ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಹಕ್ಕು ಚಲಾಯಿಸಿ: ಟಿ.ಎನ್. ಇನವಳ್ಳಿ

| Published : Jan 26 2025, 01:32 AM IST

ಸಾರಾಂಶ

ಭಾರತ ವಿಶ್ವದ ದೊಡ್ಡ‌ ಪ್ರಜಾಪ್ರಭುತ್ವ ರಾಷ್ಟ್ರ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಪ್ರಮುಖವಾಗಿದ್ದು, ಚುನಾವಣೆಯಲ್ಲಿ ಆಸೆ, ಆಮಿಷಕ್ಕೊಳಗಾಗದೇ, ಜಾತಿ-ಮತ ಮರೆತು ಮತದಾನ ಹಕ್ಕು ಚಲಾಯಿಸುವುದು ಎಲ್ಲರ‌ ಕರ್ತವ್ಯವಾಗಿದೆ ಎಂದು ಪ್ರಧಾನ‌ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್. ಇನವಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಾರತ ವಿಶ್ವದ ದೊಡ್ಡ‌ ಪ್ರಜಾಪ್ರಭುತ್ವ ರಾಷ್ಟ್ರ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಪ್ರಮುಖವಾಗಿದ್ದು, ಚುನಾವಣೆಯಲ್ಲಿ ಆಸೆ, ಆಮಿಷಕ್ಕೊಳಗಾಗದೇ, ಜಾತಿ-ಮತ ಮರೆತು ಮತದಾನ ಹಕ್ಕು ಚಲಾಯಿಸುವುದು ಎಲ್ಲರ‌ ಕರ್ತವ್ಯವಾಗಿದೆ ಎಂದು ಪ್ರಧಾನ‌ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಟಿ.ಎನ್. ಇನವಳ್ಳಿ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶನಿವಾರ ಜರುಗಿದ 15ನೇ ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತಮ‌ ಆಡಳಿತ‌ ನೀಡುವ ನಾಯಕನನ್ನು ಆಯ್ಕೆ ಮಾಡುವುದು ಮತದಾರರ ಕೈಯಲ್ಲಿದೆ. ಆಸೆ, ಆಮಿಷಗಳಿಗೆ ಬಲಿಯಾಗದೆ ಅರ್ಹರಿಗೆ ಮತ‌ ಚಲಾಯಿಸುವುದು ಮತದಾರರ ಕರ್ತವ್ಯವಾಗಿದೆ. 18 ವರ್ಷ ಮೇಲ್ಪಟ್ಟವರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಸಲಹೆ ನೀಡಿದರು.ಜಿಲ್ಲಾಧಿಕಾರಿ‌ ಮೊಹಮ್ಮದ್ ರೋಷನ್ ಮಾತನಾಡಿ, ಮತದಾನ‌ ಮೂಲಭೂತ ಹಕ್ಕು ಜತೆಗೆ ಬಹುದೊಡ್ಡ ಜವಾಬ್ದಾರಿಯೂ ಆಗಿದೆ. ನಮ್ಮ‌ ಕ್ಷೇತ್ರ ಅಭಿವೃದ್ಧಿ ಹಾಗೂ ನಮಗೋಸ್ಕರ ಕಾರ್ಯ ನಿರ್ವಹಿಸುವಂತಹ ಸಮರ್ಥರನ್ನು ಆಯ್ಕೆ ಮಾಡುವುದು ಮತದಾನದ ಶಕ್ತಿಯಾಗಿದೆ. ಯುವಶಕ್ತಿ ದೇಶದ ಭವಿಷ್ಯ ನಿರ್ಮಿಸುತ್ತದೆ. ಉತ್ತಮ ದಾರಿಯಲ್ಲಿ ನಡೆಸಿದರೆ ಸದೃಢ ರಾಷ್ಟ್ರವಾಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ‌ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತೆ ಶುಭಾ ಬಿ, ಹಿರಿಯ ಅಧಿಕಾರಿ ಗೀತಾ ಕೌಲಗಿ, ಜಿಲ್ಲಾ‌ ಪಂಚಾಯತಿ ಯೋಜನಾ ನಿರ್ದೆಶಕ ರವಿ‌ ಬಂಗಾರಪ್ಪನವರ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ, ರೇಷ್ಮಾ ತಾಳಿಕೊಟಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕಾಂಬಳೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಕಾಲೇಜು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

ಯುವ‌ ಮತದಾರರಿಗೆ ಮತದಾನ ಗುರುತಿನ ಚೀಟಿ ವಿತರಿಸಲಾಯಿತು. ಮತದಾರರ ನೊಂದಣಿ‌ ಕಾರ್ಯವನ್ನು ಉತ್ತಮವಾಗಿ ಕಾರ್ಯ ನಿರ್ವಹಿಸಿದ ಬಿ.ಎಲ್.ಓ.ಗಳಿಗೆ ಹಾಗೂ ಶಾಲಾ‌ ಕಾಲೇಜು ವಿಧ್ಯಾರ್ಥಿಗಳಿಗೆಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತ ವಿಧ್ಯಾದ್ಯಾರ್ಥಿಗಳಿಗೆ ಪ್ರಮಾಣ‌ಪತ್ರ ನೀಡಿ ಗೌರವಿಸಲಾಯಿತು. ನಾ ಭಾರತ ಎಂಬ ಕಿರುಚಿತ್ರ ಪ್ರದರ್ಶನ ಹಾಗೂ ಮತದಾರ ದಿನ ಪ್ರತಿಜ್ಞಾವಿಧಿ ಬೋಧಿಸಲಾಯಿತು.