ಸಾರಾಂಶ
ಶಿವಮೊಗ್ಗ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರ ಹತ್ತು ವರ್ಷಗಳ ಆಡಳಿತದ ವಿರುದ್ಧ ಮತದಾನವಾಗಿದೆ. 400 ಸೀಟ್ ಪಡೆಯುತ್ತೇವೆ ಎಂಬ ಅವರ ಕನಸು ಈಡೇರಿಲ್ಲ ಎಂದು ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ನಂತರ ನಡೆದ ಪ್ರತಿ ಚುನಾವಣೆಯಲ್ಲಿಯೂ ಒಂದೊಂದು ವಿಷಯಗಳ ಮೇಲೆ ಚುನಾವಣೆ ನಡೆದಿವೆ. ಆಯಾ ಕಾಲಘಟ್ಟದಲ್ಲಿನ ವಿದ್ಯಮಾನಗಳು, ಭ್ರಷ್ಟಾಚಾರದ ಆರೋಪ, ಕೋಮು ಭಾವನೆ, ಧರ್ಮದ್ವೇಷದ ಚಟುವಟಿಕೆಗಳು ಚುನಾವಣೆ ಮೇಲೆ ಪರಿಣಾಮ ಬೀರಿವೆ. ಆದರೆ, ಈ ಬಾರಿ ಬಿಜೆಪಿಯವರ ಲೆಕ್ಕಚಾರ ಎಲ್ಲವೂ ತಲೆಕೆಳಗಾಗಿವೆ. ರಾಜ್ಯದಲ್ಲಿಯೂ 28 ಕ್ಷೇತ್ರಗಳನ್ನೂ ಬಿಜೆಪಿ ಗೆಲ್ಲಲಿದೆ ಎಂದು ಹೇಳಿಕೊಂಡಿತ್ತು. ರಾಜ್ಯದ ಮತದಾರ ಅದಕ್ಕೆ ಅವಕಾಶ ನೀಡದೆ ಪ್ರಜಾಪ್ರಭುತ್ವದಲ್ಲಿ ತಾನೇ ಪ್ರಭು ಎಂಬುದನ್ನು ಸಾಬೀತು ಮಾಡಿದ್ದಾನೆ ಎಂದರು.
ಲೋಕಸಭೆ ಚುನಾವಣೆಯ ಸೋಲಿನ ಪರಾಮರ್ಶೆ ನಡೆಯುತಿದ್ದು, ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಪಕ್ಷದ ಸೋಲಿಗೆ ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಪಡೆಯಲಾದೆ. ಕೆಪಿಸಿಸಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಶಿವಮೊಗ್ಗದಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನನಾಡಿದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜವಾಬ್ದಾರಿ ಯನ್ನು ನಮ್ಮ ಸಮಿತಿಗೆ ನೀಡಲಾಗಿತ್ತು. ಈಗಾಗಲೇ ಎಲ್ಲಾ ಕಡೆ ಪ್ರವಾಸ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.
ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಮೂರು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ. ಹಸಿವಿನ ಸೂಚ್ಯಂಕ ಏರಿದೆ. ದೇಶದ ಸಾಲ ಹೆಚ್ಚಾಗಿದೆ. ಈ ಎಲ್ಲಾ ಅಂಶಗಳ ಹೊರತಾಗಿಯೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದೆ. ಮೂರನೇ ಬಾರಿಗೆ ಅಧಿಕಾರ ಹಿಡಿದ ಮೋದಿಯವರು ಒಬ್ಬ ಉತ್ತಮ ಆಡಳಿತಗಾರರಂತೆ ನಡೆದುಕೊಂಡಿಲ್ಲ. ಯೋಜನಾ ಆಯೋಗದ ಸಭೆಯಲ್ಲಿ ತಮ್ಮ ಬೆಂಬಲಿಗ ರಾಜ್ಯ ಗಳ ಮುಖ್ಯಮಂತ್ರಿಗಳಿಗೆ ಹೆಚ್ಚು ಅವಕಾಶ ಕೊಟ್ಟು ತಾರತಮ್ಯ ಮಾಡಿದ್ದಾರೆ. ಕೇಂದ್ರ ಬಜೆಟ್‌ನಲ್ಲಿಯೂ ತಾರತಮ್ಯ ಮಾಡಲಾಗಿದೆ ಎಂದು ಹೇಳಿದರು.
ನೆರೆಪರಿಹಾರ ತರಲಿ:
ದೇಶ ಹಾಗೂ ರಾಜ್ಯದಲ್ಲಿ ಅತೀವೃಷ್ಠಿಯಿಂದ ಅಪಾರ ಹಾನಿಯಾಗಿದೆ. ಕೇಂದ್ರ ಸರ್ಕಾರ ಯಾವುದೇ ಪರಿಹಾರ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ. ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರಕಾರದಿಂದ ರಾಜ್ಯಕ್ಕೆ 10 ಸಾವಿರ ಕೋಟಿ ನೆರೆ ಪರಿಹಾರ ನಿಧಿ ತರಲಿ ಎಂದು ಉಗ್ರಪ್ಪ ಆಗ್ರಹಿಸಿದರು.
ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮುಡಾ ಅಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಕ್ಕಿಸುವ ಹುನ್ನಾರ ಬಿಜೆಪಿ ಮಾಡುತ್ತಿದೆ. ಆದರೆ, ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರದ್ದು ಯಾವ ತಪ್ಪೂ ಇಲ್ಲ. 26 ವರ್ಷದ ಹಿಂದೆ ಆದ ನೋಟಿಫಿಕೇಷನ್, ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಆಗಿರುವ ನಿವೇಶನ ಹಂಚಿಕೆ ಪ್ರಕರಣವನ್ನು ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವೇ ಇದ್ದಾಗ ಕ್ರಮ ಕೈಗೊಳ್ಳಲು ಅವಕಾಶ ಇತ್ತು. ಆದರೆ, ದೇಶದಲ್ಲಿ ಬಿಜೆಪಿಗೆ ಆದ ಹಿನ್ನಡೆ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ವಿರುದ್ಧದ ಜನಾಭಿಪ್ರಾಯದಿಂದಾಗಿ ಹತಾಶರಾದ ಮೈತ್ರಿ ಕೂಟ ಈ ಯಾತ್ರೆ ಮಾಡುತ್ತಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಶಕ್ತಿಗೆ ಬೆಚ್ಚಿಬಿದ್ದ ಬಿಜೆಪಿ ಕುತಂತ್ರ ಮಾಡುತ್ತಿದೆ ಎಂದು ಕಿಡಿಕಾರಿದರು.
ಪತ್ರಿಕಾಗೋಷ್ಠಿಯಲ್ಲಿ
ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಭೋವಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್, ಎನ್.ರಮೇಶ್, ಸೂಡಾ ಅಧ್ಯಕ್ಷ ಎಚ್. ಎಸ್.ಸುಂದರೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಶಿಕಾರಿಪುರ ನಾಗರಾಜ ಗೌಡ, ಜಿ.ಡಿ.ಮಂಜುನಾಥ್ ಮತ್ತಿತರರು ಇದ್ದರು.
ಬಿಎಸ್‌ವೈ ಕುಟುಂಬಕ್ಕೆ ಆರ್‌ಟಿಜಿಎಸ್ಮೂ ಲಕ ಹಣ ವರ್ಗಾವಣೆ: ಆರೋಪ
ರಾಜ್ಯಪಾಲರು ಮುಡಾ ಪ್ರಕರಣದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ರಾಜಭವನ ಬಿಜೆಪಿ ಕಚೇರಿ ಆಗದಂತೆ ನೋಡಿಕೊಂಡು ಈ ದೇಶದ ಸಂವಿಧಾನ ಮತ್ತು ಕಾನೂನನ್ನು ಗೌರವಿಸಬೇಕು. ಹಿಂದೆ ಯಡಿಯೂರಪ್ಪ ಅವರಿಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದು, ಲಂಚ ಪ್ರಕರಣಲ್ಲಾಗಿತ್ತು. ಖಾಸಗಿ ಕಂಪೆನಿ ರಾಮಲಿಂಗಂನಿಂದ ಯಡಿಯೂರಪ್ಪರ ಕುಟುಂಬ ವರ್ಗಕ್ಕೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾವಣೆಯಾಗಿತ್ತು. ಇದೇ ಟಿ.ಜೆ.ಅಬ್ರಾಹಂ ಹಾಕಿರುವ ಕೇಸು ಇನ್ನೂ ನ್ಯಾಯಾಲಯದಲ್ಲಿದೆ. ರಾಜ್ಯಪಾಲರು ಈ ಬಗ್ಗೆ ಗಮನ ಹರಿಸಬೇಕು. ಯಾವುದೇ ಕೇಸು ದಾಖಲಾಗದ ಪ್ರಕರಣದಲ್ಲಿ ಸಿದ್ದರಾಮಯ್ಯರಿಗೆ ನೋಟಿಸ್ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ ಎಂದು ಉಗ್ರಪ್ಪ ಆರೋಪಿಸಿದರು.