ಕಾರ್ಕಳ, ಹೆಬ್ರಿಯಲ್ಲಿ ಬಿರುಸಿನ ಮತದಾನ

| Published : Apr 27 2024, 01:19 AM IST

ಸಾರಾಂಶ

ಕೂಲಿ ಕೆಲಸಕ್ಕೆ ಹೋಗುವವರು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ನಕ್ಸಲ್ ಪೀಡಿತ ಪ್ರದೇಶಗಳಾದ ಹೆಬ್ರಿ‌ ತಾಲೂಕಿನ ಕಬ್ಬಿನಾಲೆ, ನಾಡ್ಪಾಲು, ಮುದ್ರಾಡಿ, ಅಂಡಾರು, ಕಾರ್ಕಳ ತಾಲೂಕಿನ ಮಾಳ, ಕೆರುವಾಶೆ, ಈದುಗಳಲ್ಲಿ ಮತದಾರರು ಹುರುಪಿನಿಂದ ಮತಚಲಾಯಿಸಿದರು‌.

ಕನ್ನಡಪ್ರಭ ವಾರ್ತೆ ಕಾರ್ಕಳ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾರ್ಕಳ, ಹೆಬ್ರಿ ತಾಲೂಕುಗಳ ವ್ಯಾಪ್ತಿಯಲ್ಲಿ ಚುರುಕಿನ ಮತದಾನ ನಡೆಯಿತು. ಕೂಲಿ ಕೆಲಸಕ್ಕೆ ಹೋಗುವವರು ಬೆಳಗ್ಗೆ 7 ಗಂಟೆಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ನಕ್ಸಲ್ ಪೀಡಿತ ಪ್ರದೇಶಗಳಾದ ಹೆಬ್ರಿ‌ ತಾಲೂಕಿನ ಕಬ್ಬಿನಾಲೆ, ನಾಡ್ಪಾಲು, ಮುದ್ರಾಡಿ, ಅಂಡಾರು, ಕಾರ್ಕಳ ತಾಲೂಕಿನ ಮಾಳ, ಕೆರುವಾಶೆ, ಈದುಗಳಲ್ಲಿ ಮತದಾರರು ಹುರುಪಿನಿಂದ ಮತಚಲಾಯಿಸಿದರು‌. ಮತಗಟ್ಟೆ ಭದ್ರತೆಗಾಗಿ ಬೂತ್‌ಗಳಲ್ಲಿ ಸಿಆರ್‌ಪಿಎಫ್, ಸಿಎಪಿಎಫ್, ಹೋಮ್ ಗಾರ್ಡ್, ಕೆ.ಎಸ್.ಆರ್.ಪಿ., ಸಿವಿಲ್, ಗುಜರಾತಿ ಪೊಲೀಸರು, ಮತ್ತಿತರ ವಿಭಾಗಗಳಲ್ಲಿ ಒಟ್ಟು ೫೫೦ ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಸೂಕ್ಷ್ಮ ಮತಗಟ್ಟೆಯಲ್ಲಿ ತಲಾ ನಾಲ್ಕರಿಂದ ಐದು ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೦೯ ಬೂತ್‌ಗಳಲ್ಲಿ ಒಟ್ಟು ೧,೯೧,೪೫೦ ಮಂದಿ ಮತದಾರರು ಮತಚಲಾಯಿಸಿದರು.

ಸರತಿ ಸಾಲಿನಲ್ಲಿ ನಿಂತು ಶಾಸಕ ವಿ.ಸುನಿಲ್ ಕುಮಾರ್, ನಿಟ್ಟೆ ಗ್ರಾಮದ ಅತ್ತೂರು ಕಲಂಬಾಡಿಪದವು ಪ್ರಾಥಮಿಕ ಶಾಲೆಯಲ್ಲಿ, ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ಮುನಿಯಾಲು ಪ್ರಾಥಮಿಕ ಶಾಲೆಯಲ್ಲಿ ಮತಚಲಾಯಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ೨೦೯ ಮತಗಟ್ಟೆಯಿದ್ದು, ಈ ಪೈಕಿ ೫ ಸಖಿ ಮತಗಟ್ಟೆ, ೧ ಪಿಡಬ್ಲ್ಯುಡಿ ಮತಗಟ್ಟೆ, ೧ ಯುವ ಮತಗಟ್ಟೆ, ೧ ಸಾಂಪ್ರದಾಯಿಕ ಮತಗಟ್ಟೆ ಹಾಗೂ ೧ ವಿಷಯವಾರು ಮತಗಟ್ಟೆ ತೆರೆಯಲಾಗಿದೆ.

* ನೀರಿನ ಅಭಾವ:

ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ 35 ಡಿಗ್ರಿ ಉಷ್ಣತೆ ದಾಖಲಾಗಿದ್ದು, ತಾಲೂಕಿನ ಕೆಲವು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣಾ ಸಿಬ್ಬಂದಿಗೆ ನೀರಿನ ಅಭಾವ ತಲೆದೋರಿತ್ತು. ಕಾರ್ಕಳ, ಹೆಬ್ರಿ ತಾಲೂಕಿನ ಹದಿನೈದು ಮತಗಟ್ಟೆಗಳಲ್ಲಿ ನೀರಿನ ಸಮಸ್ಯೆ ಇತ್ತು. ಆದರೆ ಸ್ಥಳೀಯ ಪಂಚಾಯಿತಿ ಸಿಬ್ಬಂದಿ ಸ್ಪಂದಿಸಿ ನೀರಿನ‌ ಪೂರೈಕೆ ಕಲ್ಪಿಸಿಕೊಟ್ಟರು.

ಸೋಮೇಶ್ವರ ಪೇಟೆ ಶಾಲೆಯ ಮತಗಟ್ಟೆ ಸಂಖ್ಯೆ 5ರಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಒಂದು ಗಂಟೆ ತಡವಾಗಿ ಮತದಾನ ಆರಂಭವಾಯಿತು. ಕಾರ್ಕಳ ಅತ್ತೂರು ಮತಗಟ್ಟೆಯಲ್ಲಿ ಮತಯಯಂತ್ರದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತಯಂತ್ರ ಬದಲಾವಣೆ ಮಾಡಲಾಗಿದೆ.

* ಬಿಸಿಲಿಗೆ ಸವಾಲೆಸೆದ ಮತದಾರರು

ಕಾರ್ಕಳ ವಿಧಾನ ಸಭಾ ಕ್ಷೇತ್ರಲ್ಲಿ ಎಂಟು ಗಂಟೆಯ ವೇಳೆಗೆ ಬಿಸಿಲಿನ ಪ್ರಖರ ಏರಿಗೆ ತೀವ್ರವಾಗಿತ್ತು. ಬಿರು ಬಿಸಿಲನ್ನು ಲೆಕ್ಕಿಸದೆ ಮತದಾರರು ಮತದಾನ ಮಾಡಲು ಆಗಮಿಸಿದರು.

* ಹುರುಪಿನಿಂದ ಭಾಗವಹಿಸಿದ ಯುವ ಮತದಾರರು: ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಯುವ ಮತದಾರರು ಹುರುಪಿನಿಂದ ಮತಚಲಾಯಿಸಿದರು. ಈ ಬಾರಿ ಅಂಚೆ ಮತದಾನವಿದ್ದ ಕಾರಣ ಹೆಚ್ಚಿನ ವೃದ್ಧರು ಹಾಗೂ ಅಂಕವಿಕಲರು ಮತಗಟ್ಟೆಗೆ ಆಗಮಿಸಲಿರಲಿಲ್ಲ.

ಕೋಟ್

ನಾನು ಮೊದಲ ಬಾರಿಗೆ ಮತದಾನ ಮಾಡಿದೆ. ತುಂಬಾ ಖುಷಿಯಾಯಿತು. ನನ್ನ ಲೋಕಸಭಾ ಕ್ಷೇತ್ರದ ನಾಯಕನ ಆಯ್ಕೆಗೆ ಸಂವಿಧಾನ ನೀಡಿದ ಕೊಡುಗೆಯಾಗಿದೆ.

। ಅಶ್ವಿನಿ ನಂದಳಿಕೆ, ಯುವ ಮತದಾರೆ