ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು ಪ್ರಜೆಗಳು ಸೇವಾ ಮನೋಭಾವದ ರಾಜಕಾರಣಿಗಳನ್ನು ಬಯಸುತ್ತಿಲ್ಲ. ದೀರ್ಘಾವಧಿಯ ಲಾಭವನ್ನು ಮರೆತು ಚುನಾವಣೆಯ ಸಮಯದಲ್ಲಾಗುವ ಅಲ್ಪಾವಧಿಯ ಲಾಭಕ್ಕಾಗಿ ಮತಗಳನ್ನು ಮಾರಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಜೆ. ಸಿ. ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ರಾಜ್ಯರಾಜ್ಯಶಾಸ್ತ್ರ ಶಿಕ್ಷಕರ ಸಂಘ, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿ, ಸ್ನಾತಕೋತ್ತರ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗ ಹಾಗೂ ಸ್ನಾತಕೋತ್ತರ ಸಾರ್ವಜನಿಕ ಆಡಳಿತ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಯೋಗದಲ್ಲಿ ನಡೆಯುತ್ತಿರುವ 20ನೇ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಮ್ಮೇಳನದ ಎರಡನೇ ದಿನ ವರ್ತಮಾನದ ರಾಜಕೀಯವು ಪ್ರಜಾಪ್ರಭುತ್ವಕ್ಕೆ ಅನುಕೂಲಕರವೇ? ವಿಷಯ ಕುರಿತು ವಿಶೇಷ ಗೋಷ್ಠಿಯಲ್ಲಿ ಮಾತನಾಡಿದರು.ಮಾಜಿ ಸಂಸದ ಆಯನೂರು ಮಂಜುನಾಥ ಮಾತನಾಡಿ, ವಿದ್ಯಾವಂತ ನೌಕರರು, ಪ್ರಜ್ಞಾವಂತ ಸಮಾಜ ಚುನಾವಣೆಯಲ್ಲಿ ಮತದಾನ ಮಾಡಲು ಪ್ಯಾಕೇಜ ಬಯಸುತ್ತಿರುವುದು ದುರದೃಷ್ಟಕರ. ವಿದ್ಯಾವಂತರ ಉನ್ನತ ಮಟ್ಟದ ಭ್ರಷ್ಟಾಚಾರವೆಂದು ಕರೆಯಬಹುದು. ವಿದ್ಯಾವಂತ ಸಮೂಹ ಪ್ರಜಾಪ್ರಭುತ್ವದ ಸೌಂದರ್ಯವನ್ನು ಕುರೂಪಗೊಳಿಸಿದೆ. ಹಣವೇ ಅಂತಿಮವಾಗಿರುವ ಸಮಯದಲ್ಲಿ ಅವಕಾಶ ಸಿಕ್ಕರೆ ಎಲ್ಲರೂ ಭ್ರಷ್ಟಾಚಾರಿಗಳಾಗೋಣವೆಂಬ ದುರಾಲೋಚನೆ ಮನೆಮಾಡಿದೆ ಎಂದರು.ಶಾಸಕ ಹಾಗೂ ಸಂಸದನಾಗಲು 25 ರಿಂದ 100 ಕೋಟಿ ಹಣ ಖರ್ಚು ಮಾಡಬೇಕಾದ ದುಸ್ಥಿತಿ ಉಂಟಾಗಿದೆ. ಜಾತಿ, ಕುಟುಂಬ ರಾಜಕಾರಣ, ಹಣ, ತೋಳ್ಬಲದಿಂದ ಭ್ರಷ್ಟಾಚಾರದ ಬೇರು ನಾಶವಾಗುತ್ತಿದೆ. ಮತದಾನ ಮಾಡದವರೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹಿಗಳು ಎಂದು ಹೇಳಿದರು.
ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಮಾತನಾಡಿ, ಇವತ್ತಿನ ರಾಜಕೀಯ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಭ್ರಷ್ಟವನ್ನಾಗಿಸಿದೆ. ಆರ್ಥಿಕ ಅಸಮಾನತೆಯಲ್ಲಿ ಪ್ರಜಾಪ್ರಭುತ್ವದ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯವಿಲ್ಲ. ಸಮೀಕ್ಷೆ ಪ್ರಕಾರ ಕ್ರಿಮಿನಲ್ ಆರೋಪಗಳಿರುವವರೇ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುತ್ತಿದ್ದಾರೆ. ಪ್ರಸ್ತುತ ಇರುವ ಸಂಸದರಲ್ಲಿ 223 ಮಂದಿಯ ಘೋಷಿತ ಆದಾಯ ವರ್ಷಕ್ಕೆ 50 ಕೋಟಿ. ಪ್ರಜಾಪ್ರಭುತ್ವಕ್ಕೆದೊಡ್ಡ ಹೊಡೆತವೆಂದರೆ ಕೆಲ ನ್ಯಾಯಮೂರ್ತಿಗಳೂ ಭ್ರಷ್ಟರಾಗಿರುವುದು. ವ್ಯವಸ್ಥೆಯನ್ನು ಕಿತ್ತು ತಿನ್ನುವ ಹುಳುಗಳಿರುವಾಗ ನ್ಯಾಯಕ್ಕಾಗಿ, ಅಭಿವೃದ್ಧಿಗಾಗಿ ಜನಸಾಮಾನ್ಯರು ಯಾರ ಬಳಿ ಹೋಗಬೇಕು ಎನ್ನುವುದೇ ಪ್ರಶ್ನಾರ್ಥಕ ಎಂದು ಹೇಳಿದರು.ಮೈಸೂರು ವಿವಿಯರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸಾದಿ ಮಾತನಾಡಿ, ಜಾತಿಗಳನ್ನು, ಸಮುದಾಯಗಳನ್ನು ಗುರುತಿಸಿ, ಒಳಗೊಳ್ಳಿಸಿಕೊಳ್ಳುವಿಕೆಯ ಪ್ರಕ್ರಿಯೆ ನಡೆದಾಗ ಮಾತ್ರ ಪ್ರಜಾಪ್ರಭುತ್ವದ ಆಶಯ ಪೂರ್ಣವಾಗಲಿದೆ.ಭೂಸುಧಾರಣೆ, ಜಾತಿ, ಅಸ್ಮಿತೆ, ಒಳಗೊಳ್ಳುವಿಕೆ, ಮೀಸಲಾತಿ-ಇವೆಲ್ಲವೂಅಪೂರ್ಣವಾಗಿ ಉಳಿದಿವೆ. ಸಮಾನತೆಯಿಂದ ಮಾತ್ರ ಪ್ರಜಾಪ್ರಭುತ್ವ ಉಸಿರಾಡಬಹುದು ಎಂದರು.ಬಸವಣ್ಣನವರ ಅನುಭವ ಮಂಟಪವೇ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದ ಮೊದಲ ಮನೆ. ಆದರೆ, ಪ್ರಜಾಪ್ರಭುತ್ವಕ್ಕೆ ಪರ್ಯಾಯವಾಗಿ ಹಿಂದುತ್ವವನ್ನು ಪರಿಚಯಿಸುತ್ತಿದ್ದೇವೆ. ಧಾರ್ಮಿಕ ನೆಲೆಯಲ್ಲಿ ನ್ಯಾಯ, ಕಾನೂನು, ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ. ಚುನಾವಣೆ ಪ್ರಜಾಪ್ರಭುತ್ವದ ಭಾಗವಷ್ಟೇ ಎಂದು ಎಲ್ಲರೂ ತಿಳಿಯಬೇಕು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಜಯಪ್ರಕಾಶ್ ಮಾವಿನಕುಳಿ,, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿ ಅಧ್ಯಕ್ಷ ಡಾ. ಟಿ. ಜಿ. ನಾಗಭೂಷಣ, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಸಮ್ಮೇಳನದ ಅಧ್ಯಕ್ಷ ಪ್ರೊ.ಬಸವರಾಜ ಜಿ., ಸಂಘಟನಾ ಕಾರ್ಯದರ್ಶಿ ಡಾ.ನಾಗರಾಜು ಎಂ.ಎಸ್.,ಡಾ. ಕೆ. ಸಿ. ಸುರೇಶ, ಕೋಶಾಧಿಕಾರಿ ಡಾ. ಮಂಜುನಾಥ್ ಆರ್. ಉಪಸ್ಥಿತರಿದ್ದರು.ಕೋಟ್ 1
ಚುನಾವಣೆಗಳಿಂದ ಮತದಾರ ವಿಷವಾಗುತ್ತಿದ್ದಾನೆ. ಸವಲತ್ತುಗಳ ಆಸೆಯಿಂದ ಸಮಾಜ ಭ್ರಷ್ಟವಾಗುತ್ತಿದೆ. ಅತಿಯಾಸೆಯಿಂದ ವ್ಯವಸ್ಥೆಯನ್ನು ನಾಶ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೆಟ್ಟುಕೊಟ್ಟು ಉಸಿರುಗಟ್ಟಿಸುತ್ತಿದ್ದೇವೆ. ಇವೆಲ್ಲಕ್ಕೂ ಕಾರಣ ವಿದ್ಯಾವಂತ ಅಪರಾಧಿಗಳು. ಶಿಕ್ಷಿತನಾದಷ್ಟೂ, ಸಾಕ್ಷರತೆಯ ಪ್ರಮಾಣ ಹೆಚ್ಚಾದಷ್ಟೂ ಜಾತಿವಾದಿಗಳ ಸೃಷ್ಟಿಯಾಗುತ್ತಿದೆ. ಭ್ರಷ್ಟಾಚಾರ ಪ್ರಜಾಪ್ರಭುತ್ವಕ್ಕೆ ಕೊಡಲಿಯಾಗಿದೆ. - ಜೆ.ಸಿ. ಮಾಧುಸ್ವಾಮಿ, ಮಾಜಿ ಸಚಿವಕೋಟ್ 22024 ರ ಸಮೀಕ್ಷೆಯ ಪ್ರಕಾರ 543 ಸಂಸದರಲ್ಲಿ 251 ಮಂದಿಯ ವಿರುದ್ಧ ವಿವಿಧ ಕ್ರಿಮಿನಲ್ ಮೊಕದ್ದಮೆಗಳಿವೆ. ಇವರಲ್ಲಿ 159 ಮಂದಿಯ ವಿರುದ್ಧ ಅತ್ಯಾಚಾರ, ಅಸಭ್ಯ ವರ್ತನೆ, ಕಳ್ಳತನ, ಕೊಲೆ, ಅಪಹರಣದಂತಹ ಆರೋಪಗಳಿವೆ.
2014 ರಿಂದ ಇಲ್ಲಿಯವರೆಗೂ ಸಂಸದರ ಮೇಲಿರುವ ಅಪರಾಧಗಳ ತೀವ್ರತೆ ಹೆಚ್ಚಾಗುತ್ತಲೆ ಇದೆ. ಮುಂದೊಂದು ದಿನ 543 ಕ್ರಿಮಿನಲ್ ಆರೋಪಗಳಿರುವ ಸಂಸದರನ್ನು ಆಯ್ಕೆಮಾಡಿ ಕಳುಹಿಸುವ ಪರಿಸ್ಥಿತಿ ಉಂಟಾಗಲಿದೆ. - ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ.