ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಸಂವಿಧಾನ ರಕ್ಷಣೆಗಾಗಿ ನಮ್ಮ ಮತ ಅಸ್ತ್ರವಾಗಬೇಕಿದೆ ಎಂದು ಹಾಡುಗಾರ ಅಂಬಣ್ಣ ಅರೋಲಿಕರ್ ಅಭಿಪ್ರಾಯಪಟ್ಟರು. ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸ್ಲಂ ಜನರ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
18ನೇ ಲೋಕಸಭೆ ಚುನಾವಣೆಗೆ ಕರ್ನಾಟಕದ 28 ಪಾರ್ಲಿಮೆಂಟ್ ಕ್ಷೇತ್ರಕ್ಕೆ ಏಪ್ರಿಲ್ 26 ಮತ್ತು ಮೇ 7ರಂದು ನಡೆಯುವ ಎರಡು ಹಂತದ ಲೋಕಸಭಾ ಚುನಾವಣೆಗೆ ಪೂರಕವಾಗಿ ಸ್ಲಂ ಜನಾಂದೋಲನ ಕರ್ನಾಟಕ 16 ಕ್ಷೇತ್ರಗಳಲ್ಲಿ ಸ್ಲಂ ಜನರಲ್ಲಿ ರಾಜಕೀಯ ಜಾಗೃತಿ ಜಾಥ ಕೈಗೊಳ್ಳಲಾಗುತ್ತಿದೆ ಎಂದರು.ಕಳೆದ 10 ವರ್ಷಗಳಲ್ಲಿ ಮೋದಿಯ ಆರ್‌ಎಸ್‌ಎಸ್ ಆಡಳಿತ ನಿರ್ಜೀವಗೊಳಿಸಿದೆ, ಹಾಗಾಗಿ ಪರಿಶಿಷ್ಟ ಜಾತಿಯ 101 ಸಮುದಾಯಗಳು, ಸ್ಲಂ ನಿವಾಸಿಗಳು ಮತ್ತು ಅಲೆಮಾರಿ ಸಮುದಾಯಗಳು 10 ವರ್ಷಗಳ ಮೋದಿ ಆಡಳಿತ ಸಾಕು ಮಾಡಲು ಮುಂದಿನ ಅಪಾಯತಪ್ಪಿಸಲು ಈ ಚುನಾವಣೆಯಲ್ಲಿ ಬಿಜೆಪಿ ಹೊರತುಪಡಿಸಿ ಬೇಷರತ್ತಾಗಿ ಕಾಂಗ್ರೇಸ್‌ನ್ನು ಬೆಂಬಲಿಸಬೇಕಾಗಿದೆ ಎಂದರು.
ಸಂವಿಧಾನ ಉಳಿದರೆ ಮಾತ್ರ ಮೂಲಭೂತ ಹಕ್ಕುಗಳು ಉಳಿಯುತ್ತವೆ ಆಗ ಮಾತ್ರ ಸ್ಲಂ ಜನರ ಪ್ರಣಾಳಿಕೆಯಲ್ಲಿರುವ ವಸತಿ ಹಕ್ಕು ಕಾಯ್ದೆ, ನಗರ ಲ್ಯಾಂಡ್ ಬ್ಯಾಂಕ್ ನೀತಿ, ರೈಟ್ ಟು ಹೆಲ್ತ್, ರಾಷ್ಟ್ರೀಯ ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲು ಸಾಧ್ಯ. ಹಾಗಾಗಿ ಎಲ್ಲಾ ವಂಚಿತ ಸಮುದಾಯಗಳು ಆಶ್ರಯ,ಆರೋಗ್ಯ, ಆಹಾರ, ಶಿಕ್ಷಣ ಮತ್ತು ಉದ್ಯೋಗ ಖಾತ್ರಿಗಾಗಿ ಮತ ಚಲಾಯಿಸುವ ಮೂಲಕ ಸನಾತನ ವಾದಿಗಳಿಗೆ ಉತ್ತರ ನೀಡಬೇಕು ಎಂದರು.ಹಿರಿಯ ಚಿಂತಕ ಕೆ. ದೊರೈರಾಜು ಮಾತನಾಡಿ ಸಂವಿಧಾನದ ಹಕ್ಕುಗಳು ಖಾಸಗೀಕರಣವಾಗಿ ಕರ್ತವ್ಯಗಳು ರಾಷ್ಟ್ರೀಕರಣವಾಗುತ್ತಿವೆ ಎಂದರು. ಹೋರಾಟಗಾರರು ತುರ್ತಾಗಿ ಮಾಡಬೇಕಿರುವ ಕೆಲಸ ಈ ಚುನಾವಣೆಯಲ್ಲಿ ನಮ್ಮ ಉಳಿವಿಗಾಗಿ ನಮ್ಮ ಸುತ್ತುಮುತ್ತಲ ಜನರನ್ನು ಜಾಗೃತಿಗೊಳಿಸಿ ಬಿಜೆಪಿಗೆ ವೋಟು ಹಾಕುವುದನ್ನು ತಪ್ಪಿಸಬೇಕಿದೆ. ಬಿಜೆಪಿ ಸೋತರೆ ಮಾತ್ರ ಸಂವಿಧಾನ ರಕ್ಷಣೆಯಾಗುತ್ತದೆ. ಸಾಮಾನ್ಯ ಜನರು ಉಳಿಯುತ್ತೇವೆ ಎಂದರು.ಇತ್ತೀಚೆಗೆ ಸ್ಲಂ ಗಳಿಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ನುಸುಳಿ ಧ್ವೇಷ ಬಿತ್ತುತ್ತಿವೆ ಸಣ್ಣಪುಟ್ಟ ಮುಖಂಡರನ್ನು ಹಣಬಲದಿಂದ ವಶಪಡಿಸಿಕೊಂಡು ನಮ್ಮಕಣ್ಣನ್ನು ನಾವೆ ಚುಚ್ಚಿಕೊಳ್ಳುವಂತೆ ಮಾಡುತ್ತಿದ್ದಾರೆ ಹಾಗಾಗಿ ನಾವು ತಾಳ್ಮೆ ಕಳೆದುಕೊಳ್ಳದೇ ನಮ್ಮ ಕಾಲಕ್ಕಾಗಿ ಕಾಯಬೇಕು ಎಂದರು.ಸ್ಲಂ ಜನಾಂದೋಲನ ಕರ್ನಾಟಕ ಪ್ರತೀ ಚುನಾವಣೆಯಲ್ಲಿ ಸ್ಲಂಜನರನ್ನು ಜಾಗೃತಗೊಳಿಸುವ ಆಂದೋಲನಗಳನ್ನು ರೂಪಿಸುತ್ತಿದ್ದು ಸಂಸತ್ ಸದಸ್ಯರ ನಿಧಿಯಲ್ಲಿ ಸ್ಲಂಗಳಿಗೆ ಹಣ ಮೀಸಲಿಡುವ ದೇಶಾದ್ಯಂತ ಎಸ್‌ಸಿ, ಎಸ್‌ಟಿ ಜನಸಂಖ್ಯೆ ಗೆ ಅನುಗುಣವಾಗಿ ಬಜೆಟ್‌ನಲ್ಲಿ ಹಣ ಮೀಸಲಿಡುವ ಕಾಯಿದೆ ಜಾರಿಗೆ ಮತ್ತು ಜಾತಿ ಜನಗಣತಿ ಸಮಾನ ಶಿಕ್ಷಣ ಒತ್ತಾಯಿಸುತ್ತಿರುವುದು ಸಂಸತ್‌ನ ನೀತಿಗಳ ರೂಪಿಸುವ ಉದ್ದೇಶದ ಭಾಗವಾಗಿದ್ದು ಈ ಆಯಾಮದಲ್ಲಿ ನಮ್ಮ ಪ್ರಶ್ನೆಗಳು ಇರಬೇಕಾಗುತ್ತದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕದ ಎ.ನರಸಿಂಹಮೂರ್ತಿ 2014 ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಕೂಟದ ಮೋದಿ ಸರ್ಕಾರದಲ್ಲಿ ಸ್ಲಂ ನಿವಾಸಿಗಳಿಗೆ ಸಿಕ್ಕಿದ್ದು ಮಾತ್ರ ಶೂನ್ಯ, ವಸತಿ ಸಬ್ಸಿಡಿಯನ್ನು 1.5ಲಕ್ಷಕ್ಕೆ ಇಳಿಸಿ ಇದರಲ್ಲಿ 1.38 ಲಕ್ಷ ಜಿಎಸ್‌ಟಿ ಹಿಂಪಡೆದು 12 ಸಾವಿರ ರು.ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಪಿಎಂಎವೈ ಸರ್ವರಿಗೂ ಸೂರು ಬಡಜನ ವಿರೋಧಿಗೆ ಸಾಕ್ಷಿಯಾಗಿದೆ ಎಂದರು. ಚರಕ ಆಸ್ಪತ್ರೆಯ ಡಾ.ಬಸವರಾಜು, ಹಿರಿಯ ದಸಂಸ ಮುಖಂಡ ನರಸೀಯಪ್ಪ, ರಾಜ್ಯ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟ ಸಮಿತಿಯ ಮುಖಂಡ ಬಸವರಾಜ್ ಕೌತಾಳ್, ಡಾ.ಅರುಂಧತ್ತಿ, ತೃತೀಯ ಲಿಂಗಿಗಳ ಮುಖಂಡ ದೀಪಿಕಾ, ಯುವ ಮುಖಂಡ ಕೊಟ್ಟಶಂಕರ್, ಪಿ,ಎನ್‌ರಾಮಯ್ಯ, ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನುಅರುಣ್, ನಿರೂಪಣೆಯನ್ನು ಟಿ.ಸಿ ರಾಮಯ್ಯ, ವಂದನಾರ್ಪಣೆಯನ್ನು ಕೃಷ್ಣಮೂರ್ತಿ ನೆರವೇರಿಸಿದರು.