ಸಾರಾಂಶ
ಲೋಕಸಭಾ ಚುನಾವಣೆಯಲ್ಲಿ ಅರ್ಹ ಪ್ರತಿಯೊಬ್ಬರು ಮತದಾನ ಮಾಡಬೇಕು. ಈ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕು.
ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಅರ್ಹ ಪ್ರತಿಯೊಬ್ಬರು ಮತದಾನ ಮಾಡಬೇಕು. ಈ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಸಂಜೀವರಾಯನಕೋಟೆಯಲ್ಲಿ ಮತದಾನದ ಪ್ರಾಮುಖ್ಯತೆ ತಿಳಿಸಲು ಶಾಲಾ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಿಮ್ಮ ಓಟು, ನಿಮ್ಮ ಹಕ್ಕು, ನಿಮಗೆ ಇಷ್ಟವಾದ ನಾಯಕನಿಗೆ ಮುಕ್ತ, ನ್ಯಾಯ ಸಮ್ಮತವಾಗಿ ಮತದಾನ ಮಾಡಿ. ಯಾವುದೇ ಕಾರಣಕ್ಕೂ ಮತದಾನದಂತಹ ಪವಿತ್ರ ಕಾರ್ಯದಿಂದ ಹಿಂದಕ್ಕೆ ಸರಿಯಬೇಡಿ. ಯುವಕರು ದೇಶದ ಸಮಗ್ರ ಅಭಿವೃದ್ಧಿ ನೆಲೆಯಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದು, ಯುವ ಸಮುದಾಯ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ ಮತದಾನ ಮಾಡುವುದರ ಜೊತೆಗೆ ಬೇರೆಯವರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಗ್ರಾಮದ ಮುಖಂಡ ಹನುಮಂತಪ್ಪ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಊರಿನ ಪ್ರಮುಖರಾದ ಕೆ.ಪಿ. ಸುಂಕಣ್ಣ, ಉಪೇಂದ್ರ, ಸುರೇಶ, ಪಂಪಾಪತಿ, ಪುನೀತ್ ಕುಮಾರ್, ಶಿಕ್ಷಕರಾದ ಬಸವರಾಜ, ಮೋದಿನಸಾಬ್, ಶ್ವೇತಾ, ಶೇಷಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀದೇವಿ, ನಿಂಗಮ್ಮ ಹಾಗೂ ಗ್ರಾಮದ ಯುವಕರು ಉಪಸ್ಥಿತರಿದ್ದರು.