ಚುನಾವಣೆಗಳಲ್ಲಿ ವಿವೇಚನೆಯಿಂದ ಮತ ಚಲಾಯಿಸಿ

| Published : Mar 31 2024, 02:00 AM IST

ಸಾರಾಂಶ

ಚುನಾವಣೆಗೂ, ಮಹಿಳೆಗೂ ನಂಟಿದೆ. 18 ವರ್ಷ ಮೇಲ್ಪಟ್ಟವರೂ ಮತದಾನ ಮಾಡುವ ಅರ್ಹತೆ ಹೊಂದಿರುತ್ತಾರೆ. ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದೆ. ಈ ಹಿನ್ನೆಲೆ ಮತದಾನ ಮಾಡುವುದಕ್ಕೂ ಮುನ್ನ ವಿಚಾರ, ವಿಮರ್ಶೆ ಮಾಡಿದ ಬಳಿಕ ಮತ ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಚುನಾವಣೆಗೂ, ಮಹಿಳೆಗೂ ನಂಟಿದೆ. 18 ವರ್ಷ ಮೇಲ್ಪಟ್ಟವರೂ ಮತದಾನ ಮಾಡುವ ಅರ್ಹತೆ ಹೊಂದಿರುತ್ತಾರೆ. ಪ್ರತಿಯೊಂದು ಮತವೂ ಅತ್ಯಮೂಲ್ಯವಾಗಿದೆ. ಈ ಹಿನ್ನೆಲೆ ಮತದಾನ ಮಾಡುವುದಕ್ಕೂ ಮುನ್ನ ವಿಚಾರ, ವಿಮರ್ಶೆ ಮಾಡಿದ ಬಳಿಕ ಮತ ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಗೌತಮ್ ಫೌಂಡೇಶನ್ ಸಾಮಾಜಿಕ ಸೇವಾ ಸಂಸ್ಥೆ, ವಿಮೋಚನಾ ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ದುರ್ಗಾ ಸಹಕಾರ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಜಾಗೃತಿ ಹಾಗೂ ಅಂತರ ರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಜಾತಿ, ಮತ, ಪಂಗಡ, ಆಮಿಷಗಳೆಂಬ ದುಷ್ಟಶಕ್ತಿಗಳು ನೆಲೆಯೂರಿವೆ. ಇವುಗಳಿಗೆ ಬಲಿಯಾಗದೇ, ಗುರುತರ ಜವಾಬ್ದಾರಿಯಿಂದ ಮತ ಚಲಾಯಿಸಬೇಕು ಎಂದರು.

ನಿವೃತ್ತ ಎಸ್‌ಪಿ ರವಿ ನಾರಾಯಣ್ ಮಾತನಾಡಿ, ಮತದಾನ ಮಾರಾಟಕ್ಕಿಲ್ಲ. ಆದರೆ, ಚುನಾಯಿತ ಪ್ರತಿನಿಧಿಗಳು ಮಾರಾಟಕ್ಕೆ ಇರುವುದು ದುರದುಷ್ಟಕರ. ಇಂದಿನ ದಿನಗಳಲ್ಲಿ ಕೊಳೆಗೇರಿಯಲ್ಲಿ ವಾಸಿಸುವವರೇ ಹೆಚ್ಚಾಗಿ ಮತದಾನ ಮಾಡುತ್ತಿದ್ದು, ವಿದ್ಯಾವಂತರು ಮತದಾನದಿಂದ ದೂರ ಉಳಿಯುತ್ತಿದ್ದಾರೆ. ಚುನಾವಣೆ ಬಂದಾಗ ಎಲ್ಲ ರಾಜಕಾರಣಿಗಳು ಆಮಿಷ ತೋರಿಸುತ್ತಾರೆ. ಆದರೆ, ಮತದಾರರು ಅದಕ್ಕೆ ಬಲಿಯಾಗಬಾರದು. ನಮ್ಮ ಮತದಾನ ಮಾರಾಟಕ್ಕಿಲ್ಲ ಎಂದು ಹೇಳಬೇಕು. ಅವಿದ್ಯಾವಂತರೇ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇರುವವರಲ್ಲಿ ಉತ್ತಮರನ್ನು ಆಯ್ಕೆ ಮಾಡಬೇಕು. ನಮ್ಮನ್ನು ಆಳುವವರಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಯಾಗಬೇಕು ಎಂದು ತಿಳಿಸಿದರು.

ಗೌತಮ್ ಫೌಂಡೇಶನ್ ನಿರ್ದೇಶಕ ದುರುಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್‌ಐ ಜಯಶೀಲಾ, ಸಂಕಲ್ಪ ಸ್ವಯಂ ಸೇವಾ ಸಂಸ್ಥೆಯ ಸುರೇಶ್, ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ರಾಜು ಪಾಟೀಲ್, ವಿಮುಕ್ತಿ ವಿದ್ಯಾಸಂಸ್ಥೆ ಅಧ್ಯಕ್ಷೆ ಅನ್ನಪೂರ್ಣಮ್ಮ, ಸುನಂದಾ, ನೇತ್ರಾವತಿ ಇತರರು ಇದ್ದರು.

- - - -30ಕೆಡಿವಿಜಿ39ಃ:

ದಾವಣಗೆರೆಯಲ್ಲಿ ಗೌತಮ್ ಫೌಂಡೇಶನ್ ಸಾಮಾಜಿಕ ಸೇವಾ ಸಂಸ್ಥೆಯಿಂದ ನಡೆದ ಮತದಾರರಿಗೆ ಜಾಗೃತಿ ಹಾಗೂ ಮಹಿಳಾ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಉದ್ಘಾಟಿಸಿದರು.