ತುಮಕೂರು ಜಿಲ್ಲೆಯವರಾದ ಶಶಿ ಹುಲಿಕುಂಟೆ ಮಠ್ ಅವರನ್ನು ಪಕ್ಷದ ಕಾರ್ಯಕರ್ತರು ಗೆಲ್ಲಿಸಿ. ಅ. ೨೩ಕ್ಕೆ ನಡೆಯುವ ಚುನಾವಣೆಯ ದಿನ ಮತದಾರರೆಲ್ಲರೂ ಬಿಡುವು ಮಾಡಿಕೊಂಡು ಮತ ಚಲಾಯಿಸಿ.
ಕನ್ನಡಪ್ರಭ ವಾರ್ತೆ ಶಿರಾ
ಹಣದ ಪ್ರಭಾವ ರಾಜಕೀಯ ಕ್ಷೇತ್ರದಿಂದ ದೂರ ಮಾಡದ ಹೊರತು ದೇಶ, ರಾಜ್ಯಗಳ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು. ಬದಲಾಗದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ. ಈ ನಿಟ್ಟಿನಲ್ಲಿ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಮೇಲ್ಮನೆಗೆ ಗೌರವ ನೀಡಿದಂತಾಗುತ್ತದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.ನಗರದ ಶಾಸಕರ ಗೃಹ ಕಚೇರಿಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಯುಕ್ತ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ವಿಧಾನಮಂಡಲದಲ್ಲಿ ಬುದ್ಧಿವಂತರ ಸದನ ಎಂದೇ ಖ್ಯಾತಿ ಪಡೆದಿರುವ ವಿಧಾನಪರಿಷತ್ಗೆ ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಈ ನಿಟ್ಟಿನಲ್ಲಿ ಯುವಕರ ಕಣ್ಮಣಿ ತುಮಕೂರು ಜಿಲ್ಲೆಯವರಾದ ಶಶಿ ಹುಲಿಕುಂಟೆ ಮಠ್ ಅವರನ್ನು ಗೆಲ್ಲಿಸಿ ಎಂದ ಅವರು ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ೫ ಜಿಲ್ಲೆ, ೩೬ ವಿಧಾನಸಭಾ ಕ್ಷೇತ್ರಗಳು ಒಳಪಡಲಿದ್ದು, ಒಟ್ಟು ೧೯೧೦೦೦ ಮತದಾರರಿದ್ದಾರೆ. ಇದರಲ್ಲಿ ತುಮಕೂರು ನಗರದಲ್ಲಿ ೧೧೧೦೦, ಶಿರಾ ತಾಲೂಕಿನಲ್ಲಿ ೬೮೦೦ ಮತದಾರರು ಇದ್ದಾರೆ. ಶಿರಾ ತಾಲೂಕಿನ ಮತದಾರರು ಮೊದಲನೇ ಪ್ರಾಶಸ್ತ್ಯದ ಮತ ನೀಡಿ ಶಶಿ ಹುಲಿಕುಂಟೆ ಮಠ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆ ಮಠ್ ಮಾತನಾಡಿ, ಇದುವರೆಗೂ ಆಗ್ನೇಯ ಪವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳು ವಿಧಾನ ಪರಿಷತ್ ಕ್ಷೇತ್ರವನ್ನು ಅನಾಥವಾಗಿ ಮಾಡಿದ್ದಾರೆ. ಗೆದ್ದ ನಂತರ ಕ್ಷೇತ್ರಗಳ ಕಡೆ ಹೋಗುವುದಿಲ್ಲ. ಪದವೀಧರರಿಗೆ ಸ್ಪಂದಿಸಿಲ್ಲ. ಆದ್ದರಿಂದ ನನ್ನನ್ನು ಗೆಲ್ಲಿಸಿ ಪದವೀಧರರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನಿರಂತರವಾಗಿ ಪದವೀಧರರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಹೇಳಿದರು.ಶಿರಾ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್. ಮಂಜುನಾಥ್ ಮಾತನಾಡಿ, ತುಮಕೂರು ಜಿಲ್ಲೆಯವರಾದ ಶಶಿ ಹುಲಿಕುಂಟೆ ಮಠ್ ಅವರನ್ನು ಪಕ್ಷದ ಕಾರ್ಯಕರ್ತರು ಗೆಲ್ಲಿಸಿ. ಅ. ೨೩ಕ್ಕೆ ನಡೆಯುವ ಚುನಾವಣೆಯ ದಿನ ಮತದಾರರೆಲ್ಲರೂ ಬಿಡುವು ಮಾಡಿಕೊಂಡು ಮತ ಚಲಾಯಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೀಷನ್ ಮೊಹಮದ್, ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾ ಖಾನ್, ಮಾಜಿ ಜಿ.ಪಂ. ಸದಸ್ಯ ಪಾರ್ವತಪ್ಪ, ಕೆಪಿಸಿಸಿ ಸದಸ್ಯ ಕೋಟೆ ಲೋಕೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಣಿಕಂಠ, ನಗರ ಅಧ್ಯಕ್ಷ ಅಂಜನ್ ಕುಮಾರ್, ಗ್ರಾಮಾಂತರ ಅಧ್ಯಕ್ಷ ಹೇಮಂತ್ ಗೌಡ, ಎನ್ಎಸ್ಯುಐ ಅಧ್ಯಕ್ಷ ರಂಗನಾಥ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಹದೇವಮ್ಮ, ರೂಪೇಶ್ ಕೃಷ್ಣಯ್ಯ, ಕೊಟ್ಟ ಶಂಕರ್, ಮದ್ದಕ್ಕನಹಳ್ಳಿ ತಿಪ್ಪೇಸ್ವಾಮಿ, ತಾಪಂ ಮಾಜಿ ಸದಸ್ಯರಾದ ಪಿಬಿ ನರಸಿಂಹಯ್ಯ, ಮಂಜುಳ ಬಾಯಿ ಶೇಷ ನಾಯ್ಕ್, ಆಶ್ರಯ ಸಮಿತಿ ಸದಸ್ಯರಾದ ನೂರುದ್ದೀನ್, ಮಂಜುನಾಥ್, ಜಯಲಕ್ಷ್ಮೀ, ನಗರಸಭೆ ಸದಸ್ಯರಾದ ಸುಶೀಲ ವಿರೂಪಾಕ್ಷ ಸೇರಿದಂತೆ ಹಲವರು ಹಾಜರಿದ್ದರು.