ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸದೃಢಗೊಳಿಸಲು ದೇಶದ ಪ್ರತಿಯೊಬ್ಬ ಅರ್ಹ ಮತದಾರನೂ ಕಡ್ಡಾಯವಾಗಿ ತಮ್ಮ ಮತಾಧಿಕಾರವನ್ನು ಚಲಾಯಿಸಬೇಕು ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನೇರಳೆ ವೀರಭದ್ರಯ್ಯ ಭವಾನಿ ತಿಳಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಜಿಪಂನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬರೂ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಯಾವುದೇ ಆಸೆ- ಆಮಿಷಗಳಿಗೆ ಒಳಗಾಗದೇ ಚಲಾಯಿಸಬೇಕು. ಒಂದು ಮತವೂ ಕೂಡಾ ಅತ್ಯಮೂಲ್ಯ ಎಂಬುದನ್ನು ಅನೇಕ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಸೋಲು- ಗೆಲುವುಗಳು ಸಾಬೀತು ಮಾಡಿವೆ. ಆದ್ದರಿಂದ ಮತದಾನದ ಮಹತ್ವವನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನರ ಬೇಡಿಕೆಗಳನ್ನು ಈಡೇರಿಸುವಂತಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕೆಂದರೆ ನಮಗಿರುವ ಮತದಾನದ ಶಕ್ತಿಯನ್ನು ಎಲ್ಲರೂ ಚಲಾಯಿಸಬೇಕು. ಆದರೆ ಈವರೆಗೆ ನಡೆದಿರುವ ಬಹುತೇಕ ಚುನಾವಣೆಗಳನ್ನು ಗಮನಿಸಿದರೆ ಶೇ. 60ರಿಂದ 70ರಷ್ಟು ಜನರು ಮಾತ್ರ ಮತದಾನ ಮಾಡುತ್ತಿದ್ದಾರೆ. ಉಳಿದವರು ಚುನಾವಣಾ ಪ್ರಕ್ರಿಯೆಗಳಿಂದ ದೂರ ಉಳಿಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ನಾನು ಮತ ಚಲಾಯಿಸಿದ ಅಭ್ಯರ್ಥಿ ಸೋಲುತ್ತಾರೋ ಗೆಲ್ಲುತ್ತಾರೋ ಎಂಬ ಭಾವನೆ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ನನ್ನ ಒಂದು ಮತದಿಂದ ಯಾವ ಪರಿಣಾಮ ಬೀರುವುದಿಲ್ಲ ಎಂಬ ನಿರ್ಲಕ್ಷ್ಯ ಧೋರಣೆಗಳನ್ನು ಮತದಾರರು ಹೊಂದಬಾರದು ಎಂದು ಹೇಳಿದರು.ನನಗೆ 18 ವರ್ಷ ತುಂಬಿ ಮತದಾರರ ಪಟ್ಟಿಗೆ ಸೇರ್ಪಡೆಯಾದಾಗಿನಿಂದ ಇಂದಿನವರೆಗೂ ಪ್ರತಿ ಚುನಾವಣೆಯಲ್ಲೂ ತಪ್ಪದೆ ಮತದಾನ ಮಾಡಿದ್ದೇನೆ, ಮುಂದೆಯೂ ಸಹ ನನ್ನ ಮತ ಅಧಿಕಾರವನ್ನು ಚಲಾಯಿಸುತ್ತೇನೆ, ಬನ್ನಿ ಎಲ್ಲರೂ ಮುಂಬರುವ ಚುನಾವಣೆಗಳಲ್ಲಿ ಪಾಲ್ಗೊಂಡು ಮತ ಚಲಾಯಿಸುವ ಮೂಲಕ ಸುಸ್ಥಿರ, ಸುಭದ್ರ ಹಾಗೂ ಸರ್ವಾಂಗೀಣ ಅಭಿವೃದ್ಧಿಯ ದೇಶ ನಿರ್ಮಾಣದ ಭಾಗವಾಗೋಣ ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮಾತನಾಡಿ, ದೇಶ ಅಭಿವೃದ್ಧಿ ಪಥದಲ್ಲಿ ಸಮರ್ಥವಾಗಿ ಮುನ್ನಡೆಯಲು ಅಗತ್ಯ ಕಾನೂನು ಕಟ್ಟಳೆಗಳನ್ನು ರೂಪಿಸಿ ಜಾರಿ ಮಾಡುವ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಹೆಣ್ಣು, ಗಂಡು ಎಂಬ ತಾರತಮ್ಯವಿಲ್ಲದೇ ಸಂವಿಧಾನವು 18 ವರ್ಷ ತುಂಬಿದ ಪ್ರತಿಯೊಬ್ಬರನ್ನೂ ಅರ್ಹ ಮತದಾರರೆಂದು ಪರಿಗಣಿಸಿ ಮತದಾನದ ಹಕ್ಕನ್ನು ನೀಡಿದೆ. ಮತದಾನದ ಹಕ್ಕು ದೊಡ್ಡ ಜವಾಬ್ದಾರಿ ಎಂಬುದನ್ನು ಮರೆಯಬಾರದು, ಇತ್ತೀಚಿನ ದಿನಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಚುನಾವಣಾ ಪ್ರಕ್ರಿಯೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದಾರೆ, ನಮ್ಮ ಜಿಲ್ಲೆಯಲ್ಲೂ ಸಹ ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವುದು ಒಳ್ಳೆಯ ಬೆಳವಣಿಗೆ ಎಂದರು.ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಜಿಲ್ಲಾಡಳಿತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಭಿತ್ತಿ ಪತ್ರ ರಚನಾ ಸ್ಪರ್ಧೆ, ಚುನಾವಣಾ ಜಾಗೃತಿಯ ರೀಲ್ಸ್ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಜಿಲ್ಲೆಯ ವಿವಿಧ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಮತಗಟ್ಟೆ ಅಧಿಕಾರಿಗಳಿಗೆ ಪ್ರಶಂಸೆಯ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶಿಲ್ಪ ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಧಿಕಾರಿ ಡಿ.ಎಚ್.ಅಶ್ವಿನ್, ಜಿಪಂ ಉಪ ಕಾರ್ಯದರ್ಶಿ ಅತೀಕ್ ಪಾಷ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.