ದೇಶದ ಸದೃಢತೆಗಾಗಿ ಮೋದಿಗೆ ಮತ ನೀಡಿ: ಜೆ. ಪಿ. ನಡ್ಡಾ

| Published : Apr 27 2024, 01:01 AM IST

ದೇಶದ ಸದೃಢತೆಗಾಗಿ ಮೋದಿಗೆ ಮತ ನೀಡಿ: ಜೆ. ಪಿ. ನಡ್ಡಾ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕರ್ತರ ಮಧ್ಯೆ ಬಿಜೆಪಿ ರೋಡ್ ಶೋ। ರಾಯಚೂರು ಲೋಕಸಭೆ, ಸುರಪುರ ವಿಧಾಸನಭೆ ಉಪ ಚುನಾವಣೆ ಅಭ್ಯರ್ಥಿಗಳ ಪರ ಪ್ರಚಾರ

ಕನ್ನಡಪ್ರಭ ವಾರ್ತೆ ಸುರಪುರ

ಕಳೆದ 10 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯುತ್ತಮ ಆಡಳಿತ ನೀಡಿದ್ದು, ದೇಶದ ರಕ್ಷಣೆ ಮತ್ತು ಸದೃಢತೆಗಾಗಿ ಬಿಜೆಪಿಗೆ ಮತ ನೀಡಿ ಗೆಲುವಿನಲ್ಲಿ ಪ್ರತಿಯೊಬ್ಬರೂ ಪಾಲುದಾರರಗಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು. ನಗರದ ಬಿಜೆಪಿ ಕಚೇರಿಯಿಂದ ಆರಂಭವಾದ ರೋಡ್ ಶೋ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಮಾಪ್ತಿಯಾಗಿ ತೆರೆದ ವಾಹನದಲ್ಲೇ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.ನಿಮ್ಮಗಳ (ಜನರ) ಮತದಾನ ಮತ್ತು ಆಶೀರ್ವಾದ ಬಿಜೆಪಿ ಅಭ್ಯರ್ಥಿಗಳಿಗೆ ಅಗತ್ಯವಾಗಿ ಬೇಕಿದೆ. ನಿಮ್ಮೆಲ್ಲರ ಮಧ್ಯೆದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ಬಂದಿದ್ದೇನೆ. ನಿಮ್ಮಲ್ಲಿ ಕೇಳಿಕೊಳ್ಳುವುದು ಇಷ್ಟೇ. ನಿಮ್ಮ ಉತ್ಸಾಹ, ಹುರುಪು ನೋಡಿದರೆ ಬಿಜೆಪಿ ಗೆಲ್ಲುವುದರಲ್ಲಿ ಯಾವುದೆ ಸಂದೇಹವಿಲ್ಲ ಎಂದರು.

ನಾವೆಲ್ಲರೂ ಬಿಜೆಪಿಗೆ ಮತ ನೀಡಿ ಮೋದಿಯವರ ಜತೆಗಿದ್ದೇವೆ ಎಂಬುದನ್ನು ತೋರ್ಪಡಿಸಬೇಕಿದೆ ಎಂದರು. ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ತಮ್ಮ ಅಮೂಲ್ಯವಾದ ಮತವನ್ನು ಬಿಜೆಪಿ ಅಭ್ಯರ್ಥಿ ಅಮರೇಶ್ವರ ನಾಯಕಗೆ ನೀಡಿ ದೆಹಲಿಗೆ ಕಳುಹಿಸಿಕೊಡಬೇಕು. ಹಾಗೂ ಸಮರ್ಪಕವಾಗಿ ಆಡಳಿತ ನಡೆಯಲು ವಿಧಾನಸಭಾ ಉಪ ಚುನಾವಣೆಯಲ್ಲಿ ನರಸಿಂಹ ನಾಯಕರಿಗೆ ಮತ ನೀಡಬೇಕು ಎಂದರು.

ಈ ಚುನಾವಣೆ ಮೋದಿಯವರಿಗೆ ಪ್ರಮುಖವಾಗಿದ್ದು, ದೇಶ ರಕ್ಷಣೆ ಮತ್ತು ಅಭಿವೃದ್ಧಿಗಾಗಿ, ರೈತರಲ್ಲಿ ಶಕ್ತಿ ತುಂಬಲು, ಯುವಕರಿಗೆ ಉದ್ಯೋಗ, ದಲಿತರು, ಆದಿವಾಸಿಗಳನ್ನು ಅಭಿವೃದ್ಧಿಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಮೋದಿ ಆಡಳಿತ ಅಗತ್ಯವಾಗಿದೆ ಎಂದು ತಿಳಿಸಿದರು.

ಸಂಸದ ರಾಜಾ ಅಮರೇಶ ನಾಯಕ ಮಾತನಾಡಿ, ದೇಶವನ್ನು ರಕ್ಷಿಸಿ ಅಭಿವೃದ್ಧಿ ಕಾರ್ಯ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರಧಾನಿ ಮೋದಿಯವರ ಕೈ ಬಲಪಡಿಸಲು ಲೋಕಸಭೆ ಚುನಾವಣೆಯಲ್ಲಿ ನನಗೆ ಮತ್ತು ವಿಧಾನ ಸಭಾ ಉಪಚುನಾವಣೆಯಲ್ಲಿ ರಾಜೂಗೌಡರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ಅಭ್ಯರ್ಥಿ ನರಸಿಂಹ ನಾಯಕ (ರಾಜೂಗೌಡ) ಮಾತನಾಡಿ, ಸುರಪುರ ತಾಲೂಕಿನಲ್ಲಿ 24*7 ಕುಡಿಯುವ ನೀರು ಒದಗಿಸುವ ಕಾರ್ಯ ಮಾಡಲಾಗಿದೆ. ಇಡೀ ರಾಜ್ಯದಲ್ಲಿ ಕುಡಿಯುವ ನೀರಿಗೆ ಬರಗಾಲವಿದ್ದರೂ ಸುರಪುರಕ್ಕೆ ಕುಡಿಯುವ ನೀರಿನ ತೊಂದರೆ ಆಗದಂತೆ ಕೆಲಸ ಮಾಡಿದ್ದೇನೆ ಎಂದರು.ಎರಡು ಬೆಳೆಗೆ ನೀರು ಕೊಡಿಸುವ ಜವಾಬ್ದಾರಿ ನನ್ನದು. ಕೊಡಿಸಲು ಆಗದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ. ಇಡೀ ಜಿಲ್ಲೆಗೆ ಕುಡಿಯುವ ನೀರಿನ ಕಾಮಗಾರಿಯನ್ನು ಮಾಡಲಾಗಿದ್ದು, ಸಂಸದ ರಾಜಾ ಅಮರೇಶ ನಾಯಕ ಅವರು ಪ್ರಧಾನಿ ನೇತೃತ್ವದಲ್ಲಿ ಮಾಡಿದ್ದಾರೆ. ಆದ್ದರಿಂದ ಲೋಕಸಭಾ ಮತ್ತು ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಬಿಜೆಪಿಗೆ ಅಮೂಲ್ಯವಾದ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ), ಬಿಜೆಪಿ ಮಂಡಲ ಅಧ್ಯಕ್ಷ ವೇಣುಮಾಧವ ನಾಯಕ ಸೇರಿದಂತೆ ಮುಖಂಡರು, ಕಾರ್ಯಕರ್ತರು ಇದ್ದರು.

ಅಪಾರ ಸಂಖ್ಯೆಯಲ್ಲಿ ಜನತೆ ಆಗಮನ: ಸುಡು ಬಿಸಿಲನ್ನು ಲೆಕ್ಕಿಸಿದೆ ಹುಣಸಗಿ ಮತ್ತು ಸುರಪುರ ತಾಲೂಕುಗಳಿಂದ ಬಿಜೆಪಿ ಕಾಯಕರ್ತರು ನಗರದತ್ತ ಧಾವಿಸಿದರು. ಶುಕ್ರವಾರ ನಗರದೆಲ್ಲೆಡೆ ಕೇಸರಿಯ ಧ್ವಜ, ಟೋಪಿಗಳೇ ಹಾರಾಡಿದವು. ರೋಡ್‌ಶೋನಲ್ಲಿ ಪಾಲ್ಗೊಂಡು ರಣಬಿಸಿಲಿನಲ್ಲೂ ನಾಯಕರ ಮಾತುಗಳನ್ನು ಆಲಿಸಿದರು.

ಮೊಳಗಿದ ಮೋದಿ ಝೇಂಕಾರ: ಬೆಳಗಿನಿಂದಲೇ ಪ್ರಧಾನಿ ನರೇಂದ್ರ ಮೋದಿ, ನರಸಿಂಹ ನಾಯಕ ರಾಜೂಗೌಡ ಹೆಸರು ಜೋರಾಗಿಯೇ ಮೊಳಗುತ್ತಿತ್ತು. ಪ್ರಚಾರ ಸಂದರ್ಭದಲ್ಲಿ ನಾಯಕರು ಮಾತನಾಡುವ ವೇಳೆ ಕಾರ್ಯಕರ್ತರು ಮೋದಿ.. ಮೋದಿ.. ಮೋದಿ ಅಭಿಮಾನಿಗಳು ಝೇಂಕಾರ ಹಾಕಿದರು.