಮಾತ್ರವೇ ಪ್ರಜಾಪ್ರಭುತ್ವ ಅರ್ಥಪೂರ್ಣಗೊಳ್ಳಲಿದೆ ಎಂದರು.ಅಣಕು ಯುವ ಸಂಸತ್ ಸಂಚಾಲಕ ಎಂ.ಎನ್.ಪ್ರದೀಪ್, ಪ್ರಾಂಶುಪಾಲರಾದ ಜಿ.ರಾಜಣ್ಣ, ತ್ರಿವೇಣಿ, ನೀಲಿ ಸತ್ಯನಾರಾಯಣ, ಉಪನ್ಯಾಸಕರಾದ ಕಿರಣ್ಕುಮಾರ್, ಮಂಜುನಾಥ, ಶಿಲ್ಪಾ, ಎಂ.ಪ್ರದೀಪ್, ಡಾ.ಎಸ್.ನರಸಿಂಹಸ್ವಾಮಿ ಭಾಗವಹಿಸಿದ್ದರು.