ಸ್ವ-ಇಚ್ಛೆಯಿಂದ ಸೂಕ್ತ ಅಭ್ಯರ್ಥಿಗೆ ಮತದಾನ ಮಾಡಿ: ಮಹೇಂದ್ರ

| Published : Apr 03 2024, 01:35 AM IST

ಸಾರಾಂಶ

ಸ್ವ-ಇಚ್ಛೆಯಿಂದ ತಮಗೆ ಸೂಕ್ತವೆನಿಸಿದ ಅಭ್ಯರ್ಥಿಗೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಸಹಾಯಕ ಚುನಾವಣಾಧಿಕಾರಿ ಮಹೇಂದ್ರ ಕುಮಾರ್‌ ಕರೆ ನೀಡಿದರು.

ಹೊಸದುರ್ಗ: ಸ್ವ-ಇಚ್ಛೆಯಿಂದ ತಮಗೆ ಸೂಕ್ತವೆನಿಸಿದ ಅಭ್ಯರ್ಥಿಗೆ ಕಡ್ಡಾಯವಾಗಿ ಮತದಾನ ಮಾಡಿ ಎಂದು ಸಹಾಯಕ ಚುನಾವಣಾಧಿಕಾರಿ ಮಹೇಂದ್ರ ಕುಮಾರ್‌ ಕರೆ ನೀಡಿದರು.

ತಾಲೂಕು ಸ್ವೀಪ್‌ ಸಮಿತಿವತಿಯಿಂದ ನಡೆದ ಮತದಾರರ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈಗಾಗಲೇ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಏ.26ರಂದು ಚುನಾವಣೆ ನಡೆಯಲಿದೆ. ಮತದಾನವೆಂಬ ಪವಿತ್ರ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗಬೇಕು. ಮತದಾನದ ಪ್ರಮಾಣ ಕಡಿಮೆಯಾದರೆ ಪ್ರಜಾಪ್ರಭುತ್ವದಲ್ಲಿ ಬಲ ಬರುವುದಿಲ್ಲ ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.

ಮತದಾನ ಶೇಕಡವಾರು ಕಡಿಮೆಯಾಗುತ್ತಿರುವುದು ಯೋಚಿಸಬೇಕಾದ ಸಂಗತಿ. ಪ್ರಜಾಪ್ರಭುತ್ವದಲ್ಲಿ ಜನಗಳ ಪ್ರೀತಿ ಇರುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುವವರು. ಶೇ.50ಕ್ಕಿಂತ ಹೆಚ್ಚು ಮತ ಪಡೆದ ಅಭ್ಯರ್ಥಿ ಜನಾನುರಾಗಿ ಎನಿಸಿಕೊಳ್ಳುತ್ತಾನೆ. ಆದರೆ ಮತದಾರರು ಕ್ಷೇತ್ರದಲ್ಲಿ ಯೋಗ್ಯ ಅಭ್ಯರ್ಥಿ ಇಲ್ಲ ಎಂದು ಮತದಾನ ಮಾಡಲು ನೆಪ ಒಡ್ಡುವ ಕ್ರಮ ಸರಿಯಲ್ಲ. ಅಭ್ಯರ್ಥಿ ಇಷ್ಟವಿಲ್ಲದಿದ್ದರೆ ನೋಟಾಗೆ ಮತದಾನ ಮಾಡಲು ಚುನಾವಣಾ ಆಯೋಗ ಹಕ್ಕು ನೀಡಿದೆ. ಹಾಗಾಗಿ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗಿಯಾಗಬೇಕು. ಕಡ್ಡಾಯವಾಗಿ ಎಪಿಕ್‌ ಕಾರ್ಡ ಮೂಲಕ ಮತ ಚಲಾಯಿಸಿ ಎಂದು ಮನವಿ ಮಾಡಿದರು.

ತಾಲೂಕು ಪಂಚಾಯಿತಿ ಇಓ ಸುನಿಲ್‌ ಕುಮಾರ್‌ ಮಾತನಾಡಿ, ಮತದಾನ ಮಾಡುವುದು ನಮಗೆ ಸಂವಿಧಾನಾತ್ಮಕವಾಗಿ ಬಂದಿರುವ ಹಕ್ಕು. ಸಾರ್ವಜನಿಕರು ತಮ್ಮ ಹಕ್ಕನ್ನು ಚಲಾಯಿಸುವುದರ ಜೊತೆಗೆ ಅಕ್ಕಪಕ್ಕದ ಮನೆಯವರಿಗೆ ಮತದಾನ ಮಾಡಲು ಪ್ರೇರೇಪಣೆ ಮಾಡಬೇಕು. ತಾಲೂಕಿನಲ್ಲಿ ಹೆಚ್ಚು ವೋಟಿಂಗ್‌ ನಡೆಯಲು ಎಲ್ಲಾರ ಸಹಕಾರ ಅತ್ಯವಶ್ಯಕ ಎಂದರು.

ಈ ವೇಳೆ ತಹಸೀಲ್ದಾರ್‌ ತಿರುಪತಿ ಪಾಟೀಲ್‌, ಬಿಸಿಎಂ ವಿಸ್ತರಣಾಧಿಕಾರಿ ಶಶಿಧರ್‌, ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ಸೇರಿದಂತೆ ತಾಲೂಕು ಕಚೇರಿ, ಪುರಸಭೆ, ಶಿಕ್ಷಣ ಇಲಾಖೆಯ ಶಿಕ್ಷಕರು, ಸಿಆರ್‌ಪಿಗಳು, ಪಿಡಿಓಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮತದಾರರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪಟ್ಟಣದ ಟಿಬಿ ವೃತ್ತದಿಂದ ಹುಳಿಯಾರು ವೃತ್ತದವರೆಗೆ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿತ್ತು.