Vote for the success of democracy
- ಯಾದಗಿರಿ ನಗರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ನ್ಯಾಯಾಧೀಶರಾದ ಮರುಳಸಿದ್ಧಾರಾಧ್ಯ ಸಲಹೆ
--ಕನ್ನಡಪ್ರಭ ವಾರ್ತೆ ಯಾದಗಿರಿ
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಹಾಗೂ ಯಶಸ್ವಿಗೊಳಿಸಲು ಅರ್ಹ ಮತದಾರರು ತಪ್ಪದೇ ಮತ ಚಲಾಯಿಸುವಂತೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಮರುಳಸಿದ್ಧಾರಾಧ್ಯ ಅವರು ಹೇಳಿದರು.ಭಾರತೀಯ ಚುನಾವಣಾ ಆಯೋಗ, ಕರ್ನಾಟಕ, ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ಭಾನುವಾರ, ನಗರದ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದೃಢ ಭಾರತ ನಿರ್ಮಾಣಕ್ಕಾಗಿ ಹಾಗೂ ಕಲ್ಯಾಣಕ್ಕಾಗಿ ಯಾವುದೇ ಆಮಿಷಗಳಿಗೆ ಒಳಗಾಗದೆ ಅರ್ಹ ಮತದಾರರು ಮತ ಚಲಾಯಿಸಬೇಕು. ಮತದಾನ ಅತ್ಯಂತ ಶ್ರೇಷ್ಠವಾಗಿದ್ದು ನಿರ್ಭೀತಿಯಿಂದ ಮತ ಚಲಾಯಿಸಿ, ತಮ್ಮ ಕರ್ತವ್ಯ ಹಾಗೂ ಹಕ್ಕನ್ನು ಚಲಾಯಿಸುವಂತೆ ಅವರು ಸಲಹೆ ನೀಡಿದರು. ಈ ರಾಷ್ಟ್ರೀಯ ಮತದಾರರ ದಿನಾಚರಣೆಯ ಘೋಷಣೆ ನನ್ನ ಭಾರತ, ನನ್ನ ಮತವಾಗಿದೆ. ಅದರಂತೆ, ಭಾರತೀಯ ಪ್ರಜಾಪ್ರಭುತ್ವದ ಹೃದಯದಲ್ಲಿ ಭಾರತೀಯ ನಾಗರಿಕ ಘೋಷ ವಾಕ್ಯವಾಗಿದೆ. ಹನಿ ಹನಿ ಕೂಡಿದರೆ ಹಳ್ಳವೆಂಬಂತೆ, ಪ್ರತಿಯೊಂದು ಮತ ಅಮೂಲ್ಯವಾಗಿದೆ. ಈ ಹಿನ್ನೆಲೆಯಲ್ಲಿ ತಪ್ಪದೇ ಮತ ಚಲಾಯಿಸಬೇಕು ಎಂದು ಹೇಳಿದರು.ಮತದಾನ ಐಚ್ಛಿಕವಾಗಿದೆ. ನನ್ನ ದೇಶ, ನನ್ನ ರಾಷ್ಟ್ರ, ನನ್ನ ಮತ ಮುಖ್ಯ ಎಂದು ಭಾವಿಸಿ ಮತ ಚಲಾಯಿಸಬೇಕು. ದೇಶದಲ್ಲಿ ಈವರೆಗೆ ಹಲವು ಲೋಕಸಭಾ ಚುನಾವಣೆಗಳು ಹಾಗೂ ವಿಧಾನಸಭಾ ಚುನಾವಣೆಗಳು ನಡೆದಿವೆ. ಭಾರತದ ಯಾವುದೇ ಮೂಲೆಯಲ್ಲಿ ಅತ್ಯುತ್ತಮ ಮತದಾನ ಆದ ಕಡೆಗಳಲ್ಲಿ ಆಡಳಿತ ಅತ್ಯಂತ ಯಶಸ್ವಿಯಾಗಿದೆ. ಮತದಾನ ಸಂವಿಧಾನಿಕ ಹಾಗೂ ಮೂಲಭೂತ ಹಕ್ಕು ಆಗಿದ್ದು, ಭಾರತದ ಐಕ್ಯತೆ, ಸಮಾನತೆಯ ಪ್ರತೀಕವಾಗಿದೆ. ರಾಷ್ಟ್ರಪತಿಗಳು ಹಾಗೂ ಸಾಮಾನ್ಯ ನಾಗರಿಕನಿಗೂ ಸಮಾನ ಮತದಾನದ ಹಕ್ಕು ಇರುವುದರಿಂದ, ತಪ್ಪದೇ ಮತ ಚಲಾಯಿಸುವಂತೆ ಅವರು ಕರೆ ನೀಡಿದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರ ಅಭಿವೃದ್ಧಿಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಅಪಾರವಾಗಿದೆ. ಐದು ವರ್ಷಗಳವರೆಗೆ ಇರುವ ಚುನಾಯಿತ ಪ್ರತಿನಿಧಿಗಳು ಕಾನೂನು ರೂಪಿಸುವ, ರಾಜ್ಯ ಹಾಗೂ ರಾಷ್ಟ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವದರಿಂದ ನಾಗರಿಕರು ಚುನಾವಣಾ ಪ್ರಕ್ರಿಯೆಗಳಲ್ಲಿ ಉತ್ಸಾಹದಿಂದ ಸಕ್ರಿಯವಾಗಿ ಭಾಗವಹಿಸಿ, ತಪ್ಪದೇ ಮತ ಚಲಾಯಿಸಬೇಕು ಎಂದು ಹೇಳಿದರು.ಚುನಾವಣಾ ಆಯೋಗವು ಇತ್ತೀಚೆಗೆ ಭಾರತೀಯ ನಾಗರಿಕರ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಿದೆ. ಮತದಾರರ ಪಟ್ಟಿ ಪರಿಷ್ಕರಣೆ ಅನ್ವಯ ನಲವತ್ತು ವರ್ಷದೊಳಗಿನ ಹಾಗೂ ನಲವತ್ತು ವರ್ಷ ಮೇಲ್ಪಟ್ಟವರ ಅಧಿಕೃತ ದಾಖಲಾತಿಗಳ ಸಲ್ಲಿಕೆ ಆಧಾರದ ಮೇಲೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಿದೆ. ನಿಗಧಿತ ಅರ್ಜಿ ನಮೂನೆಗಳ ಮೂಲಕ ಮತದಾರರ ಪಟ್ಟಿಯಲ್ಲಿ ಅರ್ಹರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ನಿಗದಿತ ಆ್ಯಪ್ ಹಾಗೂ ಆನ್ಲೈನ್ ಮೂಲಕ ನೋಂದಣಿಗೆ ಅವಕಾಶವಿರುವದರಿಂದ ಸದುಪಯೋಗಪಡಿಸಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆಗಳಲ್ಲಿ ತಪ್ಪದೇ ಭಾಗವಹಿಸುವಂತೆ ಅವರು ಸಲಹೆ ನೀಡಿದರು.
ಅಪರ ಜಿಲ್ಲಾಧಿಕಾರಿ ರಮೇಶ ಕೋಲಾರ್ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ, ಜಿಪಂ ಸಿಇಒ ಲವೀಶ್ ಒರಡಿಯಾ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಕುಮುಲಯ್ಯ, ಡಿವೈಎಸ್ಪಿ ಸುರೇಶ್, ಉಪಸ್ಥಿತರಿದ್ದರು.===ಬಾಕ್ಸ್===
* ಪ್ರಮಾಣ ಪತ್ರ, ಗುರುತಿನ ಚೀಟಿ ವಿತರಣೆಅತ್ಯುತ್ತಮ ಬೂತ್ ಮಟ್ಟದ ಬಿಎಲ್ಒ, ಬಿಎಲ್ಒ ಮೇಲ್ವಿಚಾರಕರಿಗೆ, ಅತ್ಯುತ್ತಮ ಚುನಾವಣಾ ಶಿರಸ್ತೇದಾರರು, ಡೇಟಾ ಎಂಟ್ರಿ ಆಪರೇಟರ್ಗಳು, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು.
"ನಾ ಭಾರತ " ವಿಡಿಯೋ ಪ್ರದರ್ಶಿಸಲಾಯಿತು. ಯುವಸಬಲೀಕರಣ ಹಾಗೂ ಕ್ರೀಡಾಧಿಕಾರಿ ರಾಜು ಭಾವಿಹಳ್ಳಿ ಸ್ವಾಗತಿಸಿ, ಶಿಕ್ಷಕ ಗುರುಲಿಂಗಯ್ಯ ಹಿರೇಮಠ ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.-
25ವೈಡಿಆರ್1 : ಭಾರತೀಯ ಚುನಾವಣಾ ಆಯೋಗ, ಕರ್ನಾಟಕ, ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದಲ್ಲಿ ಭಾನುವಾರ, ನಗರದ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಮರುಳಸಿದ್ಧಾರಾಧ್ಯ ಅವರು ಉದ್ಘಾಟಿಸಿದರು.-
25ವೈಡಿಆರ್2 : ಭಾನುವಾರ, ನಗರದ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅತ್ಯುತ್ತಮ ಬೂತ್ ಮಟ್ಟದ ಬಿಎಲ್ಓ, ಬಿಎಲ್ಓ ಮೇಲ್ವಿಚಾರಕರಿಗೆ, ಅತ್ಯುತ್ತಮ ಚುನಾವಣಾ ಶಿರಸ್ತೇದಾರರು, ಡೇಟಾ ಎಂಟ್ರಿ ಆಪರೇಟರ್ಗಳು, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.-
25ವೈಡಿಆರ್3 : ಭಾನುವಾರ, ನಗರದ ಪದವಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಮತದಾನದ ಗುರುತಿನ ಚೀಟಿ ವಿತರಿಸಲಾಯಿತು.