ಆಸೆ, ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ಮತಚಲಾಯಿಸಿ

| Published : Mar 29 2024, 12:49 AM IST

ಸಾರಾಂಶ

ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಚುನಾವಣೆ. ಈ ರಾಷ್ಟ್ರೀಯ ಹಬ್ಬದಲ್ಲಿ ಜಿಲ್ಲೆಯ ಅರ್ಹ ನೋಂದಾಯಿತ ಮತದಾರರು ಏ.26ರಂದು ಸಮೀಪದ ಮತಗಟ್ಟೆಗೆ ತೆರಳಿ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ಮತ ಚಲಾಯಿಸುವುದರ ಮೂಲಕ ಸಮರ್ಥ ಜನನಾಯಕನ ಆಯ್ಕೆಯಲ್ಲಿ ಭಾಗೀದಾರರಾಗಿರಿ.

ಚಿತ್ರದುರ್ಗ: ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಚುನಾವಣೆ. ಈ ರಾಷ್ಟ್ರೀಯ ಹಬ್ಬದಲ್ಲಿ ಜಿಲ್ಲೆಯ ಅರ್ಹ ನೋಂದಾಯಿತ ಮತದಾರರು ಏ.26ರಂದು ಸಮೀಪದ ಮತಗಟ್ಟೆಗೆ ತೆರಳಿ ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ಮತ ಚಲಾಯಿಸುವುದರ ಮೂಲಕ ಸಮರ್ಥ ಜನನಾಯಕನ ಆಯ್ಕೆಯಲ್ಲಿ ಭಾಗೀದಾರರಾಗುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್ ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಚುನಾವಣಾ ಶಾಖೆ, ಜಿಲ್ಲಾ ಪಂಚಾಯಿತಿ, ನಗರಸಭೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಿಲ್ಲಾ ವ್ಯವಸ್ಥಿತ ಮತದಾರರ ಜಾಗೃತಿ ಮತ್ತು ಭಾಗವಹಿಸುವಿಕೆ ಕಾರ್ಯಕ್ರಮದ ಭಾಗವಾಗಿ ಚಿತ್ರದುರ್ಗದಲ್ಲಿ ಶೇ.70ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆ ಪ್ರದೇಶಗಳಲ್ಲಿ ಮತದಾರರಲ್ಲಿ ಅರಿವು ಮೂಡಿಸಲು ಏರ್ಪಡಿಸಲಾಗಿದ್ದ ವಾಕ್‍ಥಾನ್‍ನಲ್ಲಿ ಭಾಗವಹಿಸಿ ಮಾತನಾಡಿದರು.

ಏ.26ರಂದು ಮೊದಲ ಹಂತದಲ್ಲಿ ನಡೆಯಲಿರುವ ಚಿತ್ರದುರ್ಗ ಲೋಕಸಭಾ ಚುನಾವಣೆಯ ದಿನದಂದು ಜಿಲ್ಲೆಯ ಪ್ರತಿಯೊಬ್ಬರೂ ಜವಾಬ್ದಾರಿ ಅರಿತು ಮತದಾನ ಮಾಡುವ ಮೂಲಕ ಕಡ್ಡಾಯವಾಗಿ ತಮ್ಮ ಹಕ್ಕನ್ನು ಚಲಾಯಿಸಬೇಕು. ಪ್ರಜಾಪ್ರಭುತ್ವ ಎನ್ನುವುದು ಆಡಳಿತ ವ್ಯವಸ್ಥೆ ಮಾತ್ರವಲ್ಲದೆ ಅದೊಂದು ಒಗ್ಗೂಡಿ ಬಾಳುವ ವಿಧಾನ. ಸಮಗ್ರ ಬದುಕಿನ ಜೀವನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ ಮತ್ತು ಗೌರವ ನೀಡುವ ಕಾರ್ಯಕ್ರಮ ಇದಾಗಿದೆ ಎಂದರು.

ನಿಮ್ಮ ಮತ ನಿಮ್ಮ ಹಕ್ಕು. ಪ್ರತಿಯೊಬ್ಬರೂ ಹಕ್ಕನ್ನು ಚಲಾಯಿಸಿ ದೇಶದ ಸಂವಿಧಾನನ್ನು ಗೌರವಿಸುವ, ಅದನ್ನು ಸಂರಕ್ಷಿಸುವ ನಾಯಕನನ್ನು ಆರಿಸಬೇಕಾದ ಅಗತ್ಯವನ್ನು ಅರಿಯಬೇಕು. ಮತದಾನ ಸಂಭ್ರಮವಾದಾಗ ಮಾತ್ರ ದೇಶ ಸಹಜವಾಗಿ ಬದಲಾವಣೆ ಕಂಡುಕೊಳ್ಳುತ್ತದೆ ಎಂದರು.

ಚುನಾವಣೆಗಳು ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿವೆ. ಆಮಿಷ, ಒತ್ತಡಗಳಿಗೆ ಬಲಿಯಾಗದಿರಿ. ಮತಗಟ್ಟೆಗೆ ತೆರಳಿ ನಿರ್ಭಯವಾಗಿ ಮತ ಚಲಾಯಿಸಿ, ದೇಶದ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಬೇಕು. ಅದಕ್ಕೂ ಮುನ್ನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಸೋಮಶೇಖರ್ ವಿನಂತಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರಸಭೆ ಆಯುಕ್ತೆ ಎಂ.ರೇಣುಕಾ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿ-ಸಿಬ್ಬಂದಿಗಳು ಉಪಸ್ಥಿತರಿದ್ದರು.ನಗರದ ಮಹಾತ್ಮ ಗಾಂಧಿಸರ್ಕಲ್‍ನಿಂದ ಆರಂಭಗೊಂಡ ವಾಕಥಾನ್ ಸಂತೆ ಹೊಂಡದ ರಸ್ತೆ, ಅಂಜುಮನ್ ರಸ್ತೆ, ಸರ್ಕಾರಿ ಉರ್ದು ಶಾಲೆ, ರೀಜನಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್, ಗೋಪಾಲಪುರ ಹಾಗೂ ಜೆಸಿಆರ್ ಬಡಾವಣೆ, ವಿಪಿಬಡಾವಣೆಗಳಲ್ಲಿ ಸಂಚರಿಸಿ, ಅಂತಿಮವಾಗಿ ವೀರವನಿತೆ ಓಬವ್ವ ವೃತ್ತದಲ್ಲಿ ಸಂಪನ್ನಗೊಂಡಿತು.